ಮಂಗಳವಾರ, ಮಾರ್ಚ್ 2, 2021
29 °C

2015: ವರ್ಷದ ಅಚ್ಚುಮೆಚ್ಚಿನ ಪದ ಅಸಹಿಷ್ಣುತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2015: ವರ್ಷದ ಅಚ್ಚುಮೆಚ್ಚಿನ ಪದ ಅಸಹಿಷ್ಣುತೆ?

ನಮ್ಮ ದೇಶದಲ್ಲಿ ಏಕಕಾಲಕ್ಕೆ ಎರಡು ಬಗೆಯ ಚರ್ಚಾಪ್ರವಾಹಗಳು ಭರದಿಂದ ಹರಿಯುತ್ತಿವೆ. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲಿ ಅಥವಾ ಪ್ರತಿಯೊಂದು ಸಚಿವ ಖಾತೆಯಲ್ಲಿ ಹೊಸಹೊಸತನ್ನು ತಂದು ದೇಶವನ್ನು ‘ಅಭಿವೃದ್ಧಿ’ ಮಾರ್ಗಕ್ಕೆ ತರುವ ಚರ್ಚೆ ಹರಡುತ್ತಿದೆ.ಯಾವ ಪತ್ರಿಕೆ ತೆರೆದರೂ ಯಾವ ಟಿವಿ ಚಾನೆಲ್ ನೋಡಿದರೂ ಕಣ್ಣಿಗೆ ಎದ್ದು ಕಾಣುವ ಕೇಂದ್ರ ಸಚಿವಾಲಯ ಇಲಾಖೆಗಳ ದೊಡ್ಡದೊಡ್ಡ ಜಾಹೀರಾತುಗಳಿಂದಲೇ ಈ ಅಭಿವೃದ್ಧಿ ವಿಷಯ ಗೊತ್ತಾಗುತ್ತಿದೆಯಲ್ಲ? ಅಭಿವೃದ್ಧಿ ಕುರಿತು ಯಾವ ಪಕ್ಷದ ಸರ್ಕಾರ ಯೋಚಿಸುವುದಾದರೂ ಜನ ಬೇಡವೆನ್ನುವುದಿಲ್ಲ; ಆದರೆ ಅದು ಜನರಿಗೆ ಗೊತ್ತಾಗಬೇಕಾಗಿರುವುದು ಆರಂಭದಲ್ಲಿ ಜಾಹೀರಾತುಗಳಿಂದ ಅಲ್ಲ, ಕಾಲಕಳೆದಂತೆ ಫಲಾನುಭವದಿಂದ. ಮಾಡಬೇಕಾದ ಮೂಲಭೂತ ಕೆಲಸಕ್ಕೇ ಮಾಡುತ್ತೇವೆ ಎಂದು ಪ್ರಚಾರ ಪಡೆಯಲಾಗುತ್ತದೆ, ಜನರ ಅಭಿವೃದ್ಧಿ ಕುರಿತ ಜಾಹೀರಾತಿಗೆ ಜನರ ಹಣವೇ ಖರ್ಚಾಗುತ್ತದೆ ಎನ್ನುವುದೆಲ್ಲ ನಮಗೆ ಹಿಂದಿನ ಸರ್ಕಾರಗಳಿಂದ ಅಭ್ಯಾಸವಾಗಿಹೋಗಿದೆ.ಈಗ ಅಭಿವೃದ್ಧಿ ಚರ್ಚೆಯ ಜೊತೆಜೊತೆಗೇ ಅಸಹಿಷ್ಣುತೆ ಕುರಿತ ಚರ್ಚೆಯೂ ವ್ಯಾಪಕವಾಗಿ ನಡೆಯುತ್ತಿದೆ. ಎರಡೂ ಒಂದೆಡೆ ಇರುವುದು ಅಸಾಧ್ಯ ಎಂದು ಯೋಚಿಸುವ ಕೆಲವರು, ಅಭಿವೃದ್ಧಿಯ ಫಲಗಳು ದೇಶದ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಲು ಅಸಹಿಷ್ಣುತೆ ಅವಕಾಶ ಕೊಡುವುದಿಲ್ಲ ಎಂದು ಹೇಳಬಹುದು. ಅನೇಕ ಬಗೆಯ ಸಂಕಥನಗಳು ಒಟ್ಟಿಗೇ ಪ್ರವಹಿಸುವುದು ನಮ್ಮ ದೇಶದ ವೈಶಿಷ್ಟ್ಯ. ಅಭಿವೃದ್ಧಿಯ ಮಾತು ಆಡುತ್ತಿರುವುದು ಸರ್ಕಾರ ಎನ್ನುವ ಅಂಶವೇನೋ ಮಾಧ್ಯಮಗಳಲ್ಲಿನ ಜಾಹೀರಾತುಗಳಿಂದ ಗೊತ್ತಾಗುತ್ತಿದೆ.ಅದೇ ಮಾಧ್ಯಮಗಳಲ್ಲೇ ಅಸಹಿಷ್ಣುತೆಯ ಕ್ರಿಯೆಗಳು, ಪ್ರತಿಕ್ರಿಯೆಗಳು ವರದಿಯಾಗುತ್ತಿವೆ. ಸಂಸತ್ತಿನಿಂದ ಹಿಡಿದು ಶಾಲೆಗಳವರೆಗೆ ಚರ್ಚೆಗೆ ಬಂದ ವಿಷಯವೆಂದರೆ ಅಸಹಿಷ್ಣುತೆಯೇ. ನಮ್ಮ ದೇಶದ ಸಂವಿಧಾನದಷ್ಟು ಅದ್ಭುತ ಸಂವಿಧಾನ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎಂದು ಹೇಳಲಾಗುತ್ತಿದೆ. ಅದು ಹೇಳುವ ಮೊದಲ ಪಾಠವೇ ಎಲ್ಲ ಜನರ ನಡುವೆ ಸಹನೆ ಮತ್ತು ಸಹಿಷ್ಣುತೆ. ಆದರೆ ಈ ಮೊದಲ ಪಾಠಕ್ಕೆ ಕಳೆದ ವರ್ಷ ಸೊನ್ನೆ ಅಂಕ ಬಿತ್ತು ಅನ್ನಿಸಿತು. ‘ಅಸಹನೆ’ ಎಂಬ ಸರಳ ಪದ ಹೋಗಿ ‘ಅಸಹಿಷ್ಣುತೆ’ ಎಂಬ ಕ್ಲಿಷ್ಟ ಪದ ಬಳಕೆಗೆ ಬಂದದ್ದೂ ಆ ವಿಷಯದ ಕ್ಲಿಷ್ಟತೆಯನ್ನು ಹೇಳುವ ಸರಳ ರೂಪಕವೇ ಇರಬಹುದು! ಅಭಿವೃದ್ಧಿಗೆ ನೂರಾರು ನೆಲೆಗಳಿದ್ದರೂ ಮೂಲಮಂತ್ರ ಒಂದೇ- ಸರ್ವರಿಗೂ ಸಮಪಾಲು. ಆದರೆ ಅಸಹಿಷ್ಣುತೆಗೆ ಹತ್ತೊಡಲಿನಲ್ಲಿ ಮೂಡಿದ ಹತ್ತವತಾರಗಳು ಇವೆ. ಅಭಿವೃದ್ಧಿ ಎನ್ನುವುದು ಹಿಂದೆ ಇತ್ತೋ ಇಲ್ಲವೋ ಸರಿಯಾಗಿ ಗೊತ್ತಿಲ್ಲ. ಆದರೆ ಅಸಹನೆ, ಅಸಹಿಷ್ಣುತೆ, ಅಸಮ್ಮತಿ, ಅನಾದರ, ಅನಗತ್ಯ ಪ್ರತಿರೋಧ ಮುಂತಾದುವಂತೂ ಚರಿತ್ರೆಯುದ್ದಕ್ಕೂ ನಮಗೆ ಸುಪರಿಚಿತವಾಗಿದೆ. ಪುರಾಣೇತಿಹಾಸಗಳ ಪ್ರಸಂಗಗಳಲ್ಲಿ, ಮಹಾಕಾವ್ಯಗಳ ಕಥೆಗಳಲ್ಲಿ, ಪ್ರಾಚೀನ ಸಾಹಿತ್ಯಕ ಅಭಿವ್ಯಕ್ತಿಯಲ್ಲಿ, ಶಿಲಾಶಾಸನಗಳ ಬರಹಗಳಲ್ಲಿ, ಗುಡಿಗೋಪುರಗಳ ವಿನಾಶದಲ್ಲಿ, ಒಡೆದುಹಾಕಿದ ದೇವರ ವಿಗ್ರಹಗಳಲ್ಲಿ, ಧಾರ್ಮಿಕ ಯುದ್ಧಗಳಲ್ಲಿ, ಜಾತಿಗಳ ಜಗಳದಲ್ಲಿ- ಹೀಗೆ ಎಲ್ಲೆಲ್ಲೂ ಅದು ನಮಗೆ ಎದ್ದು ಕಾಣುತ್ತದೆ.ಬಹುತ್ವ, ಬಹುವಚನ, ಬಹುರೂಪ ಇರುವ ಕಡೆ ಪರಸ್ಪರ ಸಂಪೂರ್ಣ ಸಹಿಷ್ಣುತೆಯ ಕೊರತೆಯೂ ಸಹಜ, ಸಂಘರ್ಷವೂ ಸಾಮಾನ್ಯ ಎಂದು ನಾವು ಅದಕ್ಕೇ ಹೊಂದಿಕೊಂಡು ಇಲ್ಲಿಯವರೆಗೆ ಸಾಗಿಬಂದಿದ್ದೇವೆ. ಆದರೆ ಈಗ ವಿವಿಧ ಮತಧರ್ಮಗಳ ನಡುವೆ ಮಾತ್ರವಲ್ಲ, ಬಹುಸಂಖ್ಯಾತರ ಧರ್ಮದೊಳಗೂ ವಿವಿಧ ರೀತಿಯ ಅಸಹನೆಯ ಆಸ್ಫೋಟ ಆಗುತ್ತಿದೆ. ಇವೆಲ್ಲ ಇರಲಿಲ್ಲವೆಂದಲ್ಲ, ಆದರೆ ಮೊದಲಿಗಿಂತ ಇವು ಅಗಾಧವಾಗಿ ಹೆಚ್ಚುತ್ತಿರುವುದು ನಿಜಕ್ಕೂ ಆತಂಕದ ವಿಚಾರ.2015ರಲ್ಲಿ ಲೋಕಸಭೆಯ ಕಲಾಪ ನಡೆದದ್ದು ಬಹಳ ಕಡಿಮೆ. ಅದರಲ್ಲಿ ‘ಅಸಹಿಷ್ಣುತೆ’ ವಿಚಾರ ಕುರಿತ ಚರ್ಚೆ ಅಥವಾ ಅದನ್ನು ಕುರಿತ ಗಲಾಟೆ ಎಷ್ಟಿತ್ತೆಂಬುದು ನಮಗೆ ಗೊತ್ತು. ಪ್ರಮುಖ ರಾಜಕೀಯ ಪಕ್ಷಗಳ ನಡುವಿನ ತಿಕ್ಕಾಟದ ಪ್ರಮುಖ ವಿಷಯ ಅದಾಗಿತ್ತು. ಅಸಹಿಷ್ಣುತೆ ಇದೆ ಅಥವಾ ಇಲ್ಲ ಎನ್ನುವ ಬಗ್ಗೆ ಗಟ್ಟಿದನಿಯಲ್ಲಿ ಎಲ್ಲಾದರೂ ವಾದ ಮಾಡದಿದ್ದರೆ ಅವರು ರಾಜಕಾರಣಿಗಳೇ ಅಲ್ಲ ಎಂಬಂತಾಗಿತ್ತು. ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ, ಪ್ರತಿಷ್ಠಿತ ಅಧ್ಯಯನ ಸಂಸ್ಥೆಗಳಲ್ಲಿ, ವಿಶೇಷ ವಿಚಾರ ಸಂಕಿರಣಗಳಲ್ಲಿ ಅಸಹಿಷ್ಣುತೆಯೇ ಚರ್ಚೆಯ ಕೇಂದ್ರಬಿಂದು.ಸಮಾಜದ ವಿದ್ಯಮಾನಗಳ ಬಗ್ಗೆ ಸಾಮಾನ್ಯವಾಗಿ ಮಾತನಾಡದ ವಿದ್ವತ್ ವಲಯವೂ ಈ ಅಸಹಿಷ್ಣುತೆಯನ್ನು ಕುರಿತು ಅತಿ ಹೆಚ್ಚು ಮಾತನಾಡಿತು. ವಿದ್ವಾಂಸರ ಪರವಿರೋಧ ಗುಂಪುಗಳು ‘ಅಸಹಿಷ್ಣುತೆ ನಿಮ್ಮದೇ ಸೃಷ್ಟಿ’ ಎಂದು ಪರಸ್ಪರ ದೂರಿ ಹೊಡೆದಾಡಿಕೊಂಡವು. ಸದಾ ಬೇಲಿ ಮೇಲೆ ಕೂರುವ ಆರೋಪ ಹೊತ್ತ ಬರಹಗಾರರೂ ಈಗ ಎರಡಲ್ಲೊಂದು ಕಡೆ ಮಾತನಾಡುವುದು ಅನಿವಾರ್ಯ ಆಗಿದ್ದೊಂದು ವಿಶೇಷ. ಬುದ್ಧಿಜೀವಿಗಳು, ವಿಚಾರವಾದಿಗಳು ನಿರೀಕ್ಷೆಯಂತೆ ಮಿಕ್ಕವರಿಂದ ಹೊಡೆತ, ಒದೆತ, ಟೀಕಾಸ್ತ್ರ ಎದುರಿಸಬೇಕಾಯಿತು; ಕೆಲವು ವಿದ್ವಾಂಸರು, ಚಳವಳಿಕಾರರು ಹೇಳಿದ ಮಾತುಗಳಿಗೆ ವ್ಯಕ್ತವಾದ ಅಸಹಿಷ್ಣುತೆ ಮೇರೆ ಮೀರಿ, ಅವರನ್ನು ಗುಂಡೇಟಿನಿಂದ ಹತ್ಯೆ ಮಾಡುವುದೂ ನಿರೀಕ್ಷೆ ಮೀರಿ ನಡೆದುಹೋಯಿತು. ‘ಅಯ್ಯೋ, ನಮ್ಮ ಭಾರತಸೀಮೇಲಿ ಕೊಲೆಗಿಲೆ ಮುಂತಾಗಿ ಆಗುತ್ತಲೇ ಇರುತ್ತದೆ’ ಅಂದುಕೊಂಡೋ ಏನೋ ಎಂದು ನಮ್ಮ ಸರ್ಕಾರ ಆ ಹಂತಕರನ್ನು ಇನ್ನೂ ಪತ್ತೆ ಮಾಡದಷ್ಟು ಸಹನೆ ತೋರಿದೆ.ನಮ್ಮ ದೇಶದ ಎಲ್ಲ ಭಾಷೆಗಳ ಸಾಹಿತಿಗಳಲ್ಲಿ ಕೆಲವರನ್ನು ಬಿಟ್ಟರೆ ಮಿಕ್ಕವರೆಲ್ಲ ಸಾಮಾನ್ಯವಾಗಿ ತಮ್ಮ ಸೈದ್ಧಾಂತಿಕ ದೃಷ್ಟಿಕೋನವನ್ನು ಮಾತು ಮತ್ತು ಬರಹದಲ್ಲಿ ತೀರಾ ವಾಚ್ಯವಾಗಿ ತೋರಿಸಿಕೊಳ್ಳುವುದು ಕಡಿಮೆ. ವಿಮರ್ಶಕರು, ವಿಶ್ಲೇಷಕರು ಮಾತ್ರ ಅವರ ಚಿಂತನೆಯ ನೆಲೆಯನ್ನು ಗುರುತಿಸಬೇಕಿತ್ತು. ಆದರೆ ‘ಅಸಹಿಷ್ಣುತೆ’ ಎಂಬ ಪದವೇ ಅವರು ಎಲ್ಲಿದ್ದಾರೆ, ಯಾವ ಕಡೆ ಇದ್ದಾರೆ, ಯಾವ ಪಕ್ಷವನ್ನು ಬೆಂಬಲಿಸುತ್ತಾರೆ, ಯಾವ ಸಿದ್ಧಾಂತದ ಪರವಾಗಿದ್ದಾರೆ ಎನ್ನುವುದನ್ನು ಅವರ ಸಾಹಿತ್ಯದ ಹಂಗಿಲ್ಲದೆ ಬಲವಂತವಾಗಿ ತೋರಿಸಿಬಿಟ್ಟಿತು.‘ಪ್ರಶಸ್ತಿ ವಾಪಸಾತಿ’ ಅಸಹಿಷ್ಣುತೆಯನ್ನು ವಿರೋಧಿಸುವ ಗಮನಾರ್ಹ ಸಾಂಸ್ಕೃತಿಕ ಆಂದೋಲನವಾಯಿತೆನ್ನುವುದೂ ಬಹಳ ಮುಖ್ಯ. ‘ಎಲ್ಲಾ ಸಾಹಿತ್ಯಕ ಬರವಣಿಗೆಯೂ ರಾಜಕೀಯ ಬರವಣಿಗೆಯೇ. ಆದರೆ ಕೆಲವು ದೇಶಗಳು ಮತ್ತು ಕೆಲವು ಕಾಲಾವಧಿಗಳ ಸಾಹಿತಿಗಳ ಬರವಣಿಗೆ ಇತರರಿಗಿಂತ ಹೆಚ್ಚು ರಾಜಕೀಯ ಬರವಣಿಗೆ ಆಗಿರುತ್ತದೆ’ ಎಂಬುದು ಜಾರ್ಜ್ ಆರ್ವೆಲ್ ಯಾವಾಗಲೋ ಹೇಳಿದ ಮಾತು. ಆ ಮಾತನ್ನು ವಿಚಿತ್ರವಾಗಿ ಸಮರ್ಥಿಸುವ ಮತ್ತು ವಿಕೃತವಾಗಿ ಪರೀಕ್ಷಿಸುವ ಕಾಲಾವಧಿ ನಮ್ಮ ದೇಶದ ಪಾಲಿಗಂತೂ ಬಂದೇ ಬಿಟ್ಟಿತು!ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತು ಹತ್ತಾರು ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ನಿರಂತರ ಅಧ್ಯಯನ ನಡೆಯುತ್ತಿರುತ್ತದೆ. ‘ಇಂಡಾಲಜಿ’ ಎಂಬ ಪದವಿಶೇಷದ ಗೌರವ ಅದಕ್ಕಿದೆ. ಶತಮಾನಗಳುದ್ದಕ್ಕೂ ಸಹಿಷ್ಣುತೆಯೇ ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಎನ್ನುವುದನ್ನು ಗುರುತಿಸಿ ವಿಸ್ಮಿತರಾಗುತ್ತಿದ್ದ ಆ ವಿದೇಶಿ ವಿದ್ವಾಂಸರು, ಈ ‘ಅಸಹಿಷ್ಣುತೆ’ ಹಾವಳಿಗೆ ಬೆಚ್ಚಿಬಿದ್ದರೆನ್ನಬೇಕು. ಒಬ್ಬಿಬ್ಬರಲ್ಲ, ನೂರಾತೊಂಬತ್ತು ವಿದೇಶಿ ವಿದ್ವಾಂಸರು ಒಂದುಗೂಡಿ ‘ಭಾರತದ ಈ ಬೆಳವಣಿಗೆ ಕಳವಳಕಾರಿ, ಅಪಾಯ ತಪ್ಪಿಸಲು ಇದನ್ನು ನಿಯಂತ್ರಿಸಬೇಕು’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿಪತ್ರ ಬರೆದರು. ಆ ವಿದೇಶಿ ವಿದ್ವಾಂಸರ ನೆಲೆಬೆಲೆಗಳ ಮೇಲೆ ಯಥಾಪ್ರಕಾರ ಪ್ರಹಾರ ನಡೆಯಿತೆನ್ನುವುದು ಬೇರೆ ವಿಚಾರ.   ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಗುರುತಿಸಿದವರು ಮತ್ತು ಅದನ್ನು ವಿರೋಧಿಸಿದವರ ಬಗ್ಗೆ ಅಸಹಿಷ್ಣುತೆಯ ಅಟ್ಟಹಾಸ ಇನ್ನೊಂದು ಆತಂಕಕಾರಿ ಬೆಳವಣಿಗೆ. ‘ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ದೇಶ ಪ್ರಕಾಶಿಸುತ್ತಿದೆ ಎಂದು ನಾವು ಹೇಳಿದರೆ ನೀವು ಬಾಯಿ ಮುಚ್ಚಿಕೊಂಡು ಒಪ್ಪಬೇಕು’ ಎನ್ನುವವರು, ‘ನಾವು ಏನು ಬೇಕಾದರೂ ಹೇಳಬಹುದು, ನೀವು ಮಾತ್ರ ಏನನ್ನೂ ಹೇಳಕೂಡದು, ನಾವು ಹೇಳುವುದೆಲ್ಲಾ ಸರಿ, ನೀವು ಹೇಳುವುದೆಲ್ಲಾ ತಪು’ ಎಂದು ಗದರುವವರು, ಪ್ರಶಸ್ತಿ ವಾಪಸಾತಿಯಂಥ ಪ್ರತಿರೋಧವನ್ನು ಭೀಕರವಾಗಿ ಹೀಗಳೆಯುವವರು ಹೆಚ್ಚಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೆ ಮಾತ್ರ, ನಿಮಗೆ ಇರಕೂಡದು, ನೀವೇನಾದರೂ ಮಾತನಾಡಿದರೆ ಅದು ದೇಶದ್ರೋಹ’ ಎನ್ನುವ ಅಸಹಿಷ್ಣುತೆಯ ಪರಮಮಂತ್ರ ಮೊಳಗಿತು. ಅಸಹಿಷ್ಣುತೆಗೆ ದಿನಕ್ಕೊಂದು ಬಣ್ಣ ಸೇರುತ್ತಿದೆ, ಅದರ ಕುರೂಪ ಹೆಚ್ಚುತ್ತಿದೆ.ಆಮೇಲೆ ಅಸಹಿಷ್ಣುತೆ ಎಬ್ಬಿಸಿದ ಬಿರುಗಾಳಿಯಲ್ಲಿ ಕಾಳು ತೂರಿಕೊಂಡವರು, ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡವರು ರಾಜಕೀಯ, ಸಂಸ್ಕೃತಿ, ಧರ್ಮ ಹೀಗೆ ಯಾವ ಕ್ಷೇತ್ರದಲ್ಲಿ ಇರಲಿಲ್ಲ? ಈ ಸಂಗತಿಯೇ  ನಮ್ಮ ಸಂಘಟನೆಗಳ ಜೀವಜೀವಾಳ ಎನ್ನುವಂತೆ ಎಷ್ಟು ಜನ ನಾಯಕರು ಅದನ್ನು ಬಾಚಿಕೊಳ್ಳಲಿಲ್ಲ? ‘ಹುಸಿ ಧಾರ್ಮಿಕತೆ’ಗೆ ನಿಜವಾಗಿ ಇದೆಷ್ಟು ಬಲ ತುಂಬಲಿಲ್ಲ? ಹಾಗೆ ನೋಡಿದರೆ ಈ ‘ಅಸಹಿಷ್ಣುತೆ’ ಎಂಬ ಒಂದು ಪದ ನಮ್ಮ ದೇಶದ ಇಡೀ ರಾಜಕೀಯ ಚಿಂತನೆ, ಸಂಸ್ಕೃತಿ ಚಿಂತನೆ ಮತ್ತು ಧಾರ್ಮಿಕ ಚಿಂತನೆಗಳನ್ನು ಇಬ್ಭಾಗ ಮಾಡಿಬಿಟ್ಟಿತು. ‘ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದೆ ಮತ್ತು ಅದು ಹೆಚ್ಚುತ್ತಿದೆ ಎನ್ನುವುದನ್ನು ಒಪ್ಪುತ್ತೀರಾ ಇಲ್ಲವಾ’ ಎನ್ನುವ ಒಂದು ಪ್ರಶ್ನೆಯ ಪರೀಕ್ಷೆಯನ್ನು ಪ್ರಜ್ಞಾವಂತರೆಲ್ಲ ಎದುರಿಸಬೇಕಾಯಿತು. ‘ನೀವು ಅದಾ ಇದಾ?’ ಎಂಬುದೊಂದೇ ಚಿಂತಿಸುವ ಜನರ ಹದ ನಿರ್ಧರಿಸುವ ಅಂಶವಾಯಿತೆಂದರೆ ಅತಿಶಯೋಕ್ತಿ ಅಲ್ಲ.ನಮ್ಮ ದೇಶದಲ್ಲಿ ಬೆಳೆದ ಅಸಹಿಷ್ಣುತೆ, ವಿವಿಧ ಬಗೆಯ ಕದನಗಳಿಂದ ಕಂಗಾಲಾಗಿರುವ ಜಗತ್ತನ್ನೂ ಅಲುಗಾಡಿಸಿದ್ದು ದಿಟ. ಭಾರತದಲ್ಲಿ ಆಗುತ್ತಿರುವ ಈ ಬೆಳವಣಿಗೆಯ ಬಗ್ಗೆ ಮಾತನಾಡದ ವಿದೇಶಿ ನಾಯಕನಿಲ್ಲ. ನಿರಾಶ್ರಿತರ ಬೃಹತ್ ಸಮಸ್ಯೆಗೆ ಕಣ್ಣು ಮುಚ್ಚಿಕೊಳ್ಳಲು ಬಯಸಿದವರಿಗೆಲ್ಲ, ಇದು ಧುತ್ತೆಂದು ಕಣ್ಣಿಗೆ ಬಿದ್ದಿತು. ತಮ್ಮ ದೇಶಗಳಲ್ಲಿ ನಡೆಯುತ್ತಿರುವ ಮನುಕುಲ ವಿರೋಧಿ ಸಮರ, ಸಂಘರ್ಷಗಳನ್ನೂ ಮರೆಮಾಚಿ, ಅವರೆಲ್ಲ ಭಾರತದ ಈ ಹೊಸ ಭೂತದ ಬಗ್ಗೆ ಮಾತನಾಡಿದರು. ಜಗತ್ತಿನ ಹರಟೆ ಜಗುಲಿಗೆ ಇದಕ್ಕಿಂತ ಇನ್ನೇನು ವಿಷಯ ಬೇಕು!ಕೆಲವರು ಗುರುತಿಸುವ ಹಾಗೆ, ಈಗ ದೇಶದಲ್ಲಿ ಅಸಹಿಷ್ಣುತೆಯ ಯುದ್ಧ ಧಾರ್ಮಿಕ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮಧ್ಯೆ ನಡೆಯುತ್ತಿರುವುದಕ್ಕಿಂತ ಜೋರಾಗಿ, ಮತಧರ್ಮನಿರಪೇಕ್ಷತೆ ಮತ್ತು ಹುಸಿಧಾರ್ಮಿಕತೆಯ ಮಧ್ಯೆ ನಡೆಯುತ್ತಿದೆ. ಬಹುಸಂಖ್ಯಾತರು ಪ್ರದರ್ಶಿಸುವ ವಿಪರೀತ ನೈತಿಕ ಯಜಮಾನಿಕೆಯೇ ಅಸಹಿಷ್ಣುತೆಯ ಮೂಲ ಎಂಬ ಹೇಳಿಕೆಗೆ ನೂರೆಂಟು ಉದಾಹರಣೆಗಳು ಸಿಗುತ್ತಿವೆ.ಇತಿಹಾಸ, ಸಂಸ್ಕೃತಿ, ಪರಂಪರೆ ಎಲ್ಲವನ್ನೂ ಅಸಹಿಷ್ಣುತೆಯ ಕನ್ನಡಕ ಹಾಕಿಕೊಂಡು ನೋಡುವುದಂತೂ ನಮ್ಮ ಕಾಲದ ದುರಂತ. ಕಳೆದ ವಾರ ಮಹಾರಾಷ್ಟ್ರದಲ್ಲಿ ನಡೆದ 89ನೇ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ವ ಅಭಿಪ್ರಾಯಕ್ಕೆ ರಾಜಕೀಯ ಪಕ್ಷಗಳ ವಿರೋಧ ವ್ಯಕ್ತವಾಯಿತು. ಅಲ್ಲದೆ, ಮುಖ್ಯಮಂತ್ರಿ ಸೇರಿ ಎಲ್ಲ ರಾಜಕಾರಣಿಗಳೂ ರಾಜಕೀಯದಿಂದ ದೂರವಿರುವಂತೆ ಸಾಹಿತಿಗಳಿಗೆ ಉಚಿತ ಎಚ್ಚರಿಕೆ ನೀಡಿದರು- ಇವೆಲ್ಲವೂ ಆಳುವ ಸರ್ಕಾರವೂ ಅಸಹಿಷ್ಣುತೆಯನ್ನು ಪೋಷಿಸುವುದಕ್ಕೆ ಸ್ಪಷ್ಟ ನಿದರ್ಶನ. ಎಲ್ಲರೂ ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಿರುವಾಗ ಸಾಮಾನ್ಯ ಜನ ಅದರ ಬಗ್ಗೆ ಹೇಳುತ್ತಿದ್ದಾರೆ? ಇತಿಹಾಸದುದ್ದಕ್ಕೂ ಬಲಾಢ್ಯರ ನಡುವೆ ಎಂಥ ಸಂಘರ್ಷವಿದ್ದಾಗಲೂ ತಮ್ಮ ಸಹನೆ ಸೌಹಾರ್ದಗಳ ಸಣ್ಣಪುಟ್ಟ ನಡವಳಿಕೆಯ ಮೂಲಕ ಅದ್ಭುತ ಮಾದರಿಗಳನ್ನು ಕೊಟ್ಟು ನಾಗರಿಕತೆ- ಸಂಸ್ಕೃತಿಗೇ ದೊಡ್ಡ ಹೆಸರು ತಂದವರು ಅವರೇ ತಾನೆ? ಅಸಹಿಷ್ಣುತೆಯನ್ನು ಕುರಿತು ಅವರೇನು ಹೇಳುತ್ತಿಲ್ಲ, ಅನುಭವಿಸುತ್ತಿದ್ದಾರೆ ಅಷ್ಟೆ.ಚರ್ಚೆ, ಸಂಕಥನ, ಸೈದ್ಧಾಂತಿಕ ಸಮರಗಳೆಲ್ಲ ರಾಜಕಾರಣಿಗಳು, ವಿದ್ವಾಂಸರು, ಧಾರ್ಮಿಕ ನಾಯಕರೆಂಬ ದೊಡ್ಡವರ ಮಟ್ಟದಲ್ಲಿ ನಡೆಯುತ್ತದೆ. ಆದರೆ ಹಳ್ಳಿಗಳಲ್ಲಿ ಎದುರು ಮನೆಯವರ ಬಗ್ಗೆ ಹೆದರಿಕೊಂಡು ಬಾಳುವ ಸ್ಥಿತಿ ಸಾಮಾನ್ಯರಿಗೆ ಬರುತ್ತದೆ. ಆದ್ದರಿಂದ ಅಸಹಿಷ್ಣುತೆಯನ್ನು ಕುರಿತು ಎಲ್ಲರೂ ಮಾತನಾಡಬೇಕಾಗಿರುವುದು ಆ ಸಾಮಾನ್ಯರ ನೆಲೆಯಲ್ಲಿ. ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ, ಅದು ಅಸಹಿಷ್ಣುತೆಯ ಬಗ್ಗೆ ದಿಟ್ಟ ಅಸಹಿಷ್ಣುತೆ ತೋರಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.