ಫಿಫಾ ವಿಶ್ವಕಪ್‌: ಪ್ರೀ ಕ್ವಾರ್ಟರ್‌ಗೆ ಪೋರ್ಚುಗಲ್‌

7
ಕ್ವರೆಸ್ಮಾ, ಕರೀಮ್‌ ಗೋಲು: ಹೊರಬಿದ್ದ ಇರಾನ್‌ ತಂಡ

ಫಿಫಾ ವಿಶ್ವಕಪ್‌: ಪ್ರೀ ಕ್ವಾರ್ಟರ್‌ಗೆ ಪೋರ್ಚುಗಲ್‌

Published:
Updated:
ಗೋಲು ಗಳಿಸಿದ ನಂತರ ತಂಡದ ಸಹ ಆಟಗಾರರೊಂದಿಗೆ ಸಂಭ್ರಮಿಸಿದ ಇರಾನ್‌ನ ಕರೀಮ್‌ ಅನ್ಸಾರಿಫರಾದ್‌ (ಎಡ)  ಎಪಿ ಚಿತ್ರ

ಸರಾನ್ಸ್ಕ್‌: ಕರೀಮ್‌ ಅನ್ಸಾರಿಫರಾದ್‌ ಅವರು ಹೆಚ್ಚುವರಿ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಇರಾನ್ ತಂಡವು ಪೋರ್ಚುಗಲ್‌ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. 

ಸೋಮವಾರ ತಡರಾತ್ರಿ ಇಲ್ಲಿನ ಮೊರ್ದೊವಿಯಾ ಅರೆನಾದಲ್ಲಿ  ನಡೆದ ಪಂದ್ಯವು 1–1ರಲ್ಲಿ ಡ್ರಾನಲ್ಲಿ ಅಂತ್ಯ ವಾಯಿತು. ಈ ಮೂಲಕ ಪಂದ್ಯದ ಸೋಲು ತಪ್ಪಿಸಿಕೊಂಡರೂ, ಇರಾನ್‌ ತಂಡವು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದೆ. 

ಈ ಪಂದ್ಯವು ಸಮಬಲದಲ್ಲಿ ಕೊನೆಗೊಂಡ ಕಾರಣ ಪೋರ್ಚುಗಲ್‌ ತಂಡವು ಒಟ್ಟು ಐದು ಪಾಯಿಂಟ್‌ಗಳನ್ನು ಕಲೆಹಾಕಿತು. ಬಿ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಪ್ರೀ ಕ್ವಾರ್ಟರ್‌ಫೈನಲ್‌ ಹಂತ ಪ್ರವೇಶಿಸಿದೆ. ಸ್ಪೇನ್‌ ವಿರುದ್ದದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಪೋರ್ಚುಗಲ್‌, ಮೊರೊಕ್ಕೊ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿತ್ತು. 

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದವು. ಪೋರ್ಚು ಗಲ್‌ನ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಹಲವು ಬಾರಿ ಚೆಂಡು ಸಿಗದಂತೆ ನೋಡಿಕೊಳ್ಳುವಲ್ಲಿ ಇರಾನ್‌ನ ರಕ್ಷಣಾ ವಿಭಾಗದ ಆಟಗಾರರು ಯಶಸ್ವಿಯಾದರು. ಹಾಗಾಗಿ, ಮೊದಲ ಪಂದ್ಯದಲ್ಲಿ ಮೂರು ಹಾಗೂ ಎರಡನೇ ಪಂದ್ಯದಲ್ಲಿ ಒಂದು ಗೋಲು ದಾಖಲಿಸಿದ್ದ ರೊನಾಲ್ಡೊ ಅವರು ಈ ಪಂದ್ಯದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಕಷ್ಟಪಡಬೇಕಾಯಿತು. 

ಪಂದ್ಯದ ಮೊದಲಾರ್ಧದ ಕೊನೆಯಲ್ಲಿ ಪೋರ್ಚುಗಲ್‌ನ ರಿಕಾರ್ಡೊ ಕ್ವರೆಸ್ಮಾ ಅವರು (45ನೇ ನಿ.) ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀ‌ಯಾರ್ಧದ ಆರಂಭದಿಂದಲೂ ಗೋಲು ಗಳಿಸುವ ಇರಾನ್‌ ತಂಡದ ಹಲವು ಪ್ರಯತ್ನಗಳನ್ನು ಪೋರ್ಚುಗಲ್‌ನ ರಕ್ಷಣಾ ವಿಭಾಗದ ಆಟಗಾರರು ವಿಫಲಗೊಳಿಸಿದರು. 

ಪೋರ್ಚುಗಲ್‌ ತಂಡಕ್ಕೆ 53ನೇ ನಿಮಿಷದಲ್ಲಿ ಪೆನಾಲ್ಟಿ ಸಿಕ್ಕಿತು. ಆದರೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ತಂಡದ ತಾರಾ ಆಟಗಾರ ರೊನಾಲ್ಡೊ ಅವರು ಯಶಸ್ವಿಯಾಗಲಿಲ್ಲ. ಅವರು ಒದ್ದ ಚೆಂಡನ್ನು ಇರಾನ್‌ನ ಗೋಲ್‌ಕೀಪರ್‌ ಬೀರಾನ್ವಾಂಡ್‌ ಅವರು ತಡೆದರು. 

ಇನ್ನೇನೂ ಇರಾನ್‌ ತಂಡ ಸೋಲಲಿದೆ ಎಂಬ ಪೋರ್ಚುಗಲ್‌ ಅಭಿಮಾನಿಗಳ ನಿರೀಕ್ಷೆಯೂ ಪಂದ್ಯದ 93ನೇ ನಿಮಿಷದಲ್ಲಿ ಹುಸಿಯಾಯಿತು. ಪೆನಾಲ್ಟಿ ಅವಕಾಶದಲ್ಲಿ ಇರಾನ್‌ನ ಕರೀಮ್‌ ಅನ್ಸಾರಿಫರಾದ್‌ ಅವರು ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು. 

ಇದೇ 30ರಂದು ನಡೆಯುವ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪೋರ್ಚುಗಲ್‌ ತಂಡವು  ಉರುಗ್ವೆ ತಂಡವನ್ನು ಎದುರಿಸಲಿದೆ. ಉರುಗ್ವೆ ತಂಡವು ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿಯೂ ಜಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !