ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮುಂದುವರಿಯಲು ಮತ್ತೆ ಅರ್ಜಿ ಹಾಕಬೇಕು: ಜಯ್ ಶಾ

Published 10 ಮೇ 2024, 6:17 IST
Last Updated 10 ಮೇ 2024, 6:17 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು, ತಮ್ಮ ಅವಧಿ ಮುಕ್ತಾಯದ ನಂತರವೂ ಮುಂದುವರಿಯಲು ಬಯಸುವುದಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ನಂತರ ದ್ರಾವಿಡ್ ಅವರ ಕಾರ್ಯಾವಧಿ ಮುಕ್ತಾಯವಾಗಲಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಕೋಚ್ ಆಯ್ಕೆ ನಡೆಯುವುದು. 

ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದ ದ್ರಾವಿಡ್‌ ಅವರ ಒಪ್ಪಂದ ಹಾಗೂ ಅವರ ಸಹಾಯಕ ಸಿಬ್ಬಂದಿಯ ಅವಧಿಯನ್ನು, ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಬಳಿಕ ಒಂದು ವರ್ಷ ವಿಸ್ತರಿಸಲಾಗಿತ್ತು.

ಬಿಸಿಸಿಐ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಜಯ್‌ ಶಾ, 'ಮುಂದಿನ ದಿನಗಳಲ್ಲಿ ಅರ್ಜಿ ಆಹ್ವಾನಿಸುತ್ತೇವೆ. ರಾಹುಲ್ ದ್ರಾವಿಡ್‌ ಅವರ ಅವಧಿಯು ಮುಕ್ತಾಯವಾಗುತ್ತಿದೆ. ಮುಂದುವರಿಯಲು ಬಯಸುವುದಾದರೆ, ಅವರು ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಾವು ಮೂರು ವರ್ಷಗಳ ದೀರ್ಘಾವಧಿಗೆ ಕೋಚ್‌ ನೇಮಿಸಲು ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

‘ಮುಂದಿನ ಕೆಲವು ದಿನಗಳಲ್ಲಿ ಅರ್ಜಿಗಳನ್ನು ಆಹ್ವಾನಿಸುತ್ತೇವೆ. ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿಯು ಶೀಘ್ರದಲ್ಲಿಯೇ ಮುಗಿಯಲಿದೆ. ನಾವು ಸದ್ಯ ಮೂರು ವರ್ಷಗಳ ಅವಧಿಗಾಗಿ ಕೋಚ್‌ ನೇಮಕ ಮಾಡಲು ಯೋಜಿಸಿದ್ದೇವೆ. ಒಂದೊಮ್ಮೆ ದ್ರಾವಿಡ್ ಅವರಿಗೆ ಇಚ್ಛೆ ಇದ್ದರೆ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು’ ಎಂದು  ಶಾ ಗುರುವಾರ ಇಲ್ಲಿ ಹೇಳಿದರು. 

'ಕ್ರಿಕೆಟ್‌ನ ವಿಭಿನ್ನ ಮಾದರಿಗಳಿಗೆ ಬೇರೆ ಬೇರೆ ಕೋಚ್‌ಗಳನ್ನು ನೇಮಿಸಿದ ನಿದರ್ಶನವಿಲ್ಲ. ಮೂರೂ ಮಾದರಿಯಲ್ಲಿ ಆಡುವ ರಿಷಭ್‌ ಪಂತ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರಂತಹ ಆಟಗಾರರು ನಮ್ಮಲ್ಲಿದ್ದಾರೆ' ಎಂದಿರುವ ಅವರು, 'ಕ್ರಿಕೆಟ್‌ ಸಲಹಾ ಸಮಿತಿಗೆ (ಸಿಎಸಿ) ಅಂತಿಮ ನಿರ್ಧಾರವನ್ನು ಬಿಡಲಾಗಿದೆ. ಅವರ ತೀರ್ಮಾನವನ್ನು ಕಾರ್ಯರೂಪಕ್ಕಿಳಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

'ಒಂದುವೇಳೆ ಸಿಎಸಿ, ವಿದೇಶಿ ಕೋಚ್‌ ಅನ್ನು ಆಯ್ಕೆ ಮಾಡಿದರೂ, ಅದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ' ಎಂದೂ ಹೇಳಿದ್ದಾರೆ.

ಜತಿನ್‌ ಪರಾಂಜಪೆ, ಅಶೋಕ್‌ ಮಲ್ಹೋತ್ರಾ ಮತ್ತು ಸುಲಕ್ಷಣಾ ನಾಯಕ್‌ ಅವರು ಸಿಎಸಿಯಲ್ಲಿದ್ದಾರೆ.

‘ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಒಂದು ಸ್ಥಾನದ ಭರ್ತಿಗೆ ಈಗಾಗಲೇ ಕೆಲವರ ಸಂದರ್ಶನ ಮಾಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು. 


ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯಸ್ಥ ಗ್ರೇಗ್ ಬರ್ಕ್ಲೇ ಅವರ ಕಾರ್ಯಾವಧಿಯು ಈ ವರ್ಷಾಂತ್ಯದಲ್ಲಿ ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ನೇಮಕವಾಗುವತ್ತ ತಮ್ಮ ಒಲವು  ಇದೆಯೇ ಎಂಬ ಪ್ರಶ್ನೆಗೆ ಜಯ್ ಶಾ ಪ್ರತಿಕ್ರಿಯಿಸಿದರು. 


‘ಆ ಕುರಿತು ಊಹಾಪೋಹಗಳು ನಡೆಯುತ್ತಲೇ ಇವೆ. ಸದ್ಯಕ್ಕೆ ನಾನು ಇಲ್ಲಿಯೇ (ಬಿಸಿಸಿಐ) ಇರಲು ಬಿಡಿ. ಯಾಕೆ ನಾನಿಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ‘ ಎಂದು ಜಯ್ ಮರುಪ್ರಶ್ನೆ ಮಾಡಿದರು. 

‘ಕೇಂದ್ರ ಗುತ್ತಿಗೆ: ಇಶಾನ್ ಅಯ್ಯರ್ ಕೈಬಿಟ್ಟಿದ್ದು ಅಗರ್ಕರ್ ನಿರ್ಧಾರ‘

ಭಾರತ ತಂಡದ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಕೈಬಿಡುವ ನಿರ್ಧಾರವು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಆಗರ್ಕರ್ ಅವರದ್ದಾಗಿತ್ತು ಎಂದು ಜಯ್ ಶಾ ಸ್ಪಷ್ಟಪಡಿಸಿದರು.  ‘ಆ ಸಭೆಯ ನಿರ್ಣಯಗಳನ್ನು ತಾವೆಲ್ಲರೂ ಪರಿಶೀಲಿಸಬಹುದು. ನಾನು ಆ ಸಭೆಯ ನಿಮಂತ್ರಕನಾಗಿದ್ದೆ ಅಷ್ಟೇ’ ಎಂದೂ ಜಯ್ ಶಾ ಅವರು ಗುರುವಾರ ನಡೆದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು. 

‘ಆ ಇಬ್ಬರೂ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ. ಆದ್ದರಿಂದ ಸಮಿತಿಯು ಈ ನಿರ್ಣಯ ಕೈಗೊಂಡಿತು. ಯಾವುದೇ ಆಟಗಾರನೂ ಅನಿವಾರ್ಯವಲ್ಲ. ಅವರಿಬ್ಬರನ್ನು ಕೈಬಿಟ್ಟು ಹೊಸ ಆಟಗಾರರನ್ನು ಸೇರ್ಪಡೆಗೊಳಿಸಲಾಯಿತು. ಅವರಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು. ಇದರಲ್ಲಿ ಅಗರ್ಕರ್‌ ಅವರೇ ನಿರ್ಣಾಯಕರಾಗಿದ್ದರು. ಅವರ ಸಮಿತಿಯು ನೀಡಿದ ಶಿಫಾರಸುಗಳನ್ನು ಜಾರಿಗೊಳಿಸಿದ್ದಷ್ಟೇ ನನ್ನ ಕಾರ್ಯ’ ಎಂದರು.  ‘ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮರುಪರಿಶೀಲನೆ‘ ಬಹಳಷ್ಟು ಆಟಗಾರರಿಂದ ಟೀಕೆಗೊಳಗಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಮರುಪರಿಶೀಲನೆ ನಡೆಸುವುದಾಗಿ ಜಯ್ ಶಾ ಹೇಳಿದರು. 

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ 250 ರನ್‌ಗಳಿಗಿಂತ ಹೆಚ್ಚಿನ ಮೊತ್ತ ದಾಖಲಾಗಿವೆ. ಇಂಪ್ಯಾಕ್ಟ್‌ ಪ್ಲೇಯರ್ ನಿಯಮದಿಂದಾಗಿ ಹೆಚ್ಚುವರಿ ಬ್ಯಾಟರ್‌ಗಳು ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ ಬೃಹತ್ ಮೊತ್ತಗಳು ದಾಖಲಾಗುತ್ತಿವೆ ಎಂದು ಕೆಲವು ವಾದ ಮಾಡಿದ್ದರು.  ಆಲ್‌ರೌಂಡರ್‌ಗಳ ಅವಕಾಶಗಳೂ ಮೊಟಕುಗೊಂಡಿವೆ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು.  ‘ಈ ನಿಯಮವನ್ನು ಪ್ರಯೋಗವಾಗಿ ಜಾರಿಗೊಳಿಸಲಾಗಿತ್ತು. ಇನ್ನೊಂದು ಕಡೆ ಇದರಿಂದ ಇಬ್ಬರು ಭಾರತೀಯ ಆಟಗಾರರಿಗೂ ಅವಕಾಶ ಸಿಗುವ ಅವಕಾಶಗಳೂ ಇವೆ.  ಅಲ್ಲದೇ ಪಂದ್ಯಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿವೆ’ ಎಂದೂ ಪ್ರತಿಪಾದಿಸಿದರು.  ‘ಟಿ20 ವಿಶ್ವಕಪ್ ಟೂರ್ನಿ ಮುಗಿದ ನಂತರ ಐಪಿಎಲ್‌ ಸಂಬಂಧಿತ ಎಲ್ಲರೂ ಸಭೆ ಸೇರಿ ಈ ನಿಯಮದ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT