ಶುಕ್ರವಾರ, ಮೇ 7, 2021
19 °C

ಗುಂಡು ತಗುಲಿ ಸಿಕ್ಕಿಬಿದ್ದ ಚೋಟ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದರೋಡೆ, ಕಳವು, ಹಲ್ಲೆ, ಕೊಲೆ ಸೇರಿದಂತೆ ಸುಮಾರು 16 ಪ್ರಕರಣಗಳ ಕುಖ್ಯಾತ ಆರೋಪಿ ಚೋಟ್ಯಾ ಯಾನೆ ಆನಂದ ಆಲಿಯಾಸ್ ಪ್ರಿಯದರ್ಶನ್ ಗಾಯಕವಾಡ್ (24) ಎಂಬಾತನನ್ನು ಶುಕ್ರವಾರ ಬೆಳಿಗ್ಗೆ ಗುಲ್ಬರ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆತನ ಮೂವರು ಸಹಚರರನ್ನು ಗುರುವಾರ ತಡರಾತ್ರಿಯೇ ಬಂಧಿಸಿದ್ದರು.ಘಟನೆ: ನಗರದ ಕೊಠಾರಿ ಭವನದ ಬಳಿಯ ಸೈಬರ್ ಕೆಫೆ  ಹಾಗೂ ಜೇವರ್ಗಿ ಕ್ರಾಸ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ  ಗುರುವಾರ ರಾತ್ರಿ ಚೋಟ್ಯಾ ಹಾಗೂ ಆತನ ಸಹಚರರು ದರೋಡೆ ನಡೆಸಿ ನಗ-ನಗದು ದೋಚಿದ್ದರು. ಐದು ವರ್ಷಗಳಲ್ಲಿ ನಗರದಲ್ಲಿ ನಡೆದ ದರೋಡೆ, ಕಳವು, ಹಲ್ಲೆ, ಕೊಲೆ ಪ್ರಕರಣಗಳಲ್ಲಿ ಛೋಟ್ಯಾ ಪೊಲೀಸರಿಗೆ ಬೇಕಾಗಿದ್ದನು. ತಕ್ಷಣ ಕಾರ್ಯತತ್ಪರಾದ ಪೊಲೀಸರು ನಗರದಲ್ಲಿ ಕಾರ್ಯಾಚರಣೆ ಶುರು ಮಾಡಿದರು.ಮಹಾತ್ಮ ಬಸವೇಶ್ವರ ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಬಿ.ಪಿ. ನೇತೃತ್ವದ ಪೊಲೀಸರ ತಂಡಕ್ಕೆ ತಡರಾತ್ರಿ 12.15ರ ಸುಮಾರಿಗೆ ಶರಣಶಿರಸಗಿಯ ಸುಣ್ಣದ ಗುಂಪಾ ಬಳಿ ನಾಲ್ಕು ಮಂದಿಯ ತಂಡ ಅಡಗಿರುವುದು ಪತ್ತೆಯಾಯಿತು. ಪೊಲೀಸರು ದಾಳಿ ನಡೆಸಿದ ಸಂದರ್ಭ ನಾಲ್ಕು ಮಂದಿಯೂ ತಲವಾರು ಹಿಡಿದುಕೊಂಡು ಪೊಲೀಸರ ಮೇಲೆ ಎರಗಿದ್ದಾಗಿ ತಿಳಿದುಬಂದಿದೆ.ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿದಾಗ ಮೂವರು ಶರಣಾಗಿದ್ದು, ಚೋಟ್ಯಾ ಪರಾರಿಯಾಗುವಲ್ಲಿ ಯಶಸ್ವಿಯಾದ. ಚಿಂಚೋಳಿ ಐನಾಪುರ ಮೂಲದ, ಸದ್ಯ  ಶರಣಶಿರಸಗಿ ನಿವಾಸಿ ರವಿ (27) ಶರಣಶಿರಸಗಿಯ ಯಲ್ಲಾಲಿಂಗ (19) ಚಿಂಚೋಳಿಯ ಚಿಮ್ಮ ಇದಲಾಯಿಯ, ಸದ್ಯ ಪಂಚಶೀಲ ನಗರದ ನಿವಾಸಿ ಸುನೀಲ (19) ಬಂಧನಕ್ಕೊಳಗಾದರು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪವಾರ್ ಹಾಗೂ ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ನೇತೃತ್ವದಲ್ಲಿ ನಗರದ ವಿವಿಧೆಡೆ  ಪೊಲೀಸರ ತಂಡಗಳು ಪತ್ತೆ ಕಾರ್ಯಾಚರಣೆ  ಆರಂಭಿಸಿದವು.ಸೆರೆ ಸಿಕ್ಕ: ನಗರ ಹೊರವಲಯದ ಸಾವಳಗಿ ಸಮೀಪದ ಕರೆಯ ಬಳಿ ಶುಕ್ರವಾರ ಬೆಳಿಗ್ಗೆ 11ಕ್ಕೆ ಚಂದ್ರಶೇಖರ್ ನೇತೃತ್ವದ ತಂಡಕ್ಕೆ ಚೋಟ್ಯಾ ಮತ್ತೆ ಪತ್ತೆಯಾದ. ಶರಣಾಗುವಂತೆ ಆಗ್ರಹಿಸಿದ ಸಂದರ್ಭದಲ್ಲಿ ತಲವಾರಿನಿಂದ ದಾಳಿಗೆ ಯತ್ನಿಸಿದ್ದಾನೆ. ಪೊಲೀಸರು ಮತ್ತೆ ಐದು ಸುತ್ತು ಗುಂಡಿನ ದಾಳಿ ನಡೆಸಿದರು. ತೊಡೆಗೆ ಗುಂಡು ತಗುಲಿದ್ದ ಚೋಟ್ಯ ಕೊನೆಗೂ ಬಲೆಗೆ ಬಿದ್ದಿದ್ದಾನೆ ಎಂದು ಕಾರ್ಯಾಚರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.ಶರಣಶಿರಸಗಿಯಿಂದ ಒಳರಸ್ತೆ ಹಳ್ಳದ ನಾಲೆಯ ಮೂಲಕ ಆತ ಸಾವಳಗಿಗೆ ಬಂದಿದ್ದ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಚೋಟ್ಯಾ ಬಂಧನಕ್ಕೆ ಹಲವು ದಿನಗಳಿಂದ ಪೊಲೀಸರು ಜಾಲ ಬೀಸಿದ್ದರು ಎಂದು ತಿಳಿದು ಬಂದಿದೆ.ಗಾಯಗೊಂಡಿರುವ ಚೋಟ್ಯಾನನ್ನು ಗುಲ್ಬರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಚಂದ್ರಶೇಖರ್ ನೇತೃತ್ವದಲ್ಲಿ ತಂಡದಲ್ಲಿ ವಿಶ್ವವಿದ್ಯಾಲಯ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪಂಡಿತ ಸಗರ, ಗ್ರಾಮೀಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆನಂದರಾವ್ ಹಾಗೂ ಎಂ.ಬಿ.ನಗರ ಸಬ್ ಇನ್‌ಸ್ಪೆಕ್ಟರ್ ಸಂಜೀವಕುಮಾರ್ ಹಾಗೂ ಫರಹತಾಬಾದ್ ಸಬ್ ಇನ್‌ಸ್ಪೆಕ್ಟರ್ ಭೋಜರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.ದೂರು: ಹೋಂಡಾ ಆ್ಯಕ್ಟಿವಾ ಮೇಲೆ ಬಂದ ಚೋಟ್ಯಾ ಹಾಗೂ ಸಹಚರರು ಗುರುವಾರ ರಾತ್ರಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿ 3,000 ರೂಪಾಯಿ ಕಿತ್ತುಕೊಂಡಿದ್ದಾರೆ. ಹೊರಗಡೆ ನಿಂತಿದ್ದ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೆಟ್ರೋಲ್ ಪಂಪ್ ಕ್ಯಾಶಿಯರ್ ಭೀಮಾಶಂಕರ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.