ಬುಧವಾರ, ಜನವರಿ 22, 2020
24 °C

ಮತ್ತೆ ಬಂದ ಚಳಿಯ ಮಾಯೆ

ಪ್ರಜಾವಾಣಿ ವಾರ್ತೆ/ ಹರ್ಷವರ್ಧನ ಪಿ.ಆರ್‌ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಬೇಸಿಗೆಯಲ್ಲಿ ಗರಿಷ್ಠ ತಾಪ­ಮಾನ­ದಿಂದ ಸುದ್ದಿ ಮಾಡುವ ಗುಲ್‌ ಮೊಹರ್‌ ನಗರವು ಡಿಸೆಂಬರ್ ಚಳಿ­ಯಿಂದ ನಡುಕ ಹುಟ್ಟಿಸುತ್ತದೆ. ನವೆಂ­ಬರ್‌ ಅಂತ್ಯದಿಂದ ಮಕರ ಸಂಕ್ರಾತಿ (ಜನವರಿ14)ರ ತನಕ ಇರುವ ಚಳಿ, ತನ್ನ ಪ್ರತಾಪ ಮೆರೆಯುವುದು ಡಿಸೆಂ­ಬರ್‌ ಅಂತ್ಯದಲ್ಲಿ. ಈಗಾಗಲೇ ಆರ್ಭಟ ಆರಂಭಿಸಿದೆ.ಮಧ್ಯಾಹ್ನ ಸೂರ್ಯ ನೆತ್ತಿಮೇಲೆ (ನೇರ ಕಿರಣಗಳು) ಬಂದರೂ ಮನೆ­ಯೊ­­ಳಗೆ ಗಡಗಡ ಚಳಿ. ಮರಗಳು ಹೆಚ್ಚಿರುವ ಹಾಗೂ ಗ್ರಾಮೀಣ ಪ್ರದೇಶ­ದಲ್ಲಿ ಇನ್ನೂ ಹೆಚ್ಚು. ನಗರ ಹೊರವಲ­ಯದಲ್ಲಿ ಇನ್ನಷ್ಟು ಶೀತಮಯ. ಸೂರ್ಯಾಸ್ತ ಆಗುತ್ತಿದ್ದಂತೆಯೇ ನಡು­ಗು­ತ್ತಲೇ ಮನೆ ಸೇರುತ್ತಾರೆ. ಕಿವಿ ಮುಚ್ಚುವ ಗವಸು, ಅಂಗಿ– ಪಂಚೆ– ಜುಬ್ಬಾದ ಮೇಲೆ ಆವರಿಸುವ ಸ್ವೆಟರ್, ತಲೆ ಮೇಲೆರುವ ಸೆರಗು, ಕೈಗೊಂದು ಕವರ್, ಕಾಲಿಗೂ ಸಾಕ್ಸ್ ಹೀಗೆ ಪೂರ್ತಿ ದೇಹಕ್ಕೆ ಬಟ್ಟೆ ಆವರಿಸುತ್ತದೆ. ಕತ್ತಲೆ­ಯಾಗುತ್ತಲೇ ರಸ್ತೆಗಳೂ, ಬೆಳಿಗ್ಗೆ ವಾಕಿಂಗ್ ಹೋಗುವ ಹಾದಿಗಳೆಲ್ಲ  ಬಿಕೋ. ಅಲ್ಲಲ್ಲಿ ಬೆಂಕಿ ಹಾಕಿ ಬೆಚ್ಚಾಗಾ­ಗಿಸುವ ಯತ್ನ. ಸ್ವೆಟರ್: ಚಳಿ ಬಂದಾಗ ನೆನಪಾಗು­ವುದು ನಗರದ ಸೂಪರ್‌ಮಾರ್ಕೆಟ್‌ನ ಪಾನಿಪುರಿ ಗಾಡಿಗಳ ಸಾಲಿನಲ್ಲಿರುವ ಬರುವ ಸ್ವೆಟರ್‌ ವ್ಯಾಪಾರ. ಹುಬ್ಬಳ್ಳಿಯ ಮುಂಡಗೋಡು ಮತ್ತು ಕುಶಾಲ­ನಗರದ ಬೈಲಕೊಪ್ಪದ ಟಿಬೆಟನ್ನರು ನಾಲ್ಕೈದು ದಶಕದಿಂದ ಇಲ್ಲಿ ಬಂದು ವ್ಯಾಪಾರ ಮಾಡುತ್ತಿ­ದ್ದಾರೆ. ಜುಲೈ ಆರಂಭದಲ್ಲಿ ಬರುವ ಅವರು ಫೆಬ್ರುವರಿ ತನಕ ಇರುತ್ತಾರೆ.ಈ ಬಾರಿಯೂ ಆರು ಕುಟುಂಬ­ಗಳು ಬಂದಿದ್ದು, 12 ಅಂಗಡಿಗಳನ್ನು ಹಾಕಿದ್ದಾರೆ. ಸುಮಾರು 30 ಮಂದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿ­ದ್ದಾರೆ. ಪಂಜಾಬ್‌ನ ಲೂಧಿಯಾನದ ಕಾರ್ಖಾ­ನೆ­­ಗಳಿಂದ ಸ್ವೆಟರ್‌ ತರುತ್ತಾರೆ. ಇಲ್ಲಿ ಸುಮಾರು ₨150ಯಿಂದ ₨ 600 ರತನಕದ ವಿವಿಧ ಸ್ವೆಟರ್‌ಗಳಿವೆ.ವಿವಿಧ ಶೈಲಿಯ ಸ್ವೆಟರ್‌, ಕೈಗವಸು, ಶಲ್ಯ, ಮಂಕಿ ಕ್ಯಾಪ್‌, ಟೊಪ್ಪಿಗಳು ಹಲವು ಬಣ್ಣಗಳಲ್ಲಿ ಲಭ್ಯ. ಫೆದರ್‌ ವೂಲ್, ಕಾಶ್ಮೀರಿ ವೂಲ್, ಸ್ಕೈಬ್ಲಾಕ್ ವೂಲ್‌, ಪೌಲೋ ವೆಲ್ವೆಟ್‌, ಕಾಮನ್‌ ವೆಲ್ವೆಟ್, ಸಿಂಥೆಟಿಕ್‌ ಮೆಟೀರಿಯಲ್‌ ಮತ್ತಿತರ ಮಾದರಿಯ ಸ್ವೆಟರ್‌ಗಳು ಮಾರಾ­ಟಕ್ಕಿವೆ.‘ಈ ಬಾರಿ ಚಂಡಮಾರುತ ಪರಿ­ಣಾಮ ಇಲ್ಲಿ ಮಳೆ ಬಂದು ಕೊಂಚ ಚಳಿ ಕಡಿಮೆಯಾಯಿತು.ಹೀಗಾಗಿ ವ್ಯಾಪಾರ ಏರುಪೇರಾಯಿತು. ಚಳಿ ಹೆಚ್ಚಾದಂತೆ ನಮ್ಮ ವ್ಯಾಪಾರ ಹೆಚ್ಚಾ­ಗುತ್ತದೆ. ನಮ್ಮದು ಹವಾಮಾನ ಆಧರಿತ ವ್ಯಾಪಾರ’ ಎನ್ನುತ್ತಾರೆ ಕುಶಾಲನಗರ ಬೈಲಕೊಪ್ಪದ ರಣಜಿತ್‌.‘ನಾನು ಚಿಕ್ಕ­ವನಿ­ದ್ದಾಗ ತಂದೆ ಜೊತೆಯೇ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಿದೆ. ಹಿಂದೆ ಜನತಾ ಬಜಾರ್‌­ನಲ್ಲಿ ನಮಗೆ ಸ್ಥಳಾವಕಾಶ ನೀಡಲಾಗಿತ್ತು. ಬೇಸಿಗೆ ಆರಂಭ­ವಾಗು­ತ್ತಲೇ ಮತ್ತೆ ನಮ್ಮ ಊರಿಗೆ ಹೋಗಿ ಕೃಷಿ ಮಾಡುತ್ತೇವೆ’         ಎಂದರು.1945ರ ಡಿಸೆಂಬರ್ 18ರಂದು ದಾಖಲಾದ 5.6 ಡಿಗ್ರಿ ತಾಪಮಾನ ಈವರೆಗೆ ದಾಖಲಾದ ಕನಿಷ್ಠ ತಾಪಮಾನ ಎನ್ನಲಾಗಿದೆ.

