ಭಾನುವಾರ, ಮೇ 9, 2021
26 °C

ಅಧಿಕಾರಿ ಕಿವಿ ಹಿಂಡುವವರು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿ ಕಿವಿ ಹಿಂಡುವವರು ಯಾರು?

ಗುಲ್ಬರ್ಗ: ನಗರದ ತಗ್ಗು ಪ್ರದೇಶಗಳಿಂದ ಕೂಡಿದ ರಸ್ತೆಗಳಿಗೆ ಮುಕ್ತಿ ಒದಗಿಸಿ, ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಸರ್ಕಾರಿ ಕಚೇರಿ, ಇಲಾಖೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ, ಲೋಕಾಯುಕ್ತ ಸಂಸ್ಥೆ ಸಾರ್ವಜನಿಕರ ದೂರುಗಳಿಗೆ ತಾಂತ್ರಿಕ ತೊಂದರೆ ಹೇಳಿ ಪ್ರಕರಣಗಳನ್ನು ತಿರಸ್ಕರಿಸದೆ ಹೆಚ್ಚಿನ ಮುತುವರ್ಜಿ ವಹಿಸಿ ನ್ಯಾಯ ಒದಗಿಸಿಕೊಡಬೇಕು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಜನಲೋಕಪಾಲ ವ್ಯವಸ್ಥೆ ಇರುವಂತೆ ಜನಾಭಿಪ್ರಾಯ ಸದನಕ್ಕೆ ಕೂಡ ಮಹತ್ವ ಸಿಗಬೇಕು ಹೀಗೆ ಸಾಕಷ್ಟು ವಿಧದ ಪ್ರಶ್ನೆ, ಸಲಹೆ, ಸೂಚನೆಗಳ ಮಹಾಪೂರವೇ ಹರಿದು ಬಂದಂತಿತ್ತು.ಇದು ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ  ಭ್ರಷ್ಟಾಚಾರ ನಿರ್ಮೂಲನೆ ಮತ್ತು ಉತ್ತಮ ಆಡಳಿತದ ಬಗ್ಗೆ ಸಮಾಲೋಚನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಎದುರು, ಸ್ವಯಂ ಸೇವಾ ಸಂಘಗಳ ಪದಾಧಿಕಾರಿಗಳು, ಸಮಾಜಸೇವಕರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ತೋಡಿಕೊಂಡ ಸಮಸ್ಯೆಗಳಿವು.ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಜನರ ಕುಂದುಕೊರತೆಗಳನ್ನು ಸಾವಧಾನದಿಂದ ಆಲಿಸಿದ ನ್ಯಾಯಮೂರ್ತಿ ಶಿವರಾಜ ಪಾಟೀಲ, ಸ್ಥಳದಲ್ಲೇ ಪರಿಹಾರ ಸೂಚಿಸುವುದರ ಜೊತೆಗೆ ಭ್ರಷ್ಟಾಚಾರದ ಬಗ್ಗೆ ಕೇವಲ ಭಾಷಣ ಬೇಡ. ಅದನ್ನು ಕಿತ್ತು ಹಾಕುವ ಕುರಿತು ಸಲಹೆ ನೀಡಿ ಎಂದು ಪದೇ ಪದೇ ಮನವಿ ಮಾಡಿಕೊಂಡರು.ನಗರದ ಬಹುತೇಕ ರಸ್ತೆಗಳಂತೆ ಶರಣಬಸವೇಶ್ವರ ದೇವಸ್ಥಾನದ ಎದುರಿನ ರಸ್ತೆ ಹದಗೆಟ್ಟಿದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸೌಲಭ್ಯಗಳಿಲ್ಲ. ಜಿಲ್ಲಾಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದಕ್ಕೆ ಚುರುಕು ಮುಟ್ಟಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ಲೋಕಾಯುಕ್ತರಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮನವಿ ಮಾಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರು, ಎಲ್ಲ ಸಮಸ್ಯೆಗಳ ಏಕಕಾಲದಲ್ಲಿ ಕಡಿಮೆಯಾಗುವುದಿಲ್ಲ. ನಗರದ ರಸ್ತೆ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಸ್ಟೆಲ್ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದರು.ಕೆಐಡಿಬಿ ಯೋಜನೆ ಅಡಿಯಲ್ಲಿ ಗ್ರಾಮಸಭೆ, ಪರಿಸರ ಇಲಾಖೆಯ ಅನುಮತಿ ಪಡೆಯದೇ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ನಗರದ ಆಳಂದ ರಸ್ತೆಯಲ್ಲಿರುವ  2,200 ಎಕರೆ ಜಾಗ ಭೂಸ್ವಾಧೀನಪಡಿಸಿಕೊಳ್ಳುವಾಗ ಜಿಲ್ಲಾಡಳಿದಿಂದ ಲೋಪವಾಗಿದೆ ಎಂದು ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಪ್ರಶ್ನಿಸಿದಾಗ, ಕೆಐಡಿಬಿ ಬಗ್ಗೆ ಇನ್ನೂ ವಿವರ ನೀಡಿರಿ. ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಲೋಕಾಯುಕ್ತರು ತಿಳಿಸಿದರು.ಉದ್ಯೋಗ ಆಯ್ಕೆ ಸಂದರ್ಭದಲ್ಲೇ ಭ್ರಷ್ಟಾಚಾರ ಆರಂಭವಾಗುತ್ತಿದ್ದು, ಇದನ್ನು ಅಲ್ಲಿಯೇ ಚಿವುಟಿ ಹಾಕಲು ಕ್ರಮ ಕೈಗೊಳ್ಳಿ ಎಂದು ಕೃಷಿಇಲಾಖೆಯ ಸಮದ್ ಪಟೇಲ್ ಹೇಳಿದರೆ, ಸರ್ಕಾರಿ ಅಧಿಕಾರಿಗಳನ್ನು ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಸಿ.ಎಸ್. ಮುಧೋಳ್ ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಶಿವಶರಣಪ್ಪ ಸಜ್ಜನ್ ಮಾತನಾಡಿ, ಪ್ರಾಮಾಣಿಕರಾದವರಿಗೂ ಈಗಿನ ಕಾಲದಲ್ಲಿ ಜನ ಅನುಮಾನದಿಂದ ನೋಡುತ್ತಿದ್ದಾರೆ. ಇದಕ್ಕೆ ಏನು ಮಾಡಬೇಕು ಎಂದಾಗ, ನೀವು ಪ್ರಾಮಾಣಿಕನಾಗಿದ್ದಾಗ ಯಾರಿಗೂ ಹೆದರಬೇಕಿಲ್ಲ. ಆತ್ಮಸ್ಥೈರ್ಯ ಅಗತ್ಯ ಎಂದು ಲೋಕಾಯುಕ್ತರು ತಿಳಿಸಿದರು.ಹೀಗೆ ಸಭೆಯುದ್ದಕ್ಕೂ ಮತ್ತೆ ಸಾರ್ವಜನಿಕರಿಂದ ಅಹವಾಲುಗಳೇ ಕೇಳಿ ಬಂದಾಗ ನ್ಯಾಯಮೂರ್ತಿ ಲೋಕಾಯುಕ್ತ ಶಿವರಾಜ ಪಾಟೀಲರು ಅಹವಾಲುಗಳಲ್ಲೇ ಸಲಹೆಗಳನ್ನು ಆಯ್ಕೆ ಮಾಡಿಕೊಂಡು ಆಡಳಿತ ನಡೆಸಲಾಗುವುದು ಎಂದು ಭರವಸೆ ನೀಡಿದರು.ಲೋಕಾಯುಕ್ತ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತ ರಜನೀಶ ಗೋಯೆಲ್, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಲೋಕಾಯುಕ್ತ ಎಸ್ಪಿ ಬಿ.ಎನ್. ನೀಲಗಾರ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.