ಶನಿವಾರ, ಮಾರ್ಚ್ 6, 2021
18 °C

ಬಯಲಲ್ಲೇ ಪಾಠ; ಮಕ್ಕಳ ಪರದಾಟ

ಪ್ರಜಾವಾಣಿ ವಾರ್ತೆ/ ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಬಯಲಲ್ಲೇ ಪಾಠ; ಮಕ್ಕಳ ಪರದಾಟ

ಗುಲ್ಬರ್ಗ: ಶಾಲೆ ಆರಂಭವಾಗಿ ಮೂರು ವಾರ ಕಳೆದರೂ ಬಯಲಲ್ಲೇ ವಿದ್ಯಾರ್ಥಿಗಳಿಗೆ ಪಾಠ. ಬಿಸಿಲು- ಮಳೆಗೆ ನಲುಗುವ ಮಕ್ಕಳ ಸ್ಥಿತಿ ಕೇಳುವವರಿಲ್ಲ. “ಮಕ್ಕಳು ಹೀಗೆ ಬಯಲಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರೆ, ಈ ಸಮಸ್ಯೆ ಪರಿಹರಿಸಬೇಕೆಂಬ ಮನಸ್ಸು ಈವರೆಗೆ ಅಧಿಕಾರಿಗಳಿಗೆ ಬಂದಿಲ್ಲ. ಇದು ಶಿಕ್ಷಣ ಇಲಾಖೆಯ ಮನಸ್ಥಿತಿ ಎತ್ತಿ ತೋರಿಸುತ್ತಿದೆೆ” ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಇದು ನಗರದ ಹೊರವಲಯದ ಕಪನೂರಿನಲ್ಲಿನ ಸರ್ಕಾರಿ ಶಾಲೆಯ ದುಸ್ಥಿತಿ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಠಡಿ ಒಳಗೆ ಕುಳಿತು ಪಾಠ ಕೇಳಬೇಕಾದ ಮಕ್ಕಳು ಬಯಲಿಗೆ ಬಿದ್ದಿದ್ದಾರೆ. ಇದಕ್ಕೆ ಕಾರಣವೆಂದರೆ- ಕೊಠಡಿಗಳಲ್ಲಿ ಪಠ್ಯಪುಸ್ತಕಗಳನ್ನು ತುಂಬಿರುವುದು!ವಿಚಿತ್ರ ಎನಿಸಿದರೂ ನಿಜ! ಶಾಲೆ ಆರಂಭವಾಗಿ 22 ದಿನ ಕಳೆದರೂ ಈವರೆಗೆ ಮಕ್ಕಳು ಕೊಠಡಿಯೊಳಗೆ ಕುಳಿತಿಲ್ಲ. ಶಾಲೆಯ ಕಟ್ಟೆಯ ಮೇಲೆಯೇ ಪಾಠ. ಸಂಚಾರ ದಟ್ಟಣೆಯ ಹುಮನಾಬಾದ್ ರಸ್ತೆಯಲ್ಲಿ ವಾಹನಗಳ ಓಡಾಟ, ಜನರ ಕೂಗಾಟ, ರಸ್ತೆ ಪಕ್ಕ ಬೀಳುವ ತ್ಯಾಜ್ಯದ ದುರ್ವಾಸನೆ... ಎಲ್ಲದರ ಮಧ್ಯೆ ಮಕ್ಕಳು ಅಭ್ಯಾಸ ನಡೆಸಬೇಕು.ಪ್ರಾಥಮಿಕ ಶಾಲೆಯ 15 ಹಾಗೂ ಪ್ರೌಢಶಾಲೆಯ 5 ಕೊಠಡಿಗಳು ಸೇರಿದಂತೆ ಒಟ್ಟು 20 ಕೊಠಡಿಗಳಿವೆ. ಈ ಪೈಕಿ ಪ್ರಾಥಮಿಕ ಶಾಲೆಯ 6 ಹಾಗೂ ಪ್ರೌಢಶಾಲೆಯ 3 ಕೊಠಡಿಗಳಲ್ಲಿ ಪಠ್ಯಪುಸ್ತಕ ತುಂಬಿಡಲಾಗಿದೆ. ಇವು ಖಾಲಿಯಾಗುವವರೆಗೆ ಮಕ್ಕಳ ಪಾಡು ಇಷ್ಟೇ.ಹಾಗಿದ್ದರೆ ಪಠ್ಯಪುಸ್ತಕಗಳು ಇಲ್ಲೇಕೆ ಬಂದವು?

ಉತ್ತರ ಹೀಗಿದೆ: ರಾಜ್ಯದ ಬೇರೆ ಕಡೆಗಳಲ್ಲಿ ಮುದ್ರಣಗೊಳ್ಳುವ ಪಠ್ಯಪುಸ್ತಕಗಳನ್ನು ಎಲ್ಲ ಜಿಲ್ಲೆಗೂ ರವಾನಿಸಲಾಗುತ್ತದೆ. ಅಲ್ಲಿಂದ ವಿವಿಧ ತಾಲ್ಲೂಕುಗಳಿಗೆ ಅವು ಸಾಗಣೆಯಾಗುತ್ತವೆ. ಸರ್ಕಾರಿ ಶಾಲೆಗಳಿಗೆ ತಕ್ಷಣ ವಿತರಣೆ ಮಾಡುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಖಾಸಗಿ ಶಾಲೆಗಳಿಗೆ ಮಾತ್ರ ಅವರು ನಿಗದಿತ ಮೊತ್ತದ ಡಿ.ಡಿ. ಕೊಟ್ಟ ಬಳಿಕವಷ್ಟೇ ಪುಸ್ತಕ ಪೂರೈಸುತ್ತಾರೆ. ಅಲ್ಲಿಯವರೆಗೆ ಗೋದಾಮುಗಳಲ್ಲಿ ಇವುಗಳನ್ನು ಸಂಗ್ರಹಿಸಿ ಇಡಬೇಕು.ಗೋದಾಮು!

ಗುಲ್ಬರ್ಗ ಉತ್ತರ ವಲಯದ ಶಾಲೆಗಳಿಗೆ ಪೂರೈಕೆಯಾಗಬೇಕಾದ ಪುಸ್ತಕಗಳನ್ನು ಹೊತ್ತ ಲಾರಿಗಳು ನಗರಕ್ಕೆ ಮಾರ್ಚ್ ಮೊದಲ ವಾರದಲ್ಲಿ ಬಂದವು. ಆದರೆ ಸರಕು ಸಾಗಣೆ ಲಾರಿಗಳಿಗೆ ನಗರದೊಳಗೆ ಪ್ರವೇಶಕ್ಕೆ ನಿಷೇಧ ವಿಧಿಸಿದ್ದರಿಂದ, ಈ ಲಾರಿಗಳು ಒಳಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಕಪನೂರಿನ ಈ ಶಾಲೆಯ ಕೊಠಡಿಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಇಡಲಾಯಿತು. ಮಾರ್ಚ್ ಮೊದಲ ವಾರದಲ್ಲೇ ಇಲ್ಲಿಗೆ ಬಂದಿಳಿದ ಪುಸ್ತಕಗಳ ಪೈಕಿ, ಇನ್ನೂ ಎಷ್ಟೋ ಸಂಖ್ಯೆಯ ಪುಸ್ತಕಗಳು ಕೊಠಡಿಯಲ್ಲಿ ಭದ್ರವಾಗಿ ಕುಳಿತಿವೆ.ಜೂನ್ 1ರಿಂದ ಶಾಲೆ ಆರಂಭವಾಗಿವೆ. ಪಾಠಗಳೂ ಶುರುವಾಗಿವೆ. ಆದರೆ ಕಪನೂರಿನ ಈ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಠಡಿಯೊಳಗೆ ಕುಳಿತುಕೊಳ್ಳುವ ಭಾಗ್ಯವೇ ಇಲ್ಲ. ಪ್ರೌಢಶಾಲೆಯ ಮೂರು ಕೊಠಡಿಗಳಲ್ಲೂ ಪುಸ್ತಕಗಳು ಭರ್ತಿಯಾಗಿರುವುದರಿಂದ, ಕಟ್ಟೆಯ ಮೇಲೆ ಪಾಠ ಕೇಳುವ ಸಂಕಷ್ಟ ಮಕ್ಕಳದು. ಇನ್ನು ಒಂದನೇ ಅಂತಸ್ತು ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ, ಸಿಮೆಂಟ್, ಉಸುಕು ಹಾಗೂ ನೀರು ಕೆಳಗೆ ಕುಳಿತ ಮಕ್ಕಳ ಮೇಲೆ ಬೀಳುತ್ತಲೇ ಇರುತ್ತದೆ.ಅಸಹಾಯಕ ಶಿಕ್ಷಕರು

“ಶಾಲೆಯ ಆರಂಭದ ಕೆಲ ದಿನ 10 ಗಂಟೆಗೇ ಉಗ್ರ ಬಿಸಿಲು. ಈಗ ಮಳೆ ಸುರಿಯುವ ಸ್ಥಿತಿ. ಇಂಥ ಸಂದರ್ಭದಲ್ಲಿ ಮಕ್ಕಳು ಪಡಬೇಕಾದ ಕಷ್ಟ ವಿವರಿಸಲೂ ಆಗದು. ನಿಲ್ಲಲು ಸಹ ಆಶ್ರಯ ಸಿಗದೇ ಅನೇಕ ಮಕ್ಕಳು ಮನೆಗೆ ಹೋಗಿ ಬಿಡುತ್ತಾರೆ. ನಾವಾದರೂ ಏನು ಮಾಡಲು ಸಾಧ್ಯ?” ಎಂದು ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕನ್ನಡ, ಇಂಗ್ಲಿಷ್‌ನಂಥ ಕೆಲವು ವಿಷಯಗಳ ಪಾಠವನ್ನು ಹಾಗೂ-ಹೀಗೂ ಮಾಡಿ ಹೇಳಬಹುದು. ಆದರೆ ಬೋರ್ಡ್ ಇಲ್ಲದೇ ಗಣಿತ ಹೇಳುವುದು ಹೇಗೆ? ಎಂಬುದೇ ಇಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಪ್ರಶ್ನೆ.ಗೋದಾಮು ಇಲ್ಲವೆಂದು ಶಾಲೆಯನ್ನೇ ಗೋದಾಮು ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳನ್ನು ಮಾತ್ರ ಬಯಲಿಗೆ ನೂಕಿದ್ದಾರೆ. “ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಹಣ ಪಡೆದು, ಅದರಿಂದ ಅಗತ್ಯ ಸಂಖ್ಯೆಯ ಪುಸ್ತಕ ಖರೀದಿಗೆ ಡಿ.ಡಿ. ತೆಗೆದುಕೊಂಡು ಬಂದು ಪಠ್ಯಪುಸ್ತಕ ಒಯ್ದ ಮೇಲಷ್ಟೇ ಈ ಮಕ್ಕಳಿಗೆ ಕೊಠಡಿಯಲ್ಲಿ ಕುಳಿತುಕೊಳ್ಳುವ `ಯೋಗ~ ಸಿಗುತ್ತದೆ. ಅಲ್ಲಿಯವರೆಗೆ ಮಕ್ಕಳು ಬಯಲಲ್ಲಿ ಕುಳಿತುಕೊಂಡರೆ, ಇತ್ತ ಕಣ್ಣು ಹಾಯಿಸದ ಅಧಿಕಾರಿಗಳು ಮಾತ್ರ ಕೊಠಡಿಯಲ್ಲಿ ಆರಾಮವಾಗಿ ಕೂತಿರುತ್ತಾರೆ” ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.