ಚಳಿ ಹೀಗಿದೆ:

ಬರದ ಬೆನ್ನಿಗೇ 2009ರ ನೆರೆ, 2010ರಲ್ಲಿ ಅತ್ಯಧಿಕ ಹಾಗೂ ಅತೀ ಕಡಿಮೆ ತಾಪಮಾನಗಳ ಮೂಲಕ ಗುಲ್ಬರ್ಗದಲ್ಲಿ ಪ್ರತಾಪ ತೋರಿದ ಹವಾಮಾನವು 2011, 2012ರಲ್ಲಿ ಕೊನೆಯಲ್ಲಿ ಚಳಿಯಿಂದ ಆವರಿಸಿತು. 2010ರ ಡಿ.21ರಂದು 7.9ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2005 ಡಿಸೆಂಬರ್ 27ರಂದು 7 ಡಿಗ್ರಿ ಹಾಗೂ 2000 ಡಿಸೆಂಬರ್ 5ರಂದು 6.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಬಾರಿ 10 ಡಿಗ್ರಿಯ ಆಸುಪಾಸಿನಲ್ಲಿದೆ. 1945ರ ಡಿಸೆಂಬರ್ 18ರಂದು ದಾಖಲಾದ 5.6 ಡಿಗ್ರಿ ತಾಪಮಾನ ಈವರೆಗೆ ದಾಖಲಾದ ಕನಿಷ್ಠ ತಾಪಮಾನ ಎನ್ನಲಾಗಿದೆ.

