ತಗ್ಗಿದ ಮಳೆ ಅಬ್ಬರ: ಉಪನಗರ ರೈಲು ಸಂಚಾರ ಆರಂಭ

7

ತಗ್ಗಿದ ಮಳೆ ಅಬ್ಬರ: ಉಪನಗರ ರೈಲು ಸಂಚಾರ ಆರಂಭ

Published:
Updated:

ಮುಂಬೈ: ನಗರದಲ್ಲಿ ಮುಂಗಾರು ಮಳೆ ಬುಧವಾರ ಬಿಡುವು ನೀಡಿತು. ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಉಪ ನಗರ ರೈಲು ಸಂಚಾರ ಸೇವೆ ಪುನರಾರಂಭವಾಗಿದೆ.

ಮುಂಜಾನೆಯಿಂದಲೇ ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ಪ್ರಯಾಣ ಆರಂಭಿಸಲು ರೈಲು ನಿಲ್ದಾಣಗಳಿಗೆ ಬಂದು ಕಾಯುತ್ತಿದ್ದರು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ಬೆಳಿಗ್ಗೆ 6.45ಕ್ಕೆ ಉಪನಗರ ರೈಲು ಸಂಚಾರ ಆರಂಭಿಸಲಾಯಿತು ಎಂದು ಪಶ್ಚಿಮ ರೈಲ್ವೆ ವಕ್ತಾರ ರವೀಂದ್ರ ಭಾಕರ್‌ ತಿಳಿಸಿದರು.

ಇನ್ನೂ ಕೆಲವು ಮಾರ್ಗಗಳಲ್ಲಿ ಹಳಿಗಳು ಪ್ರವಾಹ ನೀರಿನಲ್ಲಿ ಜಲಾವೃತಗೊಂಡಿವೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳ ಸಂಚಾರ ವೇಗವನ್ನು 10 ಕಿಲೊ ಮೀಟರ್‌ಗೆ ಸೀಮಿತಗೊಳಿಸಲಾಯಿತು.

ವಿರಾರ್‌ ಮತ್ತು ದಹಾನು ಮಾರ್ಗದ ನಡುವೆ ಉಪನಗರ ರೈಲು ಸಂಚಾರ ಪುನರಾರಂಭವಾಗಿದೆ. ಪ್ರವಾಹದ ನೀರು ಹಳಿ ಮಟ್ಟದಿಂದ ಕೆಳಗಿಳಿದರೆ ಭಯಾಂದರ್‌ ಮತ್ತು ವಿರಾರ್‌ ಮಾರ್ಗದಲ್ಲೂ ಸಂಚಾರ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ನಲ್ಲಸೋಪಾರ ಮತ್ತು ವಿರಾರ್‌ ನಿಲ್ದಾಣಗಳ ನಡುವೆ ಹಳಿಗಳು ಪ್ರವಾಹದಲ್ಲಿ ಮುಳುಗಿದ್ದರಿಂದ ಮಂಗಳವಾರ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ಪ್ರವಾಹದ ನಡುವೆ ಸಿಲುಕಿದ್ದ ರೈಲು ಪ್ರಯಾಣಿಕರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸಿತ್ತು. ಈ ಮಾರ್ಗದಲ್ಲಿ ಪ್ರವಾಹದ ನೀರು ಇನ್ನೂ ಕಡಿಮೆಯಾಗಿಲ್ಲದ ಕಾರಣಕ್ಕೆ ರೈಲು ಸಂಚಾರ ಆರಂಭಗೊಂಡಿಲ್ಲ.

‘ನಲ್ಲಸೋಪಾರ ನಿಲ್ದಾಣ ಬಳಿ ಹಳಿಗಳ ಮೇಲೆ ನೀರು ಇನ್ನೂ ಅಪಾಯದ ಮಟ್ಟದಲ್ಲೇ ನಿಂತಿದೆ. ಈ ಮಾರ್ಗದಲ್ಲಿ ರೈಲು ಸಂಚರಿಸಲು ಸಾಧ್ಯವಿಲ್ಲ’ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯ ಮಾರ್ಗ ಮತ್ತು ಬಂದರು ಮಾರ್ಗದ ನಡುವೆ ಸಂಚರಿಸುವ ಕೇಂದ್ರ ರೈಲ್ವೆಯ ಸ್ಥಳೀಯ ರೈಲುಗಳು 5ರಿಂದ 10 ನಿಮಿಷ ತಡವಾಗಿ ಸಂಚರಿಸಿದವು ಎಂದು ಕೇಂದ್ರ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

 ಮಳೆಯ ಅಬ್ಬರ ತಗ್ಗಿದ್ದರಿಂದ ಮಹಾನಗರದ ರಸ್ತೆಗಳಲ್ಲಿ ವಾಹನ ಸಂಚಾರ ಸುಗಮ ಸ್ಥಿತಿಗೆ ಮರಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !