ನವಯುಗ ಕಂಪೆನಿ ವಿರುದ್ಧ ಮೊಕದ್ದಮೆ

7
ಜಿಲ್ಲಾಧಿಕಾರಿಗೆ ಸಚಿವ ಯು.ಟಿ.ಖಾದರ್ ಆದೇಶ

ನವಯುಗ ಕಂಪೆನಿ ವಿರುದ್ಧ ಮೊಕದ್ದಮೆ

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸದೇ ಜನರಿಗೆ ತೊಂದರೆ ನೀಡುತ್ತಿರುವ ಮತ್ತು ಸಾವು ನೋವುಗಳಿಗೆ ಕಾರಣವಾಗಿರುವ ಆರೋಪದ ಮೇಲೆ ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ವಿಚಾರಣೆ ಆರಂಭಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರಿಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಆದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು. ಆಗ, ಎನ್‌ಎಚ್–66ರಲ್ಲಿನ ಕಾಮಗಾರಿಯ ಪ್ರಗತಿ ಕುರಿತು ನವಯುಗ ಕಂಪೆನಿ ಪ್ರತಿನಿಧಿ ಸರಿಯಾದ ಮಾಹಿತಿ ಒದಗಿಸಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿ ಕೂಡ ಸ್ಪಷ್ಟ ಮಾಹಿತಿ ನೀಡಲಿಲ್ಲ. ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ಬಳಿಕ ಕೆಲವು ತಿಂಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿರುವುದನ್ನು ಒಪ್ಪಿಕೊಂಡರು.

ಸಚಿವರು ಮತ್ತು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡ ಬಳಿಕ ಉತ್ತರಿಸಿದ ಎನ್‌ಎಚ್‌ಎಐ ಎಂಜಿನಿಯರ್‌ ಅಜಿತ್‌, ‘ಹಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ನೋಟಿಸ್‌ ನೀಡಿದರೂ ನವಯುಗ ಕಂಪೆನಿ ಸ್ಪಂದಿಸಿಲ್ಲ. ಪ್ರಾಧಿಕಾರದ ಬೆಂಗಳೂರು ಪ್ರಾದೇಶಕ ಕಚೇರಿಯಲ್ಲಿ ಕಳೆದ ವಾರ ಸಭೆ ನಡೆಸಲಾಗಿದೆ. ತ್ವರಿತವಾಗಿ ಕಾಮಗಾರಿ ನಡೆಸುವುದಾಗಿ ಕಂಪೆನಿಯ ಹಿರಿಯ ಅಧಿಕಾರಿಗಳು ಅಲ್ಲಿ ಒಪ್ಪಿಕೊಂಡು ಹೋಗಿದ್ದಾರೆ’ ಎಂದರು.

‘ಕಂಪೆನಿ ಆರ್ಥಿಕ ಸಮಸ್ಯೆಯಲ್ಲಿದೆ. ಸಕಾಲಕ್ಕೆ ಹಣ ಸಿಗದ ಕಾರಣ ಕಾಮಗಾರಿ ವಿಳಂಬವಾಗಿದೆ. ಬ್ಯಾಂಕ್‌ನಿಂದ ಹಣ ಬಿಡುಗಡೆಯ ಭರವಸೆ ದೊರೆತಿದೆ. ಶೀಘ್ರವೇ ಕಾಮಗಾರಿ ತ್ವರಿತಗೊಳಿಸಲಾಗುವುದು. ತೊಕ್ಕೊಟ್ಟು ಮೇಲುಸೇತುವೆಯನ್ನು ಡಿಸೆಂಬರ್‌ ಅಂತ್ಯಕ್ಕೆ ಮತ್ತು ಪಂಪ್‌ವೆಲ್‌ ಮೇಲುಸೇತುವೆಯನ್ನು 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು’ ಎಂದು ನವಯುಗ ಕಂಪೆನಿಯ ಅಧಿಕಾರಿ ಉತ್ತರಿಸಿದರು.

ನವಯುಗ ಕಂಪೆನಿ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ‘ಐದು ವರ್ಷಗಳಿಂದ ಪದೇ ಪದೇ ಸಭೆ ನಡೆಸಿದರೂ ಪ್ರಗತಿ ಆಗಿಲ್ಲ. ಎನ್‌ಎಚ್‌ಎಐ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಸತಾಯಿಸುತ್ತಲೇ ಇದ್ದಾರೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ತಕ್ಷಣವೇ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿ’ ಎಂದು ಆದೇಶ ನೀಡಿದರು.

ವರದಿಗಳು ಸಿದ್ಧ:

ಆಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನವಯುಗ ಕಂಪೆನಿಗೆ ಸಂಬಂಧಿಸಿದಂತೆ ಹಲವು ವರದಿಗಳು ಬಂದಿವೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ವಿಚಾರಣೆ ಆರಂಭಿಸುವ ತೀರ್ಮಾನಕ್ಕೆ ಬಂದಿದ್ದೇನೆ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ಬೇರೆ ವ್ಯವಸ್ಥೆ ಮಾಡುತ್ತೇವೆ. ಜನರ ತಾಳ್ಮೆಯ ಮಿತಿ ಮೀರಿದೆ. ಶೀಘ್ರದಲ್ಲೇ ಉಪ ವಿಭಾಗಾಧಿಕಾರಿ ಮೂಲಕ ವಿಚಾರಣೆ ಆರಂಭಿಸಲಾಗುವುದು’ ಎಂದು ಪ್ರಕಟಿಸಿದರು.

‘ಕಾಮಗಾರಿಯಲ್ಲಿನ ವಿಳಂಬದ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಸಾವು, ನೋವುಗಳಾಗುತ್ತಿವೆ. ಇನ್ನು ಮುಂದೆ ಅಪಘಾತದಿಂದ ಸಾವು, ನೋವುಗಳಾದರೇ ನವಯುಗ ಕಂಪೆನಿ ಪ್ರತಿನಿಧಿಗಳು ಮತ್ತು ಎನ್‌ಎಚ್‌ಎಐ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲು ಆದೇಶ ನೀಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ವರದಿ ನೀಡಲು ಸೂಚನೆ:

ಸುರತ್ಕಲ್‌ ಟೋಲ್‌ ಕೇಂದ್ರವನ್ನು ಹೆಜಮಾಡಿ ಟೋಲ್‌ ಕೇಂದ್ರದ ಜೊತೆ ವಿಲೀನ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಎನ್‌ಎಚ್‌ಎಐ ಪ್ರಾದೇಶಕ ಕಚೇರಿಯಲ್ಲಿ ಕಡತವಿದ್ದು, ನವಯುಗ ಕಂಪೆನಿಯ ಸಮ್ಮತಿ ಪತ್ರ ದೊರೆತ ತಕ್ಷಣ ಆದೇಶ ಹೊರಬೀಳಲಿದೆ. ಆ ನಂತರ ಸುರತ್ಕಲ್‌ ಟೋಲ್‌ ಕೇಂದ್ರವನ್ನು ಮುಚ್ಚಲಾಗುವುದು. ಬಳಿಕ ಹೆಜಮಾಡಿಯಿಂದ ನಂತೂರು ವೃತ್ತದವರೆಗಿನ ಮಾರ್ಗಕ್ಕೆ ಹೆಜಮಾಡಿ ಟೋಲ್‌ ಕೇಂದ್ರದಲ್ಲೇ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುವುದು ಎಂದು ಎನ್‌ಎಚ್‌ಎಐ ಅಧಿಕಾರಿಗಳು ಸಭೆಗೆ ತಿಳಿಸಿದರು.

ಹೆಜಮಾಡಿಯಿಂದ ಮೂಲ್ಕಿ, ಸುರತ್ಕಲ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ಬರುವವರಿಗೆ ಪೂರ್ಣ ಪ್ರಮಾಣದ ಶುಲ್ಕ ವಿಧಿಸುವುದನ್ನು ಸಚಿವರು ಆಕ್ಷೇಪಿಸಿದರು. ದರ ನಿಗದಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಬಿ.ಟಿ.ಕಾಂತರಾಜು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !