ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆ: ಉಪ ನಿರ್ದೇಶಕ ಪ್ರಭಾಕರ್

7

ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆ: ಉಪ ನಿರ್ದೇಶಕ ಪ್ರಭಾಕರ್

Published:
Updated:
Deccan Herald

ಕೋಲಾರ: ‘ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಕಿವಿಮಾತು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರವು ರೇಷ್ಮೆ ಬೆಳೆಗಾರರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಪ್ಪುನೇರಳೆ ಮತ್ತು ದ್ವಿತಳಿ ರೇಷ್ಮೆ ಹುಳುವಿನ ಸಮಗ್ರ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ’ ಎಂದರು.

‘ಸರ್ಕಾರ ಗೂಡಿಗೆ ಪ್ರೋತ್ಸಾಹಧನದ ಬದಲಿಗೆ ರಕ್ಷಣಾತ್ಮಕ ದರ ನಿಗದಿಪಡಿಸಿದ್ದು, ಗೂಡಿನ ಶ್ರೇಣಿಯ ಆಧಾರದಲ್ಲಿ 1 ಕೆ.ಜಿ ದ್ವಿತಳಿ ಗೂಡಿಗೆ ₹ 50 ಹಾಗೂ ಮಿಶ್ರತಳಿ ಗೂಡಿಗೆ ₹ 40 ರೈತರ ಖಾತೆಗೆ ಮಾರುಕಟ್ಟೆಯಿಂದಲೇ ಜಮಾ ಮಾಡಲಾಗುವುದು’ ಎಂದು ವಿವರಿಸಿದರು.

ಇ–ಹರಾಜು: ‘ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡು ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಇ–ಹರಾಜು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹರಾಜಿನ ನಂತರ ಬೆಳೆಗಾರರ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗುತ್ತಿದೆ. ಹಿಪ್ಪು ನೇರಳೆ ಬೇಸಾಯದಲ್ಲಿ ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ. ನರೇಗಾ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ರೇಷ್ಮೆ ಬೆಳೆಗಾರರು ಅಂತರರಾಷ್ಟ್ರೀಯ ಗುಣಮಟ್ಟದ ಗೂಡು ಉತ್ಪಾದಿಸಬೇಕು. ನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ಯಂತ್ರ ಬಳಸಬೇಕು. ಸುಮಾರು ₹ 3 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಸ್ವಯಂಚಾಲಿತ ನೂಲು ಬಿಚ್ಚಾಣಿಕೆ ಕೇಂದ್ರ ಸದ್ಯದಲ್ಲೇ ಕಾರ್ಯಾರಂಭ ಮಾಡುತ್ತದೆ’ ಎಂದು ವಿವರಿಸಿದರು.

ಬಹುವಾರ್ಷಿಕ ಬೆಳೆ: ‘ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶಗಳ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆಯು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಆರ್.ಎಲ್.ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.

ದ್ವಿತಳಿ ರೇಷ್ಮೆ ಕೃಷಿ ತಾಂತ್ರಿಕತೆ, ಹಿಪ್ಪುನೇರಳೆ ಗಿಡಗಳಿಗೆ ಸೂಕ್ತ ಸ್ಥಳಾವಕಾಶ, ಗುಣಿ ಪದ್ಧತಿಯಲ್ಲಿ ಏಕಕಾಂಡದ ನಿರ್ವಹಣೆ, ಅಂತರ ಬೇಸಾಯದಲ್ಲಿ ಹಸಿರೆಲೆ ಗೊಬ್ಬರದ ಸರ್ಮಪಕ ಬಳಕೆ, ರೇಷ್ಮೆ ಹುಳುಗಳಿಗೆ ಬರುವ ರೋಗಗಳು, ಕೀಟಬಾಧೆ ನಿಯಂತ್ರಣ ಮತ್ತು ಹಿಪ್ಪುನೇರಳೆ ಸೊಪ್ಪಿಗೆ ಬಂದಿರುವ ರೋಗ ಹತೋಟಿ ಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಹುಳು ಸಾಕು ಮನೆಯಲ್ಲಿ ಸೋಂಕು ನಿವಾರಣೆಗೆ ದ್ರಾವಣ ತಯಾರಿಕೆ ವಿಧಾನ, ಪ್ರೌಢ ಹುಳು ಸಾಕಾಣಿಕೆ, ಜ್ವರದಲ್ಲಿ ಹುಳುಗಳ ನಿರ್ವಹಣೆ, ಹಣ್ಣು ಹುಳು ನಿರ್ವಹಣೆ ಮತ್ತು ಪ್ರತ್ಯೇಕ ಹುಳು ಸಾಕು ಮನೆ ಅನುಕೂಲತೆ ಬಗ್ಗೆ ವಿವರಿಸಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಎಂ.ನೊಬೆಲ್ ಮೊರಿಸನ್, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್, ವಿಜ್ಞಾನಿ ಕೆ.ಆರ್.ಶಶಿಧರ್, ರೇಷ್ಮೆ ವಿಸ್ತರಣಾಧಿಕಾರಿಗಳಾದ ಶ್ರೀಧರ್, ಎಂ.ಕಲ್ಯಾಣಸ್ವಾಮಿ, ಚಂದ್ರಶೇಖರ್ ಹಾಜರಿದ್ದರು.
**
ಅಂಕಿ ಅಂಶ
* ₹ 50 ದ್ವಿತಳಿ ಗೂಡಿಗೆ ರಕ್ಷಣಾತ್ಮಕ ದರ
* ₹ 40 ಮಿಶ್ರತಳಿ ಗೂಡಿಗೆ ರಕ್ಷಣಾತ್ಮಕ ದರ
* ₹ 3 ಕೋಟಿ ವೆಚ್ಚದ ನೂಲು ಬಿಚ್ಚಾಣಿಕೆ ಕೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !