ಬುಧವಾರ, ಮೇ 12, 2021
24 °C

ಕಿಷ್ಕಿಂಧೆಯಂಥ ಕಟ್ಟಡದಲ್ಲಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಕ್ಕಟ್ಟಾದ ಜಾಗ; ಬೆಳಕಿನ ಸುಳಿವಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯಕ್ಕೆ ಬಯಲೇ ಗತಿ. ನಸುಕಿನಲ್ಲಿ ಬಂದು ಸರದಿಯಲ್ಲಿ ನಿಂತರೂ ಪ್ರಮಾಣಪತ್ರ ಸಿಕ್ಕೀತೆಂಬ ಗ್ಯಾರಂಟಿಯಿಲ್ಲ... ಶಿಷ್ಯವೇತನ (ಸ್ಕಾಲರ್‌ಶಿಪ್) ಮಂಜೂರಾತಿಗಾಗಿ ಬೇಕಾದ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಮಕ್ಕಳು ಅನುಭವಿಸಬೇಕಾದ ತಾಪತ್ರಯ ಅಷ್ಟಿಷ್ಟಲ್ಲ.ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಜಾತಿ ಆದಾಯ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡುವಂತೆ ಸಂಬಂಧಿತ ಇಲಾಖೆಯು ಆದೇಶ ನೀಡಿದೆ. ಆಯಾ ಶಾಲೆಗಳ ಶಿಕ್ಷಕರು ಅಥವಾ ಮುಖ್ಯಸ್ಥರು ಈ ಸಂಬಂಧ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ಜಾತಿ ಆದಾಯ ಪ್ರಮಾಣಪತ್ರ ತಂದವರಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಈ ಪ್ರಮಾಪತ್ರ ಪಡೆಯಲು ವಿದ್ಯಾರ್ಥಿಗಳು ಹರಸಾಹಸ ಮಾಡಬೇಕಾಗಿದೆ.ಗುಲ್ಬರ್ಗ ನಗರದ ವಿದ್ಯಾರ್ಥಿಗಳು ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಈ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಇರುವ ಕಟ್ಟಡವೊಂದರ ನೆಲಮಹಡಿಯಲ್ಲಿದೆ. ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸುವ ಹೊತ್ತಿಗೆ ವಿದ್ಯಾರ್ಥಿಗಳು ಸುಸ್ತಾಗುವಂತಾಗಿದೆ.ಕಳೆದ ಐದು ದಿನಗಳಿಂದ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೇ ಸಾಲು ಆರಂಭವಾಗಿ, ದೂರದಲ್ಲಿರುವ ಅಂಚೆ ಕಛೇರಿತನಕ ತಲುಪುತ್ತದೆ! 10 ಗಂಟೆ ಹೊತ್ತಿಗೆ `ನೆಮ್ಮದಿ ಕೇಂದ್ರ~ದ ಮುಂದೆ ನೂಕುನುಗ್ಗಲು ಆರಂಭವಾಗುತ್ತದೆ. ಶಾಲೆ ಬಿಟ್ಟು ಬಂದು ಅರ್ಜಿ ಸಲ್ಲಿಕೆಗೆ ನಿಲ್ಲಬೇಕಾದ ಅನಿವಾರ್ಯತೆ ಮಕ್ಕಳದು.“ಶಾಲೆಯ ಮುಖ್ಯಗುರುಗಳಿಂದ ದೃಢೀಕರಣ ಪತ್ರ, ಪಡಿತರ ಕಾರ್ಡ್ ಝೆರಾಕ್ಸ್ ಹಾಗೂ ನೋಟರಿಯಿಂದ ಪಡೆದ ಪ್ರಮಾಣಪತ್ರಗಳನ್ನು ತಂದು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದೇವೆ. ಸಂಜೆ 5 ಗಂಟೆಯಾದರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಇವತ್ತು ಆಗದಿದ್ದರೆ ಮತ್ತೆ ನಾಳೆ ಬರಬೇಕು. ಕೆಲವೊಬ್ಬರು ಎರಡು ದಿನ ಕಾಯ್ದರೂ ಅರ್ಜಿ ಸಲ್ಲಿಸಲು ಆಗಿಲ್ಲ” ಎಂದು ಮಗನೊಂದಿಗೆ ಬಂದಿದ್ದ ಬಸವನಗರದ ನಿವಾಸಿ ಚಂದಪ್ಪ ಹೇಳಿದರು.ದುರ್ವಾಸನೆ- ಸೆಖೆ: ಇಕ್ಕಟ್ಟಾದ ಜಾಗ ಹೊಂದಿರುವ ಕೇಂದ್ರದಲ್ಲಿ ಮಕ್ಕಳಿಗೆ ಕುಡಿಯಲು ನೀರು ಸಹ ಇಲ್ಲ. ಹಗಲು ಹೊತ್ತಿನಲ್ಲೂ ಕತ್ತಲೆ ಆವರಿಸುತ್ತಿದೆ. ಗುಟಕಾ, ತಂಬಾಕು ತಿಂದು ಅಲ್ಲಲ್ಲೇ ಉಗುಳಿದ್ದು, ದುರ್ವಾಸನೆ- ಸೆಖೆಯಲ್ಲಿ ಮಕ್ಕಳು ತಾಸುಗಟ್ಟಲೇ ಕಾಯಬೇಕು.`ನೆಮ್ಮದಿ ಕೇಂದ್ರ~ದಲ್ಲಿ ಅರ್ಜಿ ಸ್ವೀಕರಿಸಿ, ಭಾವಚಿತ್ರ ತೆಗೆಯಲಾಗುತ್ತಿದೆ. ಇದಕ್ಕಾಗಿ ಮೂರ್ನಾಲ್ಕು ಸಿಬ್ಬಂದಿ ಸತತ ಕೆಲಸ ಮಾಡುತ್ತಿದ್ದಾರೆ. ಆದರೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಹಾಗೂ 3 ಗಂಟೆಯಿಂದ 5.30ರವರೆಗೆ ಮಾತ್ರ ಈ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಸಾಕಷ್ಟು ಮಕ್ಕಳು ಅರ್ಜಿ ಸಲ್ಲಿಸಲು ಸಾಧ್ಯವಾಗದೇ ವಾಪಸು ತೆರಳಬೇಕಾಗಿದೆ. “ಮುಂಜಾನಿ ಎಂಟಕ್ಕ ಬಂದು ನಿಂತೀವ್ರಿ. ಟಿಫಿನ್, ಊಟ ಎಲ್ಲ ಇಲ್ಲೇ ಹೋಟಾಲ್‌ದಾಗ ಮಾಡೀವಿ. ಈಗ ಟೈಮ್ ಆತಂದ್ರ ಮತ್ ನಾಳಿಗೆ ಬರ‌್ರಿ ಅಂತಾರ‌್ರಿ. ಮನ್ಯಾಗಿನ್ ಕೆಲ್ಸ ಬಿಟ್ಟು ಮುಂಜಾನಿಂದ ಬಂದ್ರೂ ಏನೂ ಆಗ್ಲಿಲ್ರಿ” ಎಂದು ಶಾಂತವ್ವ ಅಳಲು ತೋಡಿಕೊಂಡಳು.ಪ್ರಮಾಣಪತ್ರಕ್ಕಾಗಿ ಅರ್ಜಿ  ಸಲ್ಲಿಸಲು ಶಾಲೆ ಬಿಟ್ಟು ಸರದಿಯಲ್ಲಿ ನಿಲ್ಲಬೇಕಾಗಿ ಬಂದಿರುವ   ವಿದ್ಯಾರ್ಥಿಗಳ ತಾಪತ್ರಯ ಗಮನಿಸಿ, ಅಧಿಕಾರಿಗಳು ಏನಾದರೂ ಪರಿಹಾರ ಕಲ್ಪಿಸಬೇಕು. ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ   ಕೇಂದ್ರಗಳಲ್ಲಿ ಸರದಿಯಲ್ಲಿ ನಿಂತ ಮಕ್ಕಳಿಗೆ ಕುಡಿಯುವ    ನೀರನ್ನಾದರೂ ಒದಗಿಸಬೇಕು ಎಂದು ಪಾಲಕರು ತಹಸೀಲ್ದಾರರಲ್ಲಿ ಮನವಿ  ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.