ಸಂತಸದಲ್ಲೂ ಸಮಸ್ಥಿತಿ

7
ವಾರ

ಸಂತಸದಲ್ಲೂ ಸಮಸ್ಥಿತಿ

Published:
Updated:

ಸಂತಸದಲ್ಲೂ ಸಮಸ್ಥಿತಿ

ಬೆಂಗಳೂರು, ಫೆ. 13– ‘ತುಂಬಾ ಸಂತೋಷವಾಗಿದೆಯಪ್ಪ’ ಅಂದರು ನನ್ನ ಕೈಕುಲುಕಿ.

ಹತ್ತು ನಿಮಿಷ ಕಾಲ ಮಾತುಕತೆ ಮುಗಿಸಿ ಏಳುವಾಗ ಮತ್ತೆ ಹೇಳಿದರು. ‘ಒಳ್ಳೆ ವಾರ್ತೆ ತಂದಿದ್ದೀರಿ, ನಾನು ಕೃತಜ್ಞ’.

ಸಂಜೆ ಸುಮಾರು ಐದುಗಂಟೆ ಹೊತ್ತಿನಲ್ಲಿ ಬಸವನಗುಡಿ ಕ್ಲಬ್‌ನಲ್ಲಿ ಗೆಳೆಯರೊಡನೆ ಇಸ್ಪೀಟು ಆಡುತ್ತ ಕುಳಿತಿದ್ದ ಮಾಸ್ತಿ ಅವರಿಗೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದ ಸುದ್ದಿಯನ್ನು ಪ್ರಥಮವಾಗಿ ಮುಟ್ಟಿಸಿದವರು ‘ಪ್ರಜಾವಾಣಿ’ ಪ್ರತಿನಿಧಿ.

ಟೇಬಲ್ ಮುಂದೆ ಕುಳಿತಿದ್ದ ಇತರೆ ‘ರಮ್ಮಿ’ ಸಹೋದ್ಯೋಗಿಗಳು ಕೂಡಲೇ ಎದ್ದರು. ಕೈಕುಲುಕಿ ‘ಚಾಕಲೇಟ್ ಬರುತ್ತೆ’ ಎಂದು ರಾಗವಾಗಿ ಕೇಳಿದಾಗ, ಮಾಸ್ತಿಯವರು ನಗುತ್ತ ಸೇರಿಸಿದರು, ‘ಚಾಕಲೇಟು ಯಾಕೆ? ಹೆಚ್ಚು ಬರುತ್ತೆ’.

ಆಟ ಮುಂದುವರಿಸಿಯೇ ಇದ್ದರು. ಅವರಿಗೆ ಸಂತೋಷವಾಗಿತ್ತು. ‘ಇದನ್ನು ತಿಳಿಸಲೆಂದೇ ಬಂದಿರಾ?’

‘ಹೌದು, ಜತೆಗೆ ಒಂದೆರಡು ನಿಮಿಷ ಮಾತನಾಡಿ ಹೋಗೋಣ ಎಂದು ಬಂದೆ’. ‘ಬನ್ನಿ ಕುಳಿತುಕೊಳ್ಳಿ’. ‌ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ಪ್ರಶಸ್ತಿ ಬಂದಿರುವುದು ಸಣ್ಣಕಥೆಗಳ ಸಂಕಲನಕ್ಕೆ. 77ರ ಹರೆಯದ ಶ್ರೀ ಮಾಸ್ತಿ ಅವರು 13 ಕಥೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 1921ರಲ್ಲಿ ಪ್ರಥಮ ಪುಸ್ತಕ ಬೆಳಕಿಗೆ ಬಂತು. ಅಂದು ಎ.ಆರ್. ಕೃಷ್ಣಶಾಸ್ತ್ರಿ ಅವರು ‘ಪ್ರಬುದ್ಧ ಕರ್ನಾಟಕ’ದಲ್ಲಿ ಸುಂದರ ವಿಮರ್ಶೆ ಬರೆದಿದ್ದರು. ಅಂದೇ ಸಣ್ಣ ಕಥೆಗಳ ‘ಶ್ರೀನಿವಾಸ’ರ ಜನನ.

ಕೇಂದ್ರ ಖಾತೆಗಳ ಮರು ಹಂಚಿಕೆ

ನವದೆಹಲಿ, ಫೆ. 13– ಕೇಂದ್ರ ಸಂಪುಟದ ಖಾತೆಗಳ ಮರು ಹಂಚಿಕೆಯನ್ನು ಪ್ರಧಾನಿ ಇಂದಿರಾಗಾಂಧಿ ಇಂದು ಇಲ್ಲಿ ಪ್ರಕಟಿಸಿದರು.

ಖಾತೆ ಮರುಹಂಚಿಕೆಯಲ್ಲಿ ಈಗಿರುವವರನ್ನು ಯಾರನ್ನೂ ಕೈಬಿಟ್ಟಿಲ್ಲ, ಹೊಸಬರನ್ನೂ ತೆಗೆದುಕೊಂಡಿಲ್ಲ. ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಕಟವಾದ ಈ ಬದಲಾವಣೆಗಳು ಪ್ರಧಾನಿಯ ಹಲವು ಸಹೋದ್ಯೋಗಿಗಳಿಗೆ ಆಶ್ಚರ್ಯವನ್ನುಂಟು ಮಾಡಿವೆ.

ರೈಲ್ವೆ ಸಚಿವ ಸಿ.ಎಂ. ಪೂಣಚ್ಚ ಅವರಿಗೆ ಉಕ್ಕು ಮತ್ತು ಭಾರೀ ಎಂಜಿನಿಯರಿಂಗ್ ಖಾತೆಯನ್ನೂ, ಡಾ. ವಿ.ಕೆ.ಆರ್.ವಿ. ರಾವ್ ಅವರಿಗೆ ಶಿಕ್ಷಣ ಮತ್ತು ಯುವಜನ ಖಾತೆಯನ್ನೂ ವಹಿಸಲಾಗಿದೆ. ವಾಣಿಜ್ಯ ಸಚಿವ ದಿನೇಶ್‌ಸಿಂಗ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !