ದೇಶದಲ್ಲಿ ಶಿಕ್ಷಕರ ಜವಾಬ್ದಾರಿ ಸೂಚ್ಯಾಂಕ ಕುಸಿತ

7
ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆ ಆಡಳಿತಾಧಿಕಾರಿ ಶಿವರಾಮರೆಡ್ಡಿ ವಿಷಾದ

ದೇಶದಲ್ಲಿ ಶಿಕ್ಷಕರ ಜವಾಬ್ದಾರಿ ಸೂಚ್ಯಾಂಕ ಕುಸಿತ

Published:
Updated:
Deccan Herald

ಕೋಲಾರ: ‘ಜಗತ್ತಿನ ಬೇರೆ ರಾಷ್ಟ್ರಗಳಲ್ಲಿನ ಶಿಕ್ಷಕರ ಜವಾಬ್ದಾರಿಗೆ ಹೋಲಿಸಿದರೆ ಭಾರತದಲ್ಲಿ ಶಿಕ್ಷಕರ ಜವಾಬ್ದಾರಿ ಸೂಚ್ಯಾಂಕ ಕೇವಲ ಶೇ 10ರಷ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಶಿಕ್ಷಕರಿಗೆ ಅನ್ನ ನೀಡುವ ಶಾಲೆಗಳೇ ಇರುವುದಿಲ್ಲ’ ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆ ಆಡಳಿತಾಧಿಕಾರಿ ಶಿವರಾಮರೆಡ್ಡಿ ಎಚ್ಚರಿಕೆ ನೀಡಿದರು.

ಶಿಕ್ಷಕರ ಗೆಳೆಯರ ಬಳಗ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿ, ‘ಶಿಕ್ಷಕರ ಮಕ್ಕಳ್ಯಾರೂ ಕೂಲಿ ಆಳುಗಳಾಗಿಲ್ಲ. ಆದರೆ, ಶಿಕ್ಷಕರ ಬಳಿ ಓದಿದ ಮಕ್ಕಳು ಕೂಲಿ ಆಳುಗಳಾಗಬೇಕೆ?’ ಎಂದು ಪ್ರಶ್ನಿಸಿದರು.

‘ಸ್ವಂತ ಮಕ್ಕಳು ಊಟ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಶಿಕ್ಷಕರು ಊಟ ಮಾಡುತ್ತಿರುವುದು ಶಾಲಾ ಮಕ್ಕಳ ಹಾಜರಾತಿಯಿಂದ ಎಂಬುದನ್ನು ಮರೆಯಬಾರದು. ಈ ಸತ್ಯವರಿತು ಆತ್ಮಸಾಕ್ಷಿ ಒಪ್ಪುವಂತೆ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸೂಚ್ಯಾಂಕ ಕುಸಿದಿದೆ: ‘ಪ್ರೀತಿಯಿಂದ ಶಿಕ್ಷಕ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವವರು ಶೇ 1ರಷ್ಟಿದ್ದು, ವೃತ್ತಿ ಬದುಕಿನಲ್ಲಿ ಇವರು ಉತ್ತಮ ಶಿಕ್ಷಕರಾಗುತ್ತಾರೆ. ಆಕಸ್ಮಿಕವಾಗಿ ಶಿಕ್ಷಕರಾಗಿ ವೃತ್ತಿ ಗೌರವಿಸುವವರು ಕೆಲವರಿದ್ದಾರೆ. ಇಷ್ಟವಿಲ್ಲದಿದ್ದರೂ ಬೇರೆ ವಿಧಿಯಿಲ್ಲದೆ ಶಿಕ್ಷಕರಾದವರ ಸಂಖ್ಯೆ ಹೆಚ್ಚಿರುವುದರಿಂದಲೇ ಇಂದು ಜವಾಬ್ದಾರಿ ಸೂಚ್ಯಾಂಕ ಕುಸಿದಿದೆ’ ಎಂದು ವಿಷಾದಿಸಿದರು.

‘ಶಿಕ್ಷಕರು ತಮ್ಮ ವೈಫಲ್ಯ ಮರೆಮಾಚಲು ತರ್ಕಬದ್ಧವಾಗಿ ಮಾತನಾಡುತ್ತಾರೆ. ತಾನೊಬ್ಬ ಪಾಠ ಮಾಡದಿದ್ದರೆ ದೇಶ ನಾಶವಾಗುತ್ತದೆಯೇ ಎಂದು ಪ್ರಶ್ನಿಸುವವರೂ ಇದ್ದಾರೆ. ಈ ಧೋರಣೆ ಸರಿಯಲ್ಲ. ಸಮಾಜದ ಬೆಳವಣಿಗೆ ಶಿಕ್ಷಕರ ಹೊಣೆಯ ಮೇಲೆ ನಿಂತಿದೆ’ ಎಂದು ಹೇಳಿದರು.

ಬದ್ಧತೆ ಹೆಚ್ಚಬೇಕು: ‘ಶಿಕ್ಷಕರಲ್ಲಿ ಕಲಿಸುವ ಬದ್ಧತೆ ಹೆಚ್ಚಬೇಕು. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ತನ್ನ ಶಾಲೆ ಎಂಬ ಭಾವನೆ ಬಲಗೊಳ್ಳಬೇಕು. ಗುರಿ ಸಾಧನೆಯ ಚಿಂತನೆ ಸಾಕಾರಗೊಂಡರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ’ ಎಂದು ಸರ್ವಶಿಕ್ಷಣ ಅಭಿಯಾನದ ಸಹಾಯಕ ಸಮನ್ವಯಾಧಿಕಾರಿ ಮೈಲೇರಪ್ಪ ಅಭಿಪ್ರಾಯಪಟ್ಟರು.

‘ಶಿಕ್ಷಕರು ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಶಾಲೆಯಲ್ಲಿ ಶೈಕ್ಷಣಿಕ ವಿಚಾರಗಳ ಜತೆಗೆ ಆಡಳಿತಾತ್ಮಕ ವಿಚಾರಗಳ ಬಗ್ಗೆಯೂ ಗಮನ ಹರಿಸಬೇಕು’ ಎಂದು ಶಿಕ್ಷಣ ಇಲಾಖೆ ಸೂಪರಿಂಟೆಂಡೆಂಟ್‌ ರಾಜೇಂದ್ರ ಸಲಹೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !