ಬುಧವಾರ, ಮಾರ್ಚ್ 3, 2021
30 °C

‘ಪುಸ್ತಕೋದ್ಯಮದ ಕಳೆ ನಿವಾರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪುಸ್ತಕೋದ್ಯಮದ ಕಳೆ ನಿವಾರಿಸಿ’

ಗುಲ್ಬರ್ಗ: ಪುಸ್ತಕೋದ್ಯಮದ ಬೆಳೆಯಲ್ಲಿ ಅಲ್ಲಲ್ಲಿ ಕಂಡು ಬರುವ ಕಳೆಯನ್ನು ನಿವಾರಿಸುವ ಅಗತ್ಯವಿದೆ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಮತ್ತು ಪ್ರಕಾಶನ, ಬಸವ ಪ್ರಕಾಶನವು ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ 61 ಪುಸ್ತಕಗಳ ಲೋಕಾರ್ಪಣೆ ಹಾಗೂ 37ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪುಸ್ತಕೋದ್ಯಮ ಇಂದು ಹುಲುಸಾಗಿ ಬೆಳೆದಿದೆ. ಆದರೆ ಅದು ಹಿಂದೆ ಕೆಲ ಪ್ರಕಾಶಕರ ಗುತ್ತಿಗೆ ಆಗಿತ್ತು. ಅವರು ತಮ್ಮ ಪ್ರಕಾಶನದಲ್ಲಿ ಪ್ರಕಟಗೊಂಡರೆ ಮಾತ್ರ ಉತ್ತಮ ಪುಸ್ತಕ ಎಂಬ ಭ್ರಮಾತ್ಮಕ ಸ್ಥಿತಿ ಸೃಷ್ಟಿಸಿದ್ದರು. ಕೆಲವು ಪುಸ್ತಕಗಳಲ್ಲಿ ಉತ್ತಮ ಅಂಶ ಇಲ್ಲದಿದ್ದರೂ ಪ್ರಕಾಶನದ ಹೆಸರಿಂದ ಪ್ರಖ್ಯಾತ ಬರುವ ಸ್ಥಿತಿ ಉಂಟು ಮಾಡಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಪುಸ್ತಕೋದ್ಯಮ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ವಿವರಿಸಿದರು.ಆದರೆ ಬೆಳೆಯುತ್ತಿರುವ ಪುಸ್ತಕೋದ್ಯಮವನ್ನೂ ಕೆಲವರು ದಂಧೆಯಾಗಿ ಬಳಸುತ್ತಿದ್ದಾರೆ. ಸಾರ್ವಜನಿಕ ಗ್ರಂಥಾಲಯದಲ್ಲೂ ಹಲವು ಬಾರಿ ಬೆಳೆಗಿಂತ ಹೆಚ್ಚು ಕಳೆಯಂತಹ ಪುಸ್ತಕಗಳು ಸಿಗುತ್ತಿವೆ. ಇಂತಹ ಭ್ರಷ್ಟತೆ ನಿವಾರಿಸಬೇಕಾಗಿದೆ ಎಂದರು.ಇಂದು ಹಲವರು ಉದ್ಯಮ ದೃಷ್ಟಿಯಿಂದ ಪುಸ್ತಕ ಪ್ರಕಟಿಸುತ್ತಾರೆ. ಅದೇ ರೀತಿ ಬರೆಯುವ, ಮಾರಾಟ ಮಾಡುವವರೂ ಇದ್ದಾರೆ. ಇಂತಹ ಪರಿಸ್ಥಿತಿ ನಡುವೆ ಯಾವುದೇ ವಾಸ್ತು, ಜ್ಯೋತಿಷ್ಯ, ಧಾರ್ಮಿಕ ಮೂಢನಂಬಿಕೆಗಳಿಗೆ ಪ್ರೇರಣೆ ನೀಡದೇ, ಸಾಮಾಜಿಕ ಸ್ಥಿತಿಯ ಬಗ್ಗೆ ಚಿಂತನೆ ನಡೆಸುವ, ಸಾಹಿತ್ಯಕವಾಗಿ ಅಮೂಲ್ಯವಾದ ಕೃತಿಯನ್ನು ಪ್ರಕಟಿಸಿರುವುದು ಸಿದ್ಧಲಿಂಗೇಶ್ವರ ಪ್ರಕಾಶನದ ಶ್ರೇಯಸ್ಸು. ಕೇವಲ ಪ್ರಕಟಣೆ ಮಾತ್ರವಲ್ಲ ಅವರು ಮಾರಾಟದಲ್ಲೂ ತಮ್ಮ ಸ್ವಾಭಿಮಾನ ಉಳಿಸಿಕೊಂಡಿದ್ದಾರೆ. ಈ ಭಾಗದ ಲೇಖಕರು, ಓದುಗರು ಸೇರಿದಂತೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಅದು ಯಾವುದೇ ಉದ್ಯಮಿಯ ಉತ್ತಮ ಸಾಮಾಜಿಕ ಹೊಣೆಗಾರಿಕೆ ಎಂದು ಶ್ಲಾಘಿಸಿದರು.ಪುಸ್ತಕ ಲೋಕಾರ್ಪಣೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ತಂದೆ–ತಾಯಿ, ಮಕ್ಕಳು, ಬಂಧು–ಬಳಗ, ಗೆಳೆಯರೆಲ್ಲ ಜೀವನದ ಒಂದೊಂದು ಹಂತದಲ್ಲಿ  ನಮ್ಮಿಂದ ಅನಿವಾರ್ಯ ಕಾರಣಗಳಿಗೆ ದೂರವಾಗುತ್ತಾರೆ. ಆದರೆ ಜೀವನದ ಕೊನೆ ತನಕ ನಮ್ಮೊಂದಿಗೆ ಸಂಬಂಧ ಹೊಂದಿರುವುದು, ನಮ್ಮನ್ನು ಬೆಳೆಸುವುದು ಪುಸ್ತಕ ಮಾತ್ರ. ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ. ವ್ಯಕ್ತಿತ್ವ ಬೆಳವಣಿಗೆಯ ಒಡನಾಡಿ ಎಂದರು.ಬದುಕಿನ ಒಡನಾಡಿಯಾದ ಪುಸ್ತಕಗಳನ್ನು ಓದುವ ಹವ್ಯಾಸ ಸೃಷ್ಟಿಸುವ, ಅಭಿರುಚಿ ಬೆಳೆಸುವ, ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಪ್ರಕಾಶಕರು, ಬರಹಗಾರರು ಹಾಗೂ ಪುಸ್ತಕ ಪ್ರೇಮಿಗಳ ಕೊಡುಗೆ ನಿಜಕ್ಕೂ ಅತ್ಯುನ್ನತವಾದುದು ಎಂದು ಬಣ್ಣಿಸಿದರು.

ಸಾಹಿತಿ ಎಲ್‌. ಹನುಮಂತಯ್ಯ ಮಾತನಾಡಿ, ಸ್ಥಳೀಯವಾಗಿ ಪಾಲಿಕೆ, ಪುರಸಭೆ, ಗ್ರಾಮ ಪಂಚಾಯಿತಿ ಮತ್ತಿತರ ಸ್ಥಳೀಯಾಡಳಿತ ಸಂಸ್ಥೆಗಳು ಪುಸ್ತಕ ಖರೀದಿ ಹಾಗೂ ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದಕ್ಕೆ ಸಂಬಂಧಿಸಿದ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಓದುಗರು ಕೊಂಡು ಓದುವ ಸಂಸ್ಕೃತಿಯನ್ನು ರೂಪಿಸುವ ಮೂಲಕ ಸಾಹಿತ್ಯ ಹಾಗೂ ಪುಸ್ತಕೋದ್ಯಮವನ್ನು ಬೆಳೆಸಬೇಕು ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಕೆ. ನೀಲಾ, ಪುಸ್ತಕ ಪ್ರಾಧಿಕಾರದ ಸದಸ್ಯರಾದ ರಾಜಶೇಖರ ಹತಗುಂದಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೂಗಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.61 ಕೃತಿಗಳ ಲೇಖಕರನ್ನು ಅಭಿನಂದಿಸಲಾಯಿತು. ಬಸವರಾಜ ಗು. ಕೊನೇಕ, ಶರಣಬಸವ ಬ. ಕೊನೇಕ, ಸಿದ್ಧಲಿಂಗ ಬ. ಕೊನೇಕ, ಶಿವರಾಜ ಪಾಟೀಲ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.