ಗುಲ್ಬರ್ಗ ಕ್ಯಾನ್ಸರ್ ಆಸ್ಪತ್ರೆ ಎತ್ತಂಗಡಿ?

ಭಾನುವಾರ, ಜೂಲೈ 21, 2019
27 °C

ಗುಲ್ಬರ್ಗ ಕ್ಯಾನ್ಸರ್ ಆಸ್ಪತ್ರೆ ಎತ್ತಂಗಡಿ?

Published:
Updated:

ಗುಲ್ಬರ್ಗ: ಉತ್ತರ ಕರ್ನಾಟಕ ಭಾಗದ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿ ಸ್ಥಾಪಿಸಲಾಗಿರುವ ಕ್ಯಾನ್ಸರ್ ಆಸ್ಪತ್ರೆಯ ಎತ್ತಂಗಡಿ ಮಾಡುವ ಸಿದ್ಧತೆ ತೆರೆ ಮರೆಯಲ್ಲಿ ನಡೆದಿದೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಪಾಟೀಲ ಆರೋಪಿಸಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಕನ್ನಡದ ವರನಟ ಡಾ. ರಾಜಕುಮಾರ ಮತ್ತು ಮಹೇಂದ್ರ ಕಪೂರ ಮುಂತಾದ ಕಲಾವಿದರು ಆಸ್ಪತ್ರೆ ಸಹಾಯಾರ್ಥ ಸಂಗೀತ ಕಾರ್ಯಕ್ರಮ ನಡೆಸಿದ್ದರು.

 

ಈ ಭಾಗದ ಸಹೃದಯರೂ ನೆರವು ನೀಡಿದ್ದರು. 1994ರಲ್ಲಿ ಇಲ್ಲಿ ಸ್ಥಾಪಿಸಲಾದ ವಿಠ್ಠಲರಾವ ಸುತ್ರಾವೆ ಸ್ಮಾರಕ ಫೇರ್‌ವೆಲ್ ಅರ್ಬುದ ಕೇಂದ್ರದಲ್ಲಿನ ಸುಮಾರು 20 ಸಿಬ್ಬಂದಿಯನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಏಕಾಏಕಿ ವರ್ಗಾಯಿಸಿರುವುದರಿಂದ ಇಲ್ಲಿ ಏನೂ ಕೆಲಸವಿಲ್ಲದಂತಾಗಿದೆ. ಇದು ಆಸ್ಪತ್ರೆ ಮುಚ್ಚುವ ಹುನ್ನಾರವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.ದಿನೇ ದಿನೇ ವೈದ್ಯಕೀಯ ಸೌಲಭ್ಯಗಳು ಹೆಚ್ಚುತ್ತ ಸರ್ಕಾರ ಹಾಗೂ ಈ ಆಸ್ಪತ್ರೆಯನ್ನು ಸಮರ್ಥವಾಗಿ ನಿರ್ವಹಿಸಬೇಕಾದ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ 50 ಹಾಸಿಗೆಯುಳ್ಳ ಈ ಆಸ್ಪತ್ರೆ ಮುಚ್ಚಿ ಹೋಗುತ್ತಿದೆ ಎಂದು ವಿಷಾದಿಸಿದರು.ಗುಲ್ಬರ್ಗ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಾಪುರ, ಬಾಗಲಕೋಟೆ ಹಾಗೂ ಆಂಧ್ರ-ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಸಾಕಷ್ಟು ಸಂಖ್ಯೆಯ ಕ್ಯಾನ್ಸರ್ ರೋಗಿಗಳಿದ್ದು, ಇದ್ದ ಒಂದು ಆಸ್ಪತ್ರೆಯನ್ನೇ ಸಮರ್ಥವಾಗಿ ನಿಭಾಯಿಸುವಷ್ಟು ಸಾಮರ್ಥ್ಯ ಸರ್ಕಾರಕ್ಕಿಲ್ಲದಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಈ ಭಾಗದ ಪ್ರಭಾವಿ ಶಾಸಕರ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ಹಣಕಾಸಿನ ನೆರವಿನಿಂದ ಆರಂಭಿಸಲಾಗಿರುವ ಈ ಆಸ್ಪತ್ರೆ ಇಲ್ಲಿಂದ ಎತ್ತಂಗಡಿ ಆಗದಂತೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ನಿಗಾವಹಿಸಬೇಕು ಎಂದು ಮನವಿ ಮಾಡಿದರು.ಪ್ರತಿಭಟನೆ: ಗುಲ್ಬರ್ಗದಲ್ಲಿರುವ ಈ ಆಸ್ಪತ್ರೆ ಎತ್ತಂಗಡಿ ಆಗಬಾರದು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಇದೇ  15ರಂದು ಗುಲ್ಬರ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಶಾಸಕರಿಗೆ, ಮಠಾಧೀಶರಿಗೆ, ಸಾಹಿತಿಗಳಿಗೆ, ಸಾರ್ವಜನಿಕರಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದರು.ಜಗನ್ನಾಥ ಪಟ್ಟಣಶೆಟ್ಟಿ, ನಟರಾಜ ಕಟ್ಟಿಮನಿ, ಬಸವರಾಜ, ಮಕ್ರಮಖಾನ್, ಯಲ್ಲಪ್ಪ, ಶ್ರೀಕಾಂತ ಜಾದವ, ರಾಮು ಯಾದವ, ಸಿದ್ದು ಬಿದ್ದನೂರ, ಕಲ್ಯಾಣಿ ತಳವಾರ, ತಮ್ಮು ಯಾದವ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry