ಸೋಮವಾರ, ಜನವರಿ 20, 2020
23 °C

ದೇವಿಕಲ್ ತಾಂಡಾ: ವಿದ್ಯುತ್‌ ಇದ್ದರೆ ನೀರು!

ಪ್ರಜಾವಾಣಿ ವಾರ್ತೆ/–ಗುಂಡಪ್ಪ ಕರೆಮನೋರ Updated:

ಅಕ್ಷರ ಗಾತ್ರ : | |

ಕಾಳಗಿ: ಬಿಸಿಲಿರಲಿ, ಇಲ್ಲ ಮಳೆ ಇರಲಿ ಯಾವಾಗ ವಿದ್ಯುತ್‌ ಇರುತ್ತದೋ ಆಗ ಮಾತ್ರ ಕುಡಿಯುವ ನೀರು ಸಿಗುತ್ತದೆ. ಈ ಸಂದರ್ಭದಲ್ಲಿ ಯಾರದಾದರೂ ಮನೆಯಲ್ಲಿ ಅವಘಡ ಸಂಭವಿಸಿದರೂ ನೀರು ತುಂಬಿಕೊಳ್ಳಲು ಒಬ್ಬರು ಮನೆಯಲ್ಲಿ ಇರಲೇಬೇಕು.



–ಇದು ಚಿತ್ತಾಪುರ ತಾಲ್ಲೂಕಿನ ದೇವಿಕಲ್ ತಾಂಡಾದಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ. 60 ಮನೆಗಳಿರುವ ಈ ತಾಂಡಾದಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 10 ಗಂಟೆಗೆ ಕರೆಂಟ್ ಬಂದಾಗ ದಿನಕ್ಕೆ ಒಂದು ಸಲ ಮಾತ್ರ ಕುಡಿಯುವ ನೀರು ಸರಬರಾಜು ಆಗುತ್ತದೆ. ಈ ವೇಳೆ­ಯಲ್ಲಿ ಯಾರು ಮೊದಲೇ ಖಾಲಿ ಕೊಡಗಳು ಸಾಲಿಗೆ ಇಟ್ಟಿರುತ್ತಾರೊ ಅಂಥ­ವರಿಗೆ ಮಾತ್ರ ಕೊಡ ನೀರಾದ್ರು ಸಿಗಲು ಸಾಧ್ಯ! ತಡವಾದರೆ ಕರೆಂಟ್ ಕೈಕೊಡುವ ಸಾಧ್ಯತೆಯೇ ಹೆಚ್ಚು. ನೀರಿನ ಪರದಾಟವೂ ಹೆಚ್ಚುತ್ತದೆ ಎಂಬುದು ತಾಂಡಾದ ಮಹಿಳೆಯರ ಅಳಲು.



ತಾಂಡಾದ ಒಳಗೆ ಕೆಲವು ರಸ್ತೆಗಳಿಗೆ ಕಾಂಕ್ರಿಟ್ ಹಾಕಲಾಗಿದ್ದು, ಜನ, ಜಾನು­ವಾರು ಸುಗಮವಾಗಿ ನಡೆಯುವಂತಾ­ಗಿದೆ. ಭೀಮು ರಾಠೋಡ ಮತ್ತು ಹುನ್ನು ಪೂರು ಮನೆಯಿಂದ ಸುಗೂರ ರಸ್ತೆ, ಭೀಮು ಸಕ್ರು ಮನೆಯಿಂದ ಸೆನಕಾ­ಬಾಯಿ ಪವಾರ, ಭೋಜು ಜಾಧವ ಮನೆಯಿಂದ ಚಾಪಲಾ ಜಾಧವ ಹಾಗೂ ಬಜ್ಜು ಠಾಕೂರ ಮನೆ­ಯಿಂದ ಮೋತು ಸೋಮಣ್ಣ ಜಾಧವ ಮನೆಯ ತನಕ ಇದುವರೆಗೆ ಸಿಮೆಂಟ್ ರಸ್ತೆ ನಿರ್ಮಾಣವಾಗಿಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ಸಾಕಷ್ಟು ಗುಂಡಿ ಬಿದ್ದಿವೆ.



ಇನ್ನು ಸಿಮೆಂಟ್ ರಸ್ತೆಗಳಿರುವ ಪ್ರದೇಶ­ಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ರಸ್ತೆಯ ಮೇಲೆ ಹರಿದಾಡುವ ಕೊಳಚೆ ನೀರು ಜನರ ಓಡಾಟಕ್ಕೆ ತೀವ್ರ ತೊಂದರೆವುಂಟು ಮಾಡುತ್ತಿದೆ.



ಇಷ್ಟು ವರ್ಷಗಳಾದರೂ ಬೀದಿ ಕಸ­ಗುಡಿಸುವ ವ್ಯವಸ್ಥೆ ಇಲ್ಲದ್ದರಿಂದ ಎಲ್ಲೆಂದರಲ್ಲಿ ಕಸಕಡ್ಡಿ ಜಾಸ್ತಿ ಸಂಗ್ರಹ­ವಾಗಿದೆ. ಅಲ್ಲಲ್ಲಿ ಮುಳ್ಳಿನ ಗಿಡಗಂಟಿ ಎದ್ದಿವೆ. ನ್ಯಾಯ ಬೆಲೆ ಅಂಗಡಿ ಇಲ್ಲದ್ದ­ರಿಂದ ತಿಂಗಳಿಗೊಮ್ಮೆ ಪಡಿತರ ಆಹಾರ ಧಾನ್ಯ ತರಲು 4 ಕಿ.ಮೀ ದೂರದ ಕಾಳಗಿ ರಾಮನಗರಕ್ಕೆ ತೆರಳುವ ಸಂಕಷ್ಟ ಇದೆ.



ಈ ತಾಂಡಾ ಗುಡ್ಡಕ್ಕೆ ಹೊಂದಿಕೊಂಡಿ­ದ್ದರಿಂದ ಮಳೆಗಾಲದಲ್ಲಿ ಮಳೆ ನೀರು ಹರಿದುಬರುತ್ತದೆ. ಇದರಿಂದ ಮಣ್ಣು ಕುಸಿದು ಹಾಗೂ ಕಲ್ಲುಗುಂಡು ಜಾರಿ ಬಂದು ಮನೆಗಳಿಗೆ ಅಪ್ಪಳಿಸುತ್ತವೆ. ಇದ­ರಿಂದ ಅಪಾಯ ಹೆಚ್ಚು ಎನ್ನುತ್ತಾರೆ ಸ್ಥಳೀಯರು. ಹಾಗೆಯೇ ಈ ತಾಂಡಾ ಕಾಳಗಿಯಿಂದ 5ಕಿ.ಮೀ ದೂರದಲ್ಲಿ­ದ್ದರೂ ಸರಿಯಾದ ಬಸ್ಸಿನ ಸೌಕರ್ಯ­ವಿಲ್ಲ.  ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್‌ ಬರುತ್ತದೆ. ಬಾಕಿ ಸಮಯದಲ್ಲಿ ಟಂಟಂ ಅವಲಂಬಿಸಲೇಬೇಕು. ಇದ­ರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿ­ಗಳು ಹಾಗೂ ಅನಾರೋಗ್ಯ ಪೀಡಿತರು ಪರದಾಡುವಂತಾಗಿದೆ.



                                              ಯಾರು ಏನಂತಾರೆ?

‘ನೀರಿನ ಟ್ಯಾಂಕ್ ನಿರ್ಮಾಣ’

13ನೇ ಹಣಕಾಸು ಯೋಜನೆಯಲ್ಲಿ ಸಿ.ಸಿ ರಸ್ತೆ, ಚರಂಡಿ ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು.

–ರಾಘವೇಂದ್ರ ಗುತ್ತೇದಾರ, ಗ್ರಾ.ಪಂ. ಅಧ್ಯಕ್ಷ



‘ಸಮಸ್ಯೆ ಬಗೆಹರಿಸಿ’

ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಾಗ್ಯೂ, ಏನೂ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು.

–ಕಾಳು ಜಾಧವ, ಗ್ರಾ.ಪಂ. ಮಾಜಿ ಸದಸ್ಯ

ಪ್ರತಿಕ್ರಿಯಿಸಿ (+)