ಎಲ್ಲ ಇದ್ದರೂ ಏನೂ ಇಲ್ಲದವರು!
ಗುಲ್ಬರ್ಗ: `ಒಂದು ಬೀಡಿ ಕೊಡ್ರೀ ...' ಧ್ವನಿ ಬಂದ ಕಡೆಗೆ ನೋಡಿದರೆ ಬದುಕಿನ ಶೂನ್ಯತೆಗೆ ಕೈಕಾಲು ಜೋಡಿಸಿದಂತಿದ್ದ ಅಜ್ಜ ದೈನ್ಯತೆಯಿಂದ ದೃಷ್ಟಿನೆಟ್ಟಿದ್ದ.
ಹೊರಗಡೆ `ಧೋ..' ಎಂದು ಮಳೆ ಸುರಿಯುತ್ತಿತ್ತು. ಚಳಿಗಾಳಿಯೂ ಮೈ ನಡುಗಿಸುತಿತ್ತು. ಅಜ್ಜನ ಮುಖದಲ್ಲಿ ಭೀಮೆ-ಕೃಷ್ಣೆಯರು ಹರಿದು ಒಣಗಿದಂತಿದ್ದ ಸುಕ್ಕುಗಳು ಆತ ಅನುಭವಿಸಿದ ಸಂಕಷ್ಟಗಳ ಸರಮಾಲೆಯನ್ನೇ ಅನಾವರಣಗೊಳಿಸುತ್ತಿದ್ದುವು.
ಅಲ್ಲಿ ಅಮಲು-ಬೀಡಿ ಇತ್ಯಾದಿಗಳೆಲ್ಲ ನಿಷಿದ್ಧ. ಆದರೂ ಇನ್ನೊಬ್ಬ ತಾತ ಕಾವಲುಗಾರರ ಕಣ್ಣುತಪ್ಪಿಸಿ ಮೋಟು ಬೀಡಿಗೆ ಬೆಂಕಿ ಹಚ್ಚಿ ದಮ್ ಬಿಟ್ಟಿದ್ದ! ಏನೂ ಇಲ್ಲದವರನ್ನು ಕರೆತಂದು ಇಲ್ಲಿ ಎಲ್ಲವನ್ನೂ ಕೊಟ್ಟಿದ್ದರೂ ಇಲ್ಲದಿರುವ ಏನಕ್ಕೋ ಅಲ್ಲಿದ್ದ ಮನಸ್ಸುಗಳು ತಹತಹಿಸುತ್ತಿದ್ದವು. -ಹೌದು. ಇದು ನಗರದಲ್ಲಿರುವ `ಗುಲ್ಬರ್ಗ ನಿರಾಶ್ರಿತರ ಪರಿಹಾರ ಕೇಂದ್ರ (ಎನ್ಪಿಕೆ)ದಲ್ಲಿನ ನಿವಾಸಿಗಳ ಸ್ಥಿತಿ.
ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಿದ್ದಾಪುರ ರೈಲ್ವೆ ಕ್ರಾಸ್ ದಾಟಿ ಹೈಕೋರ್ಟ್ ಸಂಚಾರ ಪೀಠದ ಕಡೆಗೆ ಸಾಗುವ ಮಧ್ಯೆ `ಎನ್ಪಿಕೆ' ಸಿಗುತ್ತದೆ. ಹೈದರಾಬಾದ್ ಪ್ರದೇಶದ ಜಿಲ್ಲೆಗಳು, ಬೆಂಗಳೂರು, ಆಂಧ್ರಪ್ರದೇಶ, ಉತ್ತರಪ್ರದೇಶ... ಹೀಗೆ ಹಲವು ಊರು, ಹಲವು ಭಾಷೆಯ ಜನ. ಇಲ್ಲಿ 38 ಮಂದಿ ನಿರಾಶ್ರಿತರಿದ್ದಾರೆ. ಇವರಲ್ಲಿ ಏಳೆಂಟು ಮಂದಿ ಮಹಿಳೆಯರು, ಅಜ್ಜಿಯರು. ಬದುಕಿನ ಕಹಿ ಅನುಭವಗಳ ಗಂಟನ್ನೇ ಸುತ್ತಿ ತಲೆದಿಂಬು ಮಾಡಿ ಮಲಗಿದ್ದರು. ಇವರಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕಥೆ.
ಇವರಿಗೆ ಕ್ಯಾಲೆಂಡರ್ಗಳಿಲ್ಲ. ಕ್ಯಾಲೆಂಡರ್ಗಳಿದ್ದರೂ ಗೋಡೆಗಳಿಲ್ಲ. ಕ್ಯಾಲೆಂಡರ್-ಅಲಾರಾಂ ಇರಿಸಿ ಬದುಕು ನಡೆಸುವ ವಿಧಾನ ಇವರದ್ದಲ್ಲ. ರೈಲು-ಬಸ್ ನಿಲ್ದಾಣಗಳಲ್ಲಿ ಸೊಳ್ಳೆ ನೊಣಗಳೊಂದಿಗೆ ಯುದ್ಧ ಮಾಡುತ್ತಾ, ಹಸಿವು ಕಾಡಿದಾಗ ಯಾರೋ ಎಸೆದ ಅರೆ ಕೊಳೆತ ಹಣ್ಣು, ರೊಟ್ಟಿ, ಅನ್ನಕ್ಕಾಗಿ ತಿಪ್ಪೆ ಕೆದಕುತ್ತಾ, ಭಿಕ್ಷೆಗಾಗಿ ಕೈ ಚಾಚುತ್ತಾ ದಿನರಾತ್ರಿಗಳನ್ನು ಒಗ್ಗೂಡಿಸಿ ಬದುಕು ಸಾಗಿಸಿದವರು. ಬೀದಿಯ ಕತ್ತಲಲ್ಲಿ ಯಾರದೋ ದೇಹದಾಹಕ್ಕೆ ಬಲಿಯಾದ ಮಹಿಳೆಯರೂ ಇದ್ದಾರೆ. ಇವರಲ್ಲಿ ಹಲವರು ನಿರಾಶ್ರಿತರ ಕೇಂದ್ರಕ್ಕೆ ಒಗ್ಗಿಕೊಂಡಿಲ್ಲ. ಹೊರ ಹೋಗುವ ತವಕ. ಮತ್ತೆ ಅದೇ ` ಹಳೆ ಕಸುಬು' ನಡೆಸುವ ಹಂಬಲ ಕೆಲವರಲ್ಲಿದೆ.
ಎಲ್ಲರೂ ಅಲ್ಲ: ಇಲ್ಲಿರುವ ಎಲ್ಲರೂ ನಿರ್ಗತಿಕರಲ್ಲ. ಕೆಲವರಿಗೆ ಬೆಂಗಳೂರಿನಲ್ಲಿ ನೌಕರಿ ಮಾಡುವ ಮಕ್ಕಳಿದ್ದಾರಂತೆ. ಕೆಲವರ ಮನೆಯವರು ಸ್ಥಿತಿವಂತರಾಗಿದ್ದರೂ ವೃದ್ಧಾಪ್ಯದಲ್ಲಿರುವ ಇವರ ಆರೈಕೆ ಮಾಡಲು ಮನಸ್ಸಿಲ್ಲದೆ ಮತ್ತೆ ಇಲ್ಲಿ ತಂದು ಬಿಟ್ಟಿದ್ದಾರೆ.
ಇನ್ನು ಕೆಲವರು `ನಾನು ಮಂದಿರದ ಪೂಜಾರಿ ಕಣ್ರೀ, ಈತ ದರ್ಗಾದ ಖಾದ್ರಿ. ಅಲ್ಲಿದ್ದಾಗ ಹಿಡ್ಕೊಂಡು ಬಂದಾರ್ರೀ....' ಅಂತ ಹೇಳಿದರೆ, ಮತ್ತೊಬ್ಬಾಕೆ `ನಾನು ಬೆಂಗ್ಳೂರ್ನಾಗೆ ಮೆಜೆಸ್ಟಿಕ್ ಬಳಿಯ ಹೋಟೆಲಲ್ಲಿ ಕೆಲ್ಸಕ್ಕಿದೆ, ನೈಟ್ಡ್ಯೂಟಿ- ಓ.ಟಿ. ಎಲ್ಲ ಮಾಡಿ ದಿನಾ ಐದ್ನೂರು ರೂಪಾಯಿ ಗಳಿಸ್ತಿದ್ದೆ. ಯಾರೋ ಒಬ್ಬ ಹೈದ್ರಾಬಾದ್ಗೆ ಅಂತ ನಂಬಿಸಿ ಕರ್ಕೊಂಡು ಬಂದು ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಬಿಟ್ಹಾಕಿ ಹೋದ'... ಇನ್ನೂ ಇದೆ, ಇಂಥ ಹಿನ್ನೆಲೆಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.