ಅತಿ ಬಿಸಿಯೂ ಉತ್ತಮವಲ್ಲ....

‘ಸ್ನಾನಕ್ಕೆ ಅತಿ ಬಿಸಿ ನೀರು ಬಳಸಬಾರದು. ಉಗುರು ಬಿಸಿ ಸಾಕು. ಚರ್ಮಕ್ಕೆ ಕೊಬ್ಬರಿ ಎಣ್ಣೆ, ಬೆಣ್ಣೆ  ಲೇಪಿಸಬಹುದು. ದಿನಕ್ಕೆ ಕನಿಷ್ಠ 3 ಲೀಟರ್‌ ನೀರು ಕುಡಿಯಬೇಕು. ಅತಿ ಬಿಸಿ, ಶಿಥಿಲ (ಕೋಲ್ಡ್‌) ಆಹಾರ ಉತ್ತಮವಲ್ಲ. ಜೀರ್ಣ ಕ್ರಿಯೆ ನಿಧಾನ ಇರುವ ಕಾರಣ ಪ್ರೊಟೀನ್‌ ಹೆಚ್ಚಿರುವ ಆಹಾರ, ತರಕಾರಿ, ಮೊಳಕೆಕಾಳು, ಮೀನು, ಚಪಾತಿ ಮತ್ತಿತರ ಆಹಾರ ಪದಾರ್ಥಗಳು ಉತ್ತಮ. ದೇಹವನ್ನು ಬಿಸಿ ಮಾಡಲು ಮದ್ಯ, ಖಾರ, ಅತಿ ಬಿಸಿ, ಆಗ್ಗಾಗ್ಗೆ ಚಹಾ, ಕಾಫಿ ಬಳಕೆ ಮಾಡುವುದು ಹಾನಿಕಾರಕ.  ಪಾದಗಳನ್ನು ರಕ್ಷಿಸಲು ಮನೆಯಲ್ಲಿಯೂ ಚಪ್ಪಲಿ ಬಳಸಿ, ಕಿವಿಗಳಿಗೆ ಹತ್ತಿ ಇಟ್ಟು ಮಲಗಿಕೊಳ್ಳಿ’

–ಡಾ. ಶರಣ ಕಂಠಿ, ನಂದಿ ಹೋಮಿಯೋಪಥಿ ಕ್ಲಿನಿಕ್‌  

‘ಕೆಲವು ದಶಕದಿಂದ ಸ್ವೆಟರ್ ಖರೀದಿ’

ಕೆಲವು ದಶಕಗಳಿಂದ ನಾವು ಟಿಬೆಟಿಯರನ್‌ರ ಬಳಿ ಸ್ವೆಟರ್‌್ ಖರೀದಿಸುತ್ತಿದ್ದೇವೆ. ನಾನು ಚಿಕ್ಕವನಿದ್ದಾಗ ಅಪ್ಪ ಇಲ್ಲಿಂದ ಖರೀದಿಸಿ ಕೊಡುತ್ತಿದ್ದರು. ಈಗ ನಾನು ನಮ್ಮ ಮನೆಯ ಮಕ್ಕಳಿಗೆ ಇಲ್ಲಿಯೇ ಖರೀದಿಸುತ್ತಿದ್ದೇನೆ. ನಮಗೆ  ಬೇಕಾದ ಅಳತೆಯ ಸ್ವೆಟರ್‌ಗಳು ಇಲ್ಲಿ ಲಭ್ಯ. ಶೋ ರೂಮ್‌ಗಳಿಗಿಂತ ಸುಮಾರು ಅರ್ಧ ಪಟ್ಟು ಕಡಿಮೆ ದರದಲ್ಲಿ ದೊರೆಯುತ್ತಿದೆ.’

–ಮಹ್ಮದ್‌ ಅಸ್ಲಾಂ, ಸಿವಿಲ್‌ ಎಂಜಿನಿಯರ್‌ ಮತ್ತು ಗುತ್ತಿಗೆದಾರರು

ಪ್ರತಿಕ್ರಿಯಿಸಿ (+)