ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ವೈಫಲ್ಯದಿಂದ ಯಶಸ್ಸಿನೆಡೆಗೆ ದಯಾಳ್

ನಿರ್ಣಾಯಕ ಓವರ್‌ನಲ್ಲಿ ಮಿಂಚಿದ ಎಡಗೈ ವೇಗಿ
Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‌ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರಸಿಂಗ್ ಧೋನಿ ಅವರು ಯಶ್ ದಯಾಳ್ ಹಾಕಿದ ಕೊನೆಯ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದರು.

ಆಗ ಕ್ರೀಡಾಂಗಣದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕದ ಛಾಯೆ ಆವರಿಸಿತು. 

ಏಕೆಂದರೆ ; ಒಂದು ವರ್ಷದ ಹಿಂದೆ ಇದೇ ರೀತಿ ಯಶ್ ದಯಾಳ್ ಹಾಕಿದ್ದ ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಸತತ ಐದು ಸಿಕ್ಸರ್ ಹೊಡೆದಿದ್ದರು. ಈಗ ಮತ್ತೆ ಅಂತಹದೇ ಪರಿಸ್ಥಿತಿ ಮರುಳಿಸುವ ಆತಂಕ ಕಾಡಿತ್ತು. ಆದರೆ ಹಾಗಾಗಲಿಲ್ಲ. ಯಶ್ ದಯಾಳ್ ಅವರು ಧೋನಿ ವಿಕೆಟ್ ಪಡೆದಿದ್ದ ಲ್ಲದೇ  ಆರ್‌ಸಿಬಿಯ ಗೆಲುವಿನ ರೂವಾರಿಯಾರರು. 

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, ‘ಮೊದಲ ಎಸೆತವನ್ನು (ಧೋನಿ) ಸಿಕ್ಸರ್‌ಗೆತ್ತಿದಾಗ ಎಲ್ಲರೂ ಆ ಘಟನೆ (ರಿಂಕು ಸಿಂಗ್ ಐದು ಸಿಕ್ಸರ್) ನೆನಪಿಸಿಕೊಂಡಿರಬಹುದು. ಆದರೆ ನಾನು ಈ ಆವೃತ್ತಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಆದ್ದರಿಂದ ಆತ್ಮವಿಶ್ವಾಸ ಕುಸಿಯಲಿಲ್ಲ. ನನಗೆ ನಾನೇ ಉತ್ತಮ ಎಸೆತಗಳನ್ನು ಪ್ರಯೋಗಿಸಲು ಹೇಳಿಕೊಳ್ಳುತ್ತಿದ್ದೆ. ಆ ತಂತ್ರವು ಫಲಿಸಿತು’ ಎಂದರು. 

‘ನಾನು ಸ್ಕೋರ್‌ಬೋರ್ಡ್‌ನತ್ತ ನೋಡುವ ಅಗತ್ಯವಿರಲಿಲ್ಲ. ಆ ಹೊತ್ತಿನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವುದರ ಮೇಲಷ್ಟೇ ಸಂಪೂರ್ಣ ಗಮನವಿಟ್ಟಿದ್ದೆ. ಆತ್ಮವಿಶ್ವಾಸದಿಂದ ಆಡಿದ್ದು ಫಲ ನೀಡಿತು’ ಎಂದರು. 

‘ಹೋದ ಸಲ ನಾನು ತುಸು ಎದೆ ಗುಂದಿದ್ದ ಕಾರಣ ವೈಫಲ್ಯ ಅನುಭವಿಸಿದ್ದೆ. ಆದರೆ ಆರ್‌ಸಿಬಿ ಸೇರಿದ ನಂತರ ಮನೋಭಾವ ಬದಲಾಯಿತು’ ಎಂದು ವಿವರಿಸಿದರು. 

‘ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದಾಗ ತಂಡದ ಹಿರಿಯ ಆಟಗಾರರು ಮಾರ್ಗದರ್ಶನ ನೀಡುತ್ತಾರೆ.  ಅವರು ನನಗೆ ಬೈಯುವುದಿಲ್ಲ. ಇದರಿಂದ ನನಗೆ ಬಹಳ ನೆರವು ಸಿಕ್ಕಿದೆ’ ಎಂದೂ ಹೇಳಿದರು. ಈ ಬಾರಿಯ ಟೂರ್ನಿಯಲ್ಲಿ ಯಶ್ ದಯಾಳ್ ಅವರು 13 ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ. ‘ಈ ಪಂದ್ಯದಲ್ಲಿ ಮೊದಲೇ ಯೋಜಿಸಿದಂತೆ ನಾನು 19ನೇ ಓವರ್‌ ಬೌಲಿಂಗ್ ಮಾಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ದಿನೇಶ್ ಭಯ್ಯಾ (ಕಾರ್ತಿಕ್) ಮತ್ತು ಫಫ್ ಅವರು ಪರಸ್ಪರ ಮಾತನಾಡಿಕೊಂಡರು. ನಂತರ ನನ್ನ ಬಳಿ ಬಂದು ಲಾಕಿ (ಫರ್ಗ್ಯುಸನ್) ಅವರು 19ನೇ ಓವರ್ ಹಾಕಲಿ, ಕೊನೆಯ ಓವರ್ ನನಗೆ ನೀಡುವುದಾಗಿ ಹೇಳಿದರು. ಅದರಂತೆ ಕೊನೆಯ ಓವರ್‌ ಹಾಕಿದ್ದು ನನ್ನ ಜೀವನದ ಅವಿಸ್ಮರಣೀಯ ಗಳಿಗೆಯಾಯಿತು’ ಎಂದರು. 

ಸಿ.ಎಂ ಸಂತಸ ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ತಂಡವು ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ #EeSalaCupNamde
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT