ಬುಧವಾರ, ಜನವರಿ 22, 2020
22 °C

ಸಮಯಪ್ರಜ್ಞೆ ಇರಲಿ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ‘ಜೀವನದಲ್ಲಿ ಕಳೆದು­ಕೊಂಡ ಎಲ್ಲವನ್ನೂ ಮತ್ತೆ ಪಡೆಯ­ಬಹುದು. ಆದರೆ, ಸಮಯ ಕಳೆದು ಹೋದರೆ ಮತ್ತೆ ಬರುವುದಿಲ್ಲ. ಆದ್ದ­ರಿಂದ ಸಮಯ ವ್ಯರ್ಥ ಮಾಡದೇ ಗುರಿ­ಯತ್ತ ಸಾಗಬೇಕು’ ಎಂದು ರ್‍್ಯಾಂಕ್‌ ಸ್ಟೂಡೆಂಟ್‌ಡಾಟ್‌ ಕಾಮ್‌ನ ಮುಖ್ಯ ಸಂಚಾಲಕ ಡಾ.ನಜೀರ್‌ ಅಹ್ಮದ್‌ ಹೇಳಿದರು.ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಎರಡು ದಿನಗಳ ‘ಅಂತರ ಕಾಲೇಜು ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.‘ಅಮೆರಿಕಾ, ಜಪಾನ್, ಚೀನಾ ಮತ್ತು ಇಂಗ್ಲೆಂಡ್ ದೇಶಗಳು ಸಮಯ ಮತ್ತು ಗುಣಮಟ್ಟದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ಹೀಗಾಗಿ, ಅಭಿವೃದ್ಧಿ ವಿಷಯದಲ್ಲಿ ಆ ದೇಶಗಳು ಮುಂದುವರಿದಿವೆ. ಯಾವುದೇ ಒಂದು ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕು ಎಂದಾದರೆ ಗುಣಮಟ್ಟ ಬಹಳ ಮುಖ್ಯ­ವಾಗುತ್ತದೆ. ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯವಾಗುತ್ತದೆ.ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಮಾಡಬೇಕು’ ಎಂದು ಹೇಳಿದರು.‘ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸ­ದತ್ತ ಗಮನ ಹರಿಸಬೇಕು. ಶಿಕ್ಷಕರು ಮತ್ತು ಪೋಷಕರನ್ನು ಗೌರವಿಸಬೇಕು. ಪ್ರತಿಯೊಬ್ಬರೂ ತಮ್ಮ ಇತಿಮಿತಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡು ಗುರಿಯತ್ತ ಸಾಗಬೇಕು. ಉನ್ನತ ಶಿಕ್ಷಣ ಎಂದರೆ ಕೇವಲ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಮಾತ್ರ ಎಂಬ ತಪ್ಪು ಕಲ್ಪನೆ ಸರಿಯಲ್ಲ. ಮೂಲ ವಿಜ್ಞಾನದಲ್ಲಿ ಅಧ್ಯಯನ, ಸಂಶೋಧನೆ ಮುಂದುವರಿಸಿದರೆ ಜಗತ್ತಿನ ಶ್ರೇಷ್ಠ ವಿಜ್ಞಾನಿಯಾಗ­ಬಹುದು. ಪೋಷಕರು ಹಾಗೂ ವಿದ್ಯಾರ್ಥಿ­ಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.ಪ್ರಾಂಶುಪಾಲ ಎನ್‌.ಎಸ್‌.­ದೇವರ­ಕಲ್‌ ಮಾತನಾಡಿ, ‘ಅಂತರ ಕಾಲೇಜು ಉತ್ಸವವನ್ನು ಈ ಮೊದಲು ಜಿಲ್ಲಾ­ಡಳಿತ ನಡೆಸುತ್ತಿತ್ತು.

ಆದರೆ, ಕೆಲವು ವರ್ಷಗಳಿಂದ ಅದನ್ನು ಕೈಬಿಡಲಾಗಿತ್ತು. ಹೀಗಾಗಿ ಶರಣ­ಬಸ­ವೇಶ್ವರ ಸಂಸ್ಥಾನದ ಪೀಠಾಧಿ­ಪತಿ ಶರಣ­ಬಸವಪ್ಪ ಅಪ್ಪ ಮತ್ತೆ ಚಾಲನೆ ನೀಡಿದರು. ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಕಾಲೇಜು­ಗಳು ಭಾಗವಹಿಸಿವೆ. ಸ್ಪರ್ಧೆಯಲ್ಲಿ ಸೋಲು–ಗೆಲುವಿನ ಬಗ್ಗೆ ಲೆಕ್ಕಾಚಾರ ಹಾಕುವ ಬದಲು ಭಾಗವಹಿಸಬೇಕು. ಮುಂದಿನ ವರ್ಷ ಅಕ್ಟೋಬರ್‌ನಲ್ಲೇ ಈ ಉತ್ಸವ ಆಯೋಜಿಸಲಾಗುತ್ತದೆ. ಆದ್ದ­ರಿಂದ ವಿದ್ಯಾರ್ಥಿಗಳು ಈಗಿನಿಂದಲೇ ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.ಜಿಲ್ಲೆಯ 20 ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)