ವಾಂತಿ ಭೇದಿ: ಜನರ ಆತಂಕ
ಚಿತ್ತಾಪುರ: ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಹಲವರಿಗೆ ವಾಂತಿ ಭೇದಿ ಉಂಟಾಗಿ ತೀವ್ರ ಅಸ್ವಸ್ಥರಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ವಾಂತಿ ಭೇದಿಯಿಂದ ನರಳುತ್ತಿದ್ದವರನ್ನು ಅಲ್ಲೂರ್ (ಕೆ) ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಮಂಗಳವಾರ ಶುರುವಾಗಿದ್ದ ವಾಂತಿ ಭೇದಿ ಗ್ರಾಮದ 14 ಜನರಿಗೆ ಕಾಣಿಸಿಕೊಂಡು ಬುಧವಾರ ಅದರ ತೀವ್ರತೆ ಹೆಚ್ಚಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಸರಿಯಾದ ವ್ಯವಸ್ಥೆ ಇರದ ಪರಿಣಾಮ ಅನೇಕರು ಸಮೀಪದ ಯಾದಗಿರಿ ಮತ್ತು ಚಿತ್ತಾಪುರ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ.
ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದ ಗ್ರಾಮದ ಬಾಬು ಚವ್ಹಾಣ್, ದೇವಾನಂದ ಚೋಕ್ಲಾ, ಭೀಮರಾಯ ಹಡಪದ, ಶಿವಕಾಂತಮ್ಮ, ಥಾವರೂ ಗಡ್ಡಿಮನಿ, ಪೀರಮ್ಮ, ಸೋನಿಬಾಯಿ, ಹಸೀನಾ ಬೇಗಂ, ಶರಣಪ್ಪ ಶಾಸ್ತ್ರೀ, ರಾಜಮ್ಮ, ಗೀತಾ, ಪರೀಜಾ ಮುಂತಾದವರು ಅಲ್ಲೂರ್(ಕೆ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ರಾಮತೀರ್ಥ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಜನರಿಗೆ ವಾಂತಿ ಭೇದಿಯುಂಟಾಗಿದೆ. ಜನರು ವಾಂತಿ ಭೇದಿಯಿಂದ ನರಳುತ್ತಿದ್ದಾರೆ. ಅದನ್ನು ತಡೆಯಲು ಆರೋಗ್ಯ ಇಲಾಖೆಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಮದಲ್ಲಿ ಗುರುವಾರ ವಾಂತಿ ಭೇದಿ ಹತೋಟಿಗೆ ಬಂದಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ಕುಡಿವ ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಬೆರೆಸಲಾಗಿದೆ. ನೀರು ಶುದ್ಧವಾಗುವವರೆಗೆ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವಂತೆ ಜನರಿಗೆ ಮಾಹಿತಿ ನೀಡಲಾಗಿದೆ.
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ವಾಂತಿ ಭೇದಿ ನಿಯಂತ್ರಣ ಜಿಲ್ಲಾ ಡ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಜನರು ಬಳಸುತ್ತಿರುವ ನೀರನ್ನು ಪರೀಕ್ಷಿಸಲು ನೀರಿನ ಮಾದರಿ ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾನಕರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.