ಮಂಗಳವಾರ, ಮೇ 11, 2021
24 °C

ನೂರಾರು ಸಮಸ್ಯೆಗಳ ನಾಗೂರ

ಪ್ರಜಾವಾಣಿ ವಾರ್ತೆ ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈ ಊರೊಳಗೆ ಕಾಲಿಡುವುದೇ ತಡ! ಚರಂಡಿ, ಹದಗೆಟ್ಟ ರಸ್ತೆ, ಬತ್ತಿದ ಕುಡಿಯುವ ನೀರಿನ ಟ್ಯಾಂಕ್‌ಗಳ ದರ್ಶನವಾಗುತ್ತದೆ. ಒಂದೆರಡು ಹೆಜ್ಜೆ ಮುಂದಿಟ್ಟರೆ ಸಾಕು, ಸೊಳ್ಳೆ, ನೊಣಗಳು ಹಾರಾಡುತ್ತ ಬಂದು ಮುಖಕ್ಕೆ ಮುತ್ತಿಕ್ಕಲು ಪ್ರಯತ್ನಿಸುತ್ತವೆ.ಇದು ಗುಲ್ಬರ್ಗ ತಾಲ್ಲೂಕಿನ ಮಹಾಗಾಂವ ಕ್ರಾಸ್‌ನಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಹಳ್ಳಿಯೊಂದರ ಚಿತ್ರಣವಿದು.ಈಗ್ಗೆ ಏಳೆಂಟು ವರ್ಷಗಳ ಹಿಂದೆ ಗ್ರಾಮದ ಸೆರಗಿನಲ್ಲಿರುವ ನದಿ ಉಕ್ಕಿ ಹರಿದ ಪರಿಣಾಮವಾಗಿ ಸಾಕಷ್ಟು ಮನೆಗಳು ಜಲಾವೃತಗೊಂಡಿದ್ದವು. ಮನೆ ಕಳೆದುಕೊಂಡವರು ಸರ್ಕಾರ ನಿರ್ಮಿಸಿದ ಪುನರ್ವಸತಿ ಕೇಂದ್ರಕ್ಕೆ ವರ್ಗಾವಣೆಯಾದರೆ ಶೇ 80ರಷ್ಟು ಜನ ಇನ್ನೂ ಅದೇ ನರಕ ಸದೃಶ ವಾತಾವರಣದಲ್ಲಿ ವಾಸವಾಗಿದ್ದಾರೆ. 15 ಜನ ಗ್ರಾಮ ಪಂಚಾಯಿತಿ ಸದಸ್ಯರು, ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಗ್ರಾಮವನ್ನು ಪ್ರತಿನಿಧಿಸುತ್ತಿದ್ದರೂ ಸರ್ಕಾರದ ಯಾವುದೇ ಮೂಲಸೌಕರ್ಯಗಳು ದೊರೆತಿರುವುದಿಲ್ಲ.ಬೆಣ್ಣೆತೊರಾ ಯೋಜನೆಯಲ್ಲಿ ಮುಳುಗಡೆಯಾದ ಈ ಗ್ರಾಮದ ಹೆಸರು ನಾಗೂರ ಎಂದು ಕರೆಯಲಾಗುತ್ತದೆ. ಸುಮಾರು 3,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಲಿಂಗಾಯತ, ಕುರುಬ, ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಹಾಲು ಬಸವೇಶ್ವರ, ಹಜರತ್ ಕಟ್ಟೆ ನವಾಜ್ ದರ್ಗಾ ಎಂಬ ಎರಡು ಪ್ರಸಿದ್ಧ ದೇವಸ್ಥಾನಗಳಿವೆ.ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಆರೋಗ್ಯ ಉಪಕೇಂದ್ರ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಗ್ರಂಥಾಲಯ, ಮಹಿಳಾ ಶೌಚಾಲಯ ಮುಂತಾದ ಕಟ್ಟಡಗಳೇನೋ ಇವೆ. ಆದರೆ ಇಲ್ಲಿ ವಾಸವಾಗಿರುವ ಜನರಿಗೆ ಇವುಗಳ ಸೌಲಭ್ಯವೇ ದೊರಕುತ್ತಿಲ್ಲ.ಕುರಿದೊಡ್ಡಿಯಂತಾದ ಶಾಲೆ:


ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಕಟ್ಟಡವಿಲ್ಲದ್ದರಿಂದ ಪ್ರಾಥಮಿಕ ಶಾಲೆಯಲ್ಲೇ ಬೆಳಗಿನ ವೇಳೆ ತರಗತಿ ನಡೆಯುತ್ತವೆ. ಸುಮಾರು 175 ವಿದ್ಯಾರ್ಥಿಗಳಿರುವ ಈ ಶಾಲೆಗೆ 6 ಜನ ಶಿಕ್ಷಕರಿದ್ದಾರೆ. ಇದೇ ಸ್ಥಳಲ್ಲಿ ಉರ್ದು ಪ್ರಾಥಮಿಕ ಶಾಲೆಯೂ ಇದೆ. ಆದರೆ ಶಾಲೆಗೆ ಕಾಂಪೌಂಡ್ ಇಲ್ಲ! ಹೀಗಾಗಿ ಶಾಲಾ ಆವರಣದಲ್ಲಿ ಕಾಲಿಟ್ಟರೆ ಕುರಿದೊಡ್ಡಿಯಲ್ಲಿ ಪ್ರವೇಶ ಮಾಡಿದ ಅನುಭವ ಆಗುತ್ತದೆ.ಬಳಕೆಗೆ ಬಾರದ ಮಹಿಳಾ ಶೌಚಾಲಯ:

ಮಹಿಳೆಯರಿಗಾಗಿ ಎರಡು ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದರೂ ಅವುಗಳಿಗೆ ನೀರಿನ ಪೂರೈಕೆ ಇಲ್ಲ. ಶೌಚಾಲಯಗಳನ್ನು ಬಳಸದೇ ಇರುವುದರಿಂದ ಅವುಗಳ ಸುತ್ತಮುತ್ತ ಜಾಲಿಕಂಟಿ ಬೆಳೆದು ನಿಂತಿದೆ. ಗ್ರಾಮದಲ್ಲಿ ಲೈಟಿನ ಕಂಬಳಿವೆ. ಆದರೆ ಅವುಗಳಿಗೆ ಲೈಟ್ ಅಳವಡಿಸಿಲ್ಲ. ಹೀಗಾಗಿ ಅವು ಹಳೆಯ ಕಾಲದ ಪಳಿಯುಳಿಕೆಯಂತೆ ಕಂಡು ಬರುತ್ತಿವೆ. ವಿದ್ಯುತ್ ಸರಬರಾಜು ನಿರ್ವಹಣೆ ಕೂಡ ಸಮರ್ಪಕವಾಗಿಲ್ಲ. ಹೀಗಾಗಿ ಅಲ್ಲಿನ ಜನ ಕತ್ತಲಲ್ಲಿಯೇ ಕಾಲ ಕಳೆಯುಂತಾಗಿದೆ.ಈಚೆಗೆ ತಹಸೀಲ್ದಾರರ ನೇತೃತ್ವದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮುಂದೆ ಅಲ್ಲಿನ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವರೂ ಜನರ ಸಮಸ್ಯೆಗಳನ್ನು ಕೇಳಿಸಿಕೊಂಡಿದ್ದಾರೆ. ಇದು ಅನುಗಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಈವರೆಗೂ ಯಾರಿಂದಲೂ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ ಎಂಬುದು ವಾಸ್ತವ ಸಂಗತಿ.

ಚಿತ್ರಗಳು: ಮಲ್ಲಿಕಾರ್ಜುನ ಮೂಲಗೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.