ಮಂಗಳವಾರ, ಜೂನ್ 15, 2021
27 °C
ಸೇಡಂನಲ್ಲಿ ತಾಲ್ಲೂಕು ಕೃಷಿ ಉತ್ಸವ, ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಶಂಕುಸ್ಥಾಪನೆ

ಉದ್ಯಮಕ್ಕಿಂತ ಕೃಷಿಗೆ ಆದ್ಯತೆ ನೀಡಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಈ ದೇಶದಲ್ಲಿ ಸ್ವಾಭಿಮಾನ­ದಿಂದ ಬದುಕುವ ಆಯ್ಕೆ ರೈತನಿಗೆ ಮಾತ್ರ ಇದೆ. ಆದ್ದರಿಂದ ರೈತರು ಆಳಾಗಿ ದುಡಿದು ಅರಸರಂತೆ ಉಣ್ಣ­ಬೇಕು’ ಎಂದು ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.ಸೇಡಂ ಪಟ್ಟಣದ ಕ್ರೀಡಾ ಮೈದಾನ­ದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ತಾಲ್ಲೂಕು ಕೃಷಿ ಉತ್ಸವ’ ಹಾಗೂ ‘ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಶಂಕು ಸ್ಥಾಪನೆ’ ಸಮಾರಂಭದಲ್ಲಿ ಮಾತನಾಡಿದರು.‘ಮನುಷ್ಯ ಬದುಕಲು ಕೈಗೆ ಉದ್ಯೋಗ ಬೇಕು. ರಾಜ್ಯದಲ್ಲಿ ಶೇ 43ರಷ್ಟು ಜನ ಗೃಹ ಆಧಾರಿತ ಉದ್ಯೋಗ ಅವಲಂಬಿಸಿದ್ದರೆ, ಶೇ 57ರಷ್ಟು ಜನರು ಕೃಷಿ ಆಧಾರಿತ ಉದ್ಯೋಗದ ಮೇಲೆ ಅವಲಂಬಿತ­ರಾಗಿ­ದ್ದಾರೆ. ಬೃಹತ್ ನಗರ, ದೊಡ್ಡ ಉದ್ದಿಮೆ­ಗಳಿಗಿಂತ ಕೃಷಿಗೆ ಆದ್ಯತೆ ನೀಡ ಬೇಕು. ಮಾನವ ಸಂಪನ್ಮೂಲದ ಸದ್ಬಳಕೆ ಆಗಬೇಕು’ ಎಂದರು.‘ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಡೆನ್ಮಾರ್ಕ್, ತನ್ನ ದೇಶದ ಹಸುಗಳ ಬದಲು ಭಾರತ ದೇಶದ ದೇಸಿ ಹಸುಗಳನ್ನು ಸಾಕಲು ಮುಂದಾಗು­ತ್ತಿದೆ. ಇಂಗ್ಲೆಂಡ್‌ನಲ್ಲಿ 3 ಸಾವಿರ ಪ್ರಬೇಧದ ಸಸ್ಯಗಳಿದ್ದರೆ ಭಾರತದಲ್ಲಿ 8 ಸಾವಿರ ಪ್ರಬೇಧದ ಸಸ್ಯಗಳು ಇವೆ. ಹೀಗಾಗಿ ಭಾರತ ಇಡೀ ಪ್ರಪಂಚದಲ್ಲೇ ಅದ್ಭುತ ದೇಶವಾಗಿ ಹೊರಹೊಮ್ಮಿದ್ದು, ಭಾರತ ಇತರ ದೇಶಗಳನ್ನು ಅನುಸರಿಸ­ಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ‘ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ, ಬೆಂಬಲ ಬೆಲೆ ನೀಡಬೇ ಕಾದ ಅಗತ್ಯವಿದೆ. ಅಂದಾಗ ಮಾತ್ರ ರೈತರು ಸ್ವಾಭಿಮಾನ­ದಿಂದ ಬದುಕಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸೇಡಂನಲ್ಲಿ ಅತಿ ಹೆಚ್ಚು ಮೂಸಂಬಿ ಬೆಳೆ ಬೆಳೆದ ರೈತ ರಾಜು ಅವಟೆ ಹಾಗೂ ಬಸವರಾಜ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಆಡಿಕೆ ಗ್ರಾಮದ ರೈತರಿಗೆ ನಿವೇಶನಗಳ ಹಕ್ಕು ಪತ್ರ ವಿತರಣೆ ಮಾಡಲಾಯಿತು.ತಾ.ಪಂ ಅಧ್ಯಕ್ಷ ಗೋವಿಂದ ಯಾಕಂಬ್ರಿ, ಪುರಸಭೆ ಅಧ್ಯಕ್ಷೆ ಸಾಜಿದಾ ಬೇಗಂ, ಜಿ.ಪಂ. ಸದಸ್ಯರಾದ ಈರಾರೆಡ್ಡಿ ಹೂವಿನಬಾವಿ, ರೇಣುಕಾ ಹೇಮಲಾ ನಾಯಕ್, ಕೃಷಿಕ್ ಸಮಾ ಜದ ಉಪಾ ಧ್ಯಕ್ಷ ಕರಿಯಪ್ಪ ಪಿಳ್ಳಿ, ಪ್ರಧಾನ ಕಾರ್ಯ ದರ್ಶಿ ಗಣಪತ ರಾವ್ ಚಿಮ್ಮನಕೋಡೆ, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಬಸವರಾಜ ಪಾಟೀಲ್, ತಹಶೀಲ್ದಾರ್ ಪ್ರಕಾಶ ಕುದರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಇದ್ದರು.ಗಮನ ಸೆಳೆದ ಪ್ರದರ್ಶನ

ಕೃಷಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ‘ಕೃಷಿ ವಸ್ತು ಪ್ರದರ್ಶನ’ ಗಮನ ಸೆಳೆಯಿತು. ಕೃಷಿ, ತೋಟ­ಗಾರಿಕೆ, ಜಲಾ­ನಯ, ರೇಷ್ಮೆ ಇಲಾಖೆ, ಸಾವಯವ ಕೃಷಿ ಮಳಿಗೆ­ಗಳಲ್ಲಿ ರೈತರು ಮಾಹಿತಿ ಪಡೆದರು. ಕೃಷಿ ಉಪಕರಣಗಳು, ಹನಿ ನೀರಾ­ವರಿ ಉಪಕರಣಗಳು, ವಿವಿಧ ಕೃಷಿ ಯಂತ್ರೋ­ಪಕರಣಗಳು, ದೇಸಿ ತಳಿ ಕುದುರೆ, ಹಸು (ಆಕಳು), ಹೋಮ–­ಹವನ  ಮೂಲಕ ಕೀಟ ನಾಶಕಗಳನ್ನು ಹೋಗಲಾಡಿ­ಸುವ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.