ಅಂಚೆ ಕಚೇರಿ ಎದುರು ಅಂಗವಿಕಲರ ಪ್ರತಿಭಟನೆ

7
ಒಂದೂವರೆ ವರ್ಷದಿಂದ ಸರಿಯಾಗಿ ಮಾಸಾಶನ ವಿತರಿಸದ ಆರೋಪ

ಅಂಚೆ ಕಚೇರಿ ಎದುರು ಅಂಗವಿಕಲರ ಪ್ರತಿಭಟನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಅಂಚೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಅನೇಕ ತಿಂಗಳಿಂದ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು ಸೇರಿದಂತೆ ಅನೇಕ ಫಲಾನುಭವಿಗಳಿಗೆ ಮಾಸಾಶನ ವಿತರಣೆಯಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್) ಪದಾಧಿಕಾರಿಗಳು ಬಿ.ಬಿ.ರಸ್ತೆಯ ಪ್ರಧಾನ ಅಂಚೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆವಿಎಸ್ ತಾಲ್ಲೂಕು ಘಟಕದ ಕಾರ್ಯದರ್ಶಿ ಉಷಾಕಿರಣ್, ‘‘ಸರ್ಕಾರದಿಂದ ಪ್ರತಿ ತಿಂಗಳು ವೃದ್ಯಾಪ್ಯ, ಅಂಗವಿಕಲರು ಹಾಗೂ ವಿಧವಾ ವೇತನ ಸರ್ಕಾರದಿಂದ ಬಿಡುಗಡೆಯಾಗುತ್ತಿದೆ. ಆದರೆ ಅಂಚೆ ಇಲಾಖೆ ಸಿಬ್ಬಂದಿ ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್ ಸಮಸ್ಯೆ ಹೆಸರಿನಲ್ಲಿ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಹೀಗಾಗಿ ವಿತರಣೆಯಾಗಬೇಕಾದ ಬಾಕಿ ಮೊತ್ತ ಸರ್ಕಾರಕ್ಕೆ ಹಿಂತಿರುಗುತ್ತಿದೆ’ ಎಂದು ಆರೋಪಿಸಿದರು.

‘ಅನೇಕ ಹಿರಿಯ ನಾಗರಿಕರು, ಅಸಹಾಯಕರು ಮಾಸಾಶನ ನೆಚ್ಚಿಕೊಂಡು ಬದುಕುತ್ತಾರೆ. ಅಂಚೆ ಇಲಾಖೆ ನೌಕರರು ಬೇಕಾಬಿಟ್ಟಿಯಾಗಿ ವರ್ತಿಸುತ್ತ ಹಿರಿಯ ಜೀವಗಳಿಗೆ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಅನೇಕರು ಔಷಧಿಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಪಿಂಚಣಿ ನೆಚ್ಚಿಕೊಂಡಿರುವವರು ಅಂಚೆ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

‘ಕುಪ್ಪಹಳ್ಳಿಯ ನಿವಾಸಿ ಕೆ.ಸಿ. ಮಮತಾ ಎಂಬುವರಿಗೆ ಸರ್ಕಾರದಿಂದ ಕಳೆದ 16 ತಿಂಗಳುಗಳಿಂದ ಪಿಂಚಣಿ ಬಿಡುಗಡೆಯಾದರೂ ಅಂಚೆ ಇಲಾಖೆ ಸಿಬ್ಬಂದಿ ವಿತರಣೆ ಮಾಡಿಲ್ಲ. ಅಧಿಕಾರಿಗಳ ಇಂತಹ ಧೋರಣೆಯಿಂದ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫಲಾನುಭವಿಗಳನ್ನು ನಿತ್ಯ ಅಂಚೆ ಕಚೇರಿಗಳಿಗೆ ಸುತ್ತಾಡಿಸುವುದನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಕೆವಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಜಿ. ಸುಬ್ರಮಣಿ ಮಾತನಾಡಿ, ‘ವಿವಿಧ ಪಿಂಚಣಿಗಳನ್ನು ಪ್ರತಿ ತಿಂಗಳು ಬಂದ ತಕ್ಷಣವೇ ನೀಡಬೇಕು. ಮಾಸಾಶನದಲ್ಲಿ ಸ್ವಲ್ಪ ಮೊತ್ತವನ್ನು ಫೋಸ್ಟ್‌ಮ್ಯಾನ್‌ಗಳು ಹಿಡಿದುಕೊಂಡು ಫಲಾನುಭವಿಗಳಿಗೆ ವಂಚನೆ ಮಾಡುತ್ತಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ಅಂಚೆ ಕಚೇರಿಯಲ್ಲಿ ಅಂಗವಿಕಲರಿಗಾಗಿ ವಿಶೇಷ ಕೌಂಟರ್ ತೆರೆಯಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಕೆವಿಎಸ್ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕುಶಕುಮಾರ್, ಪದಾಧಿಕಾರಿಗಳಾದ ಸೌಭಾಗ್ಯಮ್ಮ, ಮಮತಾ, ವೆಂಕಟಶಿವಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !