ಮಂಗಳವಾರ, ಜೂನ್ 22, 2021
28 °C

ಯೋಜನೆ ಹಲವು ಅಭಿವೃದ್ಧಿ ಮಾತ್ರ ಶೂನ್ಯ

ಸಾಯಬಣ್ಣಾ ಗುಡುಬಾ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ತ್ಯಾಜ್ಯ ಬೇಕಾಬಿಟ್ಟಿಯಾಗಿ ರಸ್ತೆ ಮೇಲೆ ಬಿದ್ದಿದೆ. ಸರ್ಕಾರಿ ಕಟ್ಟಡಗಳಲ್ಲಿ ಖಾಸಗಿ ವ್ಯಕ್ತಿಗಳು ವಾಸವಾಗಿದ್ದಾರೆ! ಸರ್ಕಾರಿ ಶಾಲೆ ಸೇರಿದಂತೆ ಅಂಗನವಾಡಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳಿಲ್ಲ.ಗ್ರಾಮದಲ್ಲಿ ಮಹಿಳಾ ಶೌಚಾಲಯವಿಲ್ಲ. ಇದು ಇಲ್ಲಿಗೆ ಸಮೀಪದ ಇಂಗಳಗಿ ಗ್ರಾಮದ ಪರಿಸ್ಥಿತಿ.ಈ ಗ್ರಾಮ ಪಂಚಾಯಿತಿ 19 ಚುನಾಯಿತ ಸದಸ್ಯರನ್ನು ಹೊಂದಿದೆ. ಎಳು ಸಾವಿರ ಜನ­ಸಂಖ್ಯೆ ಇದೆ.ಗ್ರಾಮದ ಹೊರ ವಲಯದಲ್ಲಿ 2005–6ರಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಸುಮಾರು 10ಲಕ್ಷ ವೆಚ್ಚದಲ್ಲಿ ಪಶು ಚಿಕಿತ್ಸಾ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೆ ಕೇಂದ್ರಕ್ಕೆ ವೈದ್ಯರೇ ಬಂದಿಲ್ಲ. ಅಸ್ವಸ್ಥ  ಪಶುಗಳ ಚಿಕಿತ್ಸೆಗಾಗಿ ಪರ ಊರಿಗೆ ಎಡತಾಕಬೇಕಾಗಿದೆ. ಕೇಂದ್ರದ ಕಟ್ಟಡಲದಲ್ಲಿ ಖಾಸಗಿ ವ್ಯಕ್ತಿ ಯೊಬ್ಬರು ವಾಸ ಮಾಡುತ್ತಿದ್ದಾರೆ. ಆದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ನೇರ ಆರೋಪವಾಗಿದೆ.ಕಳೆದ, 2011–12ರಲ್ಲಿ ತಾಲ್ಲೂಕು ಪಂಚಾ­ಯಿತಿ ಬಿಆರ್‌ಜಿಎಫ್‌ ಯೋಜನೆಯಡಿ ಸುಮಾರು ರೂ.5ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯವರೆಗೂ ಗ್ರಂಥಾಲಯ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ.ವಾರ್ಡ್‌ ಸಂಖ್ಯೆ 1,2,3ರ ಪ್ರಮುಖ ಬೀದಿಯಲ್ಲಿ ಎಸಿಸಿ ಸಿಮೆಂಟ್‌ ಕಂಪೆನಿ ವತಿ­ಯಿಂದ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಇಲ್ಲಿಯವರೆಗೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ ಮೂಲ್ಲಗೋಳ ಏರಿಯಾ, ಬೋವಿ ಸಮಾಜ ಪ್ರದೇಶ ಮತ್ತು ಅಣವೀರಭದ್ರಶ್ವೇರ ಮತ್ತು ಮರೆಮ್ಮ ದೇವಸ್ಥಾನದ ರಸ್ತೆ ಮಾರ್ಗದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ದುರ್ವಾಸನೆ ಮಧ್ಯೆಯೇ ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ.ಪ್ರಸ್ತುತ ಬಿಆರ್‌ಜಿಎಫ್‌ ₨1.5ಲಕ್ಷ, ಗ್ರಾಮ ಸ್ವರಾಜ್‌ ರೂ.5.19ಲಕ್ಷ, 13ನೇ ಹಣಕಾಸು ಯೋಜನೆಯಡಿ ರೂ. 5ಲಕ್ಷದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಆದರೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿಯವರೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಯಾವುದೇ ಕಾಮಗಾರಿ ಪೂರ್ಣ­ಗೊಂಡಿಲ್ಲ. ಯೋಜನೆಗಳ ಹಣ ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಅಭಿವೃದ್ಧಿ ಹೊರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಚನ್ನಗುಂಡ ಆರೋಪಿಸಿದ್ದಾರೆ.ಎಸಿಸಿ ಸಿಮೆಂಟ್‌ ಕಂಪೆನಿಯಿಂದ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಗ್ರಾಮ ಪಂಚಾ­ಯಿತಿ ಮೇಲುಸ್ತುವಾರಿ ವಹಿಸಿ ಎಲ್ಲ ವಾರ್ಡ್‌­ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಫಲವಾಗಿದೆ. ಇದರಿಂದ ಕೋಲಿ ಸಮಾಜ ತಳವಾರ ಮತ್ತು ಬೋವಿ , ಬಂಜಾರ ಸಮಾಜ ಬಾಂಧವರು ವಾಸಿಸುವ ಪ್ರದೇಶಗಳಲ್ಲಿ ದಿನನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ಗ್ರಾಮದಲ್ಲಿ ಏಳು ಅಂಗನವಾಡಿ ಕೇಂದ್ರಗಳು ಇವೆ. 4,5,7ನೇ ಕೇಂದ್ರಗಳಲ್ಲಿನ ಅಂಗನ­ವಾಡಿಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಪೂರೈಕೆ ಇಲ್ಲ.ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ­ಯಲ್ಲಿ 326 ಮಕ್ಕಳಿದ್ದರೆ, ಒಟ್ಟು 11 ಜನ ಶಿಕ್ಷಕರಿದ್ದಾರೆ. ಆದರೆ ಶಾಲೆಯಲ್ಲಿರುವ ಶೌಚಾಲಯಕ್ಕೆ ನೀರಿನ ಪೂರೈಕೆ ಇಲ್ಲದ ಕಾರಣ ಅದು ನಿರುಪಯುಕ್ತವಾಗಿದೆ.ಶಾಲೆಗೆ ಕಂಪೌಂಡ ಇಲ್ಲದ ಪರಿಣಾಮ ಬಿಡಾಡಿ ದನಗಳು ಮತ್ತು ಕೆಲವು ಪುಂಡರು ರಾತ್ರಿ ವೇಳೆಯಲ್ಲಿ ಶಾಲೆಯ ಮೈದಾನದಲ್ಲಿ ಮದ್ಯ ಪಾನ ಮಾಡಲು ಅನುವು­ಮಾಡಿ­ಕೊಟ್ಟಂತಾಗಿದೆ.  ಶಾಲೆಗೆ ಕಂಪೌಂಡ ನಿರ್ಮಿಸ­ಬೇಕು ಎಂದು ಶಾಲಾ ಮೇಲು­ಸ್ತುವಾರಿ ಸಮಿತಿ ಉಪಾಧ್ಯಕ್ಷೆ ಕಲಾವತಿ ಒತ್ತಾಯಿಸಿದ್ದಾರೆ. ಪ್ರೌಢ ಶಾಲೆಯಲ್ಲಿ 94 ಮಕಳಿದ್ದರೆ, 7 ಜನ ಶಿಕ್ಷಕರಿದ್ದಾರೆ. ಆದರೆ ಶಾಲೆಗೆ ಆಟದ ಮೈದಾನವೇ ಇಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.