ಸೋಮವಾರ, ಆಗಸ್ಟ್ 19, 2019
22 °C
ಸಚಿವರ ಹೆಸರಲ್ಲಿ ಐಜಿಗೆ ನಕಲಿ ಕರೆ

ವಕೀಲ ಆರೀಫ್ ಕಾಡ್ಲೂರ್ ಬಂಧನ

Published:
Updated:

ಗುಲ್ಬರ್ಗ:  ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಎಂದು ಸುಳ್ಳು ಪರಿಚಯ ಹೇಳಿಕೊಂಡು ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿ) ಮಹಮ್ಮದ್ ವಜೀರ ಅಹ್ಮದ್ ಅವರಿಗೆ ಕರೆ ಮಾಡಿದ ಆರೋಪಿಯನ್ನು  ಬುಧವಾರ ಬಂಧಿಸುವಲ್ಲಿ ಬ್ರಹ್ಮಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ವೆಂಕಟೇಶ ನಗರ ನೋಬೆಲ್ ಶಾಲೆ ಸಮೀಪದ ವಕೀಲ ಆರೀಫ್ ಕಾಡ್ಲೂರ್ ಬಂಧಿತ. ಈತ ಸಚಿವರ ಹೆಸರಿನಲ್ಲಿ ಮಂಗಳವಾರ ಕರೆ ಮಾಡಿ, ಸಬ್‌ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರದ ಬಗ್ಗೆ ಚರ್ಚೆ ಮಾಡಿದ್ದ. ಆದರೆ ಈ ಕರೆ ಸ್ವೀಕರಿಸುವ ಮೊದಲು ಪೊಲೀಸ್ ಮಹಾನಿರೀಕ್ಷಕರು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದರು. ಹೀಗಾಗಿ ಐಜಿ ಅವರಿಗೆ ಸಚಿವರ ಧ್ವನಿ ಹಾಗೂ ನಂತರ ಮಾತನಾಡಿದ         (ಆರೀಫ್) ಧ್ವನಿಯಲ್ಲಿ ವ್ಯತ್ಯಾಸ ಕಂಡು ಬಂದಿತು. ತಕ್ಷಣವೇ ಸಚಿವರ ಆಪ್ತ ಸಹಾಯಕರಿಗೆ ಕರೆ ಮಾಡಿ ವಿಚಾರಿಸಿದರು. `ಸಚಿವರು ಕರೆ ಮಾಡಿಲ್ಲ. ಆ ಮೊಬೈಲ್ ಸಂಖ್ಯೆ ಸಚಿವರದಲ್ಲ' ಎಂದು ಆಪ್ತ ಸಹಾಯಕರು ತಿಳಿಸಿದ್ದಾರೆ. ಈ ಸಂಬಂಧ ಐಜಿ ಅವರು ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಬ್ರಹ್ಮಪುರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶರಣಬಸವ ಭಜಂತ್ರಿ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಯಾಕೂಬ್ ಹಾಗೂ ಧರ್ಮು ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Post Comments (+)