ಜಗದ ಹೊಸ ಬೆರಗು 'ಬೆಂಗಳೂರು ಕಟ್ಟೆ'

ಶುಕ್ರವಾರ, ಮೇ 24, 2019
29 °C
‘ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌’ ಹೊಸ ಸೌಧ

ಜಗದ ಹೊಸ ಬೆರಗು 'ಬೆಂಗಳೂರು ಕಟ್ಟೆ'

Published:
Updated:

ಬೆಂಗಳೂರಿನ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳನ್ನು ಹತ್ತಿರದಿಂದ ಬಲ್ಲ, ಅದರ ಉನ್ನತಿಗೆ ಬೌದ್ಧಿಕವಾಗಿ ಮತ್ತು ಪ್ರಜ್ಞಾವಂತಿಕೆಯಿಂದ ತೊಡಗಿಸಿಕೊಂಡ ಮನಸುಗಳ ಕನಸು ನನಸಾದ ಪರಿ ಈ ‘ಬೆಂಗಳೂರು ಕಟ್ಟೆ’. ಹೆಸರೇ ತುಂಬ ಆಪ್ತ. ಊರ ಅರಳಿಕಟ್ಟೆಯ ಹಾಗೆ.

ಇದು ಅತ್ಯಾಧುನಿಕ ಕಟ್ಟೆ. ಮಾಹಿತಿತಂತ್ರಜ್ಞಾನ ಯುಗದ ಆವಿಷ್ಕಾರ, ನವೀನ ಜೀವನಶೈಲಿ ಮತ್ತು ಸ್ಥಳೀಯ ಸಾಂಸ್ಕೃತಿಕ ಪ್ರಜ್ಞೆ ಹದವಾಗಿ ಬೆರೆತ ನವಿರು ಸ್ಪರ್ಶದ ಮೂಲಸೌಕರ್ಯಕ್ಕೆ (ಸಾಫ್ಟ್‌ ಇನ್‌ಫ್ರಾಸ್ಟ್ರಕ್ಚರ್‌) ಇದೊಂದು ಅದ್ಭುತ ಮಾದರಿ. ಸುಮಾರು ಒಂದೂವರೆ ದಶಕಗಳಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದ ‘ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌’ಗೆ ಇದೀಗ ಸ್ವಂತ ಕಟ್ಟಡದ ಸಂಭ್ರಮ. ಈ ಸಂಭ್ರಮವನ್ನು ಫೆ.24ರಂದು ಇಡೀ ದಿನ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸಲು ಸಜ್ಜಾಗಿದೆ.

ಬೆಂಗಳೂರು ಈಗ ಜಾಗತಿಕ ಮಹಾನಗರ. ಇದಕ್ಕೊಂದು ವಿಶೇಷ ಮಹತ್ವವಿದೆ. ಜಗದ ಎಲ್ಲ ಮೂಲೆಗಳಿಂದ ಬಂದವರಿಗೆ ಇದೊಂದು ಲವಲವಿಕೆಯ ಲಾಲ್‌ಬಾಗ್‌. ಇಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯ ಜೀವಸೇತುಗಳು ಸದಾ ಚಲನಶೀಲ. ತಮ್ಮ ಆಸಕ್ತಿಯ ರಂಗಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ತಜ್ಞರು, ಬುದ್ಧಿಜೀವಿಗಳು, ಚಿಂತಕರು, ಕಲಾವಿದರು, ಉದ್ಯಮಿಗಳು, ಉದ್ಯಮಗಳಲ್ಲಿ ಕಾರ್ಯನಿರತರು ಹೀಗೆ ಹಲವು ಮನಸುಗಳು ಸೇರಿ ಒಂದು ಸಾಂಸ್ಥಿಕ ರೂಪದಲ್ಲಿ ಜನಪರವಾಗಿ ಯೋಚಿಸುವುದು ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿದ ಹೆಮ್ಮೆಯ ಸಂಸ್ಥೆಯಿದು.

ಹಾಗೆ ನೋಡಿದರೆ 2005ರಿಂದಲೇ ಈ ಸಂಸ್ಥೆ ಕ್ರಿಯಾಶೀಲವಾಗಿದೆ. 2005ರಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಈ ಸಂಸ್ಥೆಯನ್ನು ಉದ್ಘಾಟಿಸಿದ್ದರು. ಎನರ್ಜಿ ರಿಸೋರ್ಸ್‌ ಇನ್‌ಸ್ಟಿಟ್ಯೂಟ್‌ (ಟಿಇಆರ್‌ಐ) ಸಹಯೋಗದಲ್ಲಿ ಬಿಐಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿತ್ತು. ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರಾದ ಕೆ.ಎನ್‌. ಶಾಂತಕುಮಾರ್‌ ಅವರು ಸಂಸ್ಥೆಯ ಅಧ್ಯಕ್ಷರು. ಇತ್ತೀಚಿನ ವರ್ಷಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ಸಂಸ್ಥೆಗೆ ತನ್ನದೇ ಸ್ವಂತ ಕಟ್ಟಡವಿರಲಿಲ್ಲ. ಈಗ ದಾನಿಗಳು ಮತ್ತು ಸಂಸ್ಥೆಯ ಸದಸ್ಯರ ಉದಾರ ನೆರವಿನೊಂದಿಗೆ 48 ಸಾವಿರ ಚದರ ಅಡಿಯಲ್ಲಿ ಒಂದು ವಿಶಾಲವಾದ ಅತ್ಯಾಧುನಿಕ ಕಟ್ಟಡ ನಿರ್ಮಾಣಗೊಂಡಿದೆ. ದೊಡ್ಡ ಹಜಾರು, ಅತ್ಯಾಧುನಿಕ ಸಂವಹನ ಸಾಧನಗಳ ಎರಡು ಸೆಮಿನಾರ್‌ ಕೊಠಡಿಗಳು, ಕಲಾ ಗ್ಯಾಲರಿ, ಬೋರ್ಡ್‌ ರೂಂ, ಗ್ರಂಥಾಲಯ, ಅತ್ಯಾಧುನಿಕ ಧ್ವನಿ ವ್ಯವಸ್ಥೆ ಮತ್ತು ಬೆಳಕು ವಿನ್ಯಾಸದ ಪ್ರೇಕ್ಷಕಸ್ನೇಹಿ ಸಭಾಂಗಣ (180 ಆಸನಗಳ ವ್ಯವಸ್ಥೆ) , ಛಾವಣಿ ಮೇಲೊಂದು ಹರಟೆ ಜಾಗ, ಅಖಾಡ (ಆ್ಯಂಫಿಥಿಯೇಟರ್‌) ಮತ್ತು ಕೆಫೆ ಇಲ್ಲಿರುವ ಸೌಕರ್ಯಗಳು.

ಕಟ್ಟಡದ ವಿನ್ಯಾಸ ಪ್ರೇಕ್ಷಕ ಸ್ನೇಹಿಯಾಗಿದೆ. ಸಭಾಂಗಣ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿಗೆ ಪ್ರವೇಶ ಮಾಡಲು ಅತ್ಯಂತ ಸುಲಭದ ಮಾರ್ಗಗಳಿವೆ. ವಿಕಲಚೇತನರಿಗೂ ಅತ್ಯಂತ ಸುಲಭವಾಗುವಂತೆ ವಿನ್ಯಾಸ ಮಾಡಿದ್ದು ಈ ಸಭಾಂಗಣದ ವೈಜ್ಞಾನಿಕ ಮನೋಧರ್ಮವನ್ನು ಎತ್ತಿ ತೋರಿಸುತ್ತದೆ. ಸಭಾಂಗಣದ ಗ್ರೀನ್‌ರೂಂ ಕೂಡ ಸುವ್ಯವಸ್ಥಿತವಾಗಿದೆ. ಅದಕ್ಕೆ ಹೊಂದಿಕೊಂಡಂತೆ ಟಾಯ್ಲೆಟ್‌ ಸೌಲಭ್ಯವಿದೆ.

ಎಲ್ಲ ವಿಚಾರಧಾರೆಗಳ ಬುದ್ಧಿಜೀವಿಗಳು ಮತ್ತು ಚಿಂತಕರ ವಿಚಾರಗಳಿಗೆ ಮುಕ್ತ ವಾತಾವರಣ ಕಲ್ಪಿಸುವುದು ಸಂಸ್ಥೆಯ ಚಟುವಟಿಕೆಗಳ ಮುಖ್ಯ ಕಾಳಜಿ. ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗೆಗಿನ ವಿಶೇಷ ಚರ್ಚೆ, ಉಪನ್ಯಾಸ, ಡಾಕ್ಯುಮೆಂಟರಿ ಸೇರಿದಂತೆ ಅಭಿವೃದ್ಧಿ, ಪ್ರಗತಿಪರ ಚಿಂತನ ಮಂಥನಕ್ಕೆ ಇದೊಂದು ವಿಶೇಷ ವೇದಿಕೆ ಎನ್ನುವುದು ಸಂಸ್ಥೆಯ ವಿಶ್ವಾಸ.

ಫೆ.24ರಂದು ಭಾನುವಾರ ‘ಬಿಐಸಿ ಫೆಸ್ಟ್‌’ ಎನ್ನುವ ವಿಶೇಷ ಕಾರ್ಯಕ್ರಮಗಳನ್ನು ಇಡೀ ದಿನ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ರಿಂದ ರಾತ್ರಿ 8ಗಂಟೆಯವರೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪ್ರವೇಶ ಉಚಿತ. 

ಸ್ಥಳ ವಿವರ: #6, 4ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ. ಸಮೀಪದ ಮೆಟ್ರೊ ನಿಲ್ದಾಣ: ಸಿಎಂಎಚ್‌ ರಸ್ತೆ, ಇಂದಿರಾನಗರ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !