ಪಿಜಿ ವಿದ್ಯಾರ್ಥಿಗಳಿಗೂ ವಸತಿ ನಿಲಯ

7
ಲೋಕೋಪಯೋಗಿ ಸಚಿವ ಎಚ್ .ಡಿ. ರೇವಣ್ಣ ಭರವಸೆ

ಪಿಜಿ ವಿದ್ಯಾರ್ಥಿಗಳಿಗೂ ವಸತಿ ನಿಲಯ

Published:
Updated:
ಹಾಸನ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ (ಹಿಮ್ಸ್‌) ‌ ಆವರಣದಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಭೂಮಿ ಪೂಜೆ ನೆರವೇರಿಸಿದರು.

ಹಾಸನ : ‘ರಾಜ್ಯದ ಜನರಿಗೆ ಮಾತುಕೊಟ್ಟಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದು ಖಚಿತ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಹಿಮ್ಸ್‌) ಆವರಣದಲ್ಲಿ ಸುಮಾರು ₹ 10 ಕೋಟಿ ವೆಚ್ಚದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. ಶಿರಾಡಿ ಘಾಟ್ ಎರಡನೇ ಹಂತದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿದ್ದು, ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿದ ನಂತರ 10 ರಿಂದ 12 ದಿನದೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಸುಮಾರು 700 ವಿದ್ಯಾರ್ಥಿಗಳು ಇದ್ದು, ಅವರಲ್ಲಿ 300 ವಿದ್ಯಾರ್ಥಿನಿಯರಿಗೆ ಅವಕಾಶವಾಗುವಂತೆ ₹ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಒಂದು ಕೊಠಡಿ ನೀಡಲಾಗುವುದು. ಇದು 12 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಎಂದು ವಿವರಿಸಿದರು.

‘ಇದರ ಪಕ್ಕದಲ್ಲಿಯೇ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಸತಿನಿಲಯ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಬೆಂಗಳೂರಿನಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ  ಹಿಮ್ಸ್‌ ನಿರ್ದೇಶಕರೂ ಭಾಗವಹಿಸಿದ್ದರು. ಹಿಮ್ಸ್‌ಗೆ ಅನುದಾನ ನೀಡುವುದಾಗಿ ಹಣಕಾಸು ಇಲಾಖೆ ಒಪ್ಪಿಕೊಂಡಿದೆ. ಅನುದಾನ ಕೊಡಿಸುವ ಜವಾಬ್ದಾರಿ ನನ್ನದು’ ಎಂದು ತಿಳಿಸಿದರು. ಅಂದಾಜು ₹ 135 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಹಣಕಾಸು ಇಲಾಖೆ ಸಮ್ಮತಿ ಸೂಚಿಸಿದ್ದು, ಮೂರು ಹಂತಗಳಲ್ಲಿ ಹಣ ಬಿಡುಗಡೆಗೆ ಮನವಿ ಮಾಡಲಾಗಿದೆ. ಅದರಂತೆ ಪ್ರಸಕ್ತ ವರ್ಷ ₹ 50 ಕೋಟಿ, ಮುಂದಿನ ವರ್ಷ ₹ 50 ಕೋಟಿ ನೀಡುವಂತೆ ಕೊರಲಾಗಿದೆ ಎಂದು ಹೇಳಿದರು.

ಶಾಸಕ ಪ್ರೀತಂ ಜೆ.ಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಪೌರಾಯುಕ್ತ ಬಿ.ಎ. ಪರಮೇಶ್, ಹಿಮ್ಸ್‌ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್, ಆಡಳಿತಾಧಿಕಾರಿ ಚಿದಾನಂದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ರಾಜಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !