ಮಂಗಳವಾರ, ಜೂನ್ 15, 2021
27 °C
ವಾಡಿ–ಗದಗ ರೈಲ್ವೆ ಮಾರ್ಗ, ಗುಲ್ಬರ್ಗ ವಿಭಾಗೀಯ ಕಚೇರಿಗೆ ಅಡಿಗಲ್ಲು

‘ರಾಜ್ಯದ ರೈಲ್ವೆ ಯೋಜನೆಗೆ ಖರ್ಗೆ ಪುಷ್ಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ರಾಜ್ಯದಲ್ಲಿ ಅನೇಕ ವರ್ಷಗಳಿಂದ ತೆವಳುತ್ತಾ ಸಾಗಿದ್ದ ಅನೇಕ ರೈಲ್ವೆ ಯೋಜನೆಗಳಿಗೆ ರೈಲ್ವೆ ಸಚಿವ ಮಲ್ಲಿಕಾರ್ಜು ಖರ್ಗೆ ಅವರು ಸಾಕಷ್ಟು ಅನುದಾನ ಒದಗಿಸುವ ಮೂಲಕ ಪುಷ್ಟಿ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ಮಧ್ಯೆ ರೈಲ್ವೆ ಕಚೇರಿಯು ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಗುಲ್ಬರ್ಗ ರೈಲ್ವೆ ವಿಭಾಗದ ಅಧಿಕೃತ ಘೋಷಣೆ ಹಾಗೂ ವಿಭಾಗೀಯ ಕಚೇರಿ ನಿರ್ಮಾಣಕ್ಕೆ ಅಡಿಗಲ್ಲು ಮತ್ತು ವಾಡಿ–-ಗದಗ ನೂತನ ರೈಲ್ವೆ ಯೋಜನೆ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.‘ಈ ದೊಡ್ಡ ಪ್ರಮಾಣದ ರೈಲು ಯೋಜನೆಗಳೆರಡು ಜನರ ಬಹಳ ವರ್ಷಗಳ ಬೇಡಿಕೆಗಳಾಗಿದ್ದವು. ಖರ್ಗೆ ಅವರು ರೈಲ್ವೆ ಸಚಿವರಾಗಿದ್ದರಿಂದ ಸುಲಭವಾಗಿ ಈಡೇರಿ­ದಂತಾಗಿವೆ. ರಾಜ್ಯದಲ್ಲಿ ಕೈಗೊಳ್ಳುವ ಎಲ್ಲ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಸುಮಾರು ₨13 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ’ ಎಂದು ಹೇಳಿದರು.‘ವಾಡಿ-ಗದಗ ರೈಲ್ವೆ ಯೋಜನೆಯು ಇಷ್ಟು ಬೇಗನೆ ಕಾರ್ಯಗತಗೊಳ್ಳುತ್ತಿರುವುದು ಸಂತಸದ ಸಂಗತಿ. ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಆರ್ಥಿಕ, ಶೈಕ್ಷಣಿಕ ಜೀವನ ಸುಧಾರಣೆಗೆ ಇದೊಂದು ದೂರದೃಷ್ಟಿಯುಳ್ಳ ಯೋಜನೆಯಾಗಿದೆ. ಈ ಯೋಜನೆಯ ಜಾರಿಗಾಗಿ ₨೧,೯೨೨ ವೆಚ್ಚ ಮಾಡಲಾಗುತ್ತಿದ್ದು, ಅದರಲ್ಲಿ ರಾಜ್ಯ ಸರ್ಕಾರ ಅರ್ಧ ಅನುದಾನ ನೀಡುತ್ತದೆ. ಇದದೊಂದಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರವೇ ಉಚಿತವಾಗಿ ರೈಲ್ವೆ ಇಲಾಖೆಗೆ ಸ್ವಾಧೀನಪಡಿಸಿ ಕೊಡಲಿದೆ’ ಎಂದು ತಿಳಿಸಿದರು.‘160 ವರ್ಷ ಇತಿಹಾಸ ಹೊಂದಿರುವ ದೇಶದ ರೈಲ್ವೆ ಇಲಾಖೆ, ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು ಬೇರೆ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಆದರೆ ಖರ್ಗೆ ಅವರು ರೈಲ್ವೆ ಸಚಿವರಾದ ಮೇಲೆ ಆ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ಅತೀ ವೇಗವಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ’ ಎಂದು ಹೇಳಿದರು.

‘ಯಾದಗಿರಿಯಲ್ಲಿ ರೈಲ್ವೆ ಬೋಗಿ ಕಾರ್ಖಾನೆ ಸ್ಥಾಪನೆಯಾಗುತ್ತಿದೆ.ಇದರೊಂದಿಗೆ ಕೋಲಾರದಲ್ಲೂ  ಒಂದು   ರೈಲ್ವೆ ಬೋಗಿ ಕಾರ್ಖಾನೆ ಆರಂಭಿಸಲು ಫೆ.28ರಂದು ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ದೂರವಾಣಿ ಮೂಲಕ ಈಗಷ್ಟೇ ಖರ್ಗೆ ಅವರು ತಿಳಿಸಿದರು’ ಎಂದು ಸಿದ್ದರಾಮಯ್ಯ ಸಭೆಯ ಗಮನಕ್ಕೆ ತಂದರು. ‘ಕೋಲಾರದಲ್ಲಿ ಆರಂಭಿಸುತ್ತಿರುವ ₨1,400 ಕೋಟಿ ವೆಚ್ಚದ ರೈಲ್ವೆ ಬೋಗಿ ಕಾರ್ಖಾನೆಗೆ ರಾಜ್ಯ ಸರ್ಕಾರ ಕೂಡಾ ಅರ್ಧ ಅನುದಾನ ನೀಡುತ್ತಿದೆ ಹಾಗೂ ಭೂಮಿಯನ್ನು ಒದಗಿಸುತ್ತಿದೆ’ ಎಂದರು.ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸುನೀಲಕುಮಾರ್ ಸೂಧ್‌, ರೈಲ್ವೆ ಮಂಡಳಿ ಅಧ್ಯಕ್ಷ ಅರುಣೇಂದ್ರ ಕುಮಾರ್‌, ಆರ್‌ವಿಎನ್‌ಎಲ್‌ ನಿರ್ದೇಶಕ ಸತೀಶ್‌ ಅಗ್ನಿಹೋತ್ರಿ, ಸಂಸದ ಧರ್ಮಸಿಂಗ್‌, ಸಚಿವರಾದ ಡಾ. ಶರಣಪ್ರಕಾಶ್‌ ಪಾಟೀಲ, ಖಮರುಲ್‌ ಇಸ್ಲಾಂ, ಡಾ. ಎಚ್‌.ಸಿ. ಮಹಾದೇವಪ್ಪ, ಶಾಸಕರಾದ ಪ್ರಿಯಾಂಕ ಖರ್ಗೆ, ಜಿ.ರಾಮಕೃಷ್ಣ, ಡಾ. ಉಮೇಶ ಜಾಧವ, ಬಿ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಅಲ್ಲಂಪ್ರಭು ಪಾಟೀಲ ಮತ್ತಿತರರು ಇದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.