ವಿ.ವಿ ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನವಿಲ್ಲ– ಜೆಡಿಎಸ್‌ ಮುಖಂಡರ ಆಕ್ರೋಶ

7

ವಿ.ವಿ ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನವಿಲ್ಲ– ಜೆಡಿಎಸ್‌ ಮುಖಂಡರ ಆಕ್ರೋಶ

Published:
Updated:
Deccan Herald

ಕೋಲಾರ: ನಗರದಲ್ಲಿ ಸೋಮವಾರ ನಡೆದ ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೋರ್ಸ್‌ಗಳ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ ಶಾಸಕ ಕೆ.ಶ್ರೀನಿವಾಸಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆಕ್ರೋಶಗೊಂಡ ಬೆಂಬಲಿಗರು ಹಾಗೂ ಜೆಡಿಎಸ್‌ ಮುಖಂಡರು ಪ್ರತಿಭಟನೆ ಮಾಡಿದರು.

‘ವಿ.ವಿ ವತಿಯಿಂದ ಕ್ಷೇತ್ರದಲ್ಲಿ ಮೊದಲ ಸಮಾರಂಭ ಹಮ್ಮಿಕೊಂಡಿದ್ದು, ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ, ವಿ.ವಿ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ ಶಾಸಕರನ್ನು ಅವಮಾನಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗೆ ಗೌರವ ಕೊಡಬೇಕೆಂಬ ಕನಿಷ್ಠ ಪ್ರಜ್ಞೆಯೂ ವಿ.ವಿ ಅಧಿಕಾರಿಗಳಿಗೆ ಇಲ್ಲ. ಅಧಿಕಾರಿಗಳು ಸೌಜನ್ಯಕ್ಕೂ ಕಾರ್ಯಕ್ರಮದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿಲ್ಲ ಮತ್ತು ಆಹ್ವಾನ ಪತ್ರಿಕೆಯಲ್ಲಿ ಶಾಸಕರು ಹೆಸರು ಹಾಕಿಸಿಲ್ಲ’ ಎಂದು ಪಕ್ಷದ ಮುಖಂಡ ಲೋಕೇಶ್ ಆರೋಪಿಸಿದರು.

ಶೈಕ್ಷಣಿಕ ಕಾರ್ಯಕ್ರಮ: ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ‘ನಾವು ಹೊಸದಾಗಿ ವಿ.ವಿ ಆರಂಭಿಸುತ್ತಿಲ್ಲ. ಕೋರ್ಸ್‌ಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಂಡಿದ್ದೇವೆ. ಇದು ಸಂಪೂರ್ಣ ಶೈಕ್ಷಣಿಕ ಕಾರ್ಯಕ್ರಮ. ಹೀಗಾಗಿ ಆಹ್ವಾನಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿದ್ದೇವೆ. ಇದು ಸಾರ್ವಜನಿಕ ಸಮಾರಂಭವಲ್ಲ. ರಾಜಕಾರಣಿಗಳ ಹೊರತಾಗಿಯೇ ಕಾರ್ಯಕ್ರಮ ನಡೆಸಬೇಕಿರುವುದರಿಂದ ಯಾವುದೇ ಜನಪ್ರತಿನಿಧಿಯನ್ನು ಆಹ್ವಾನಿಸಿಲ್ಲ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ನಡೆಸಲು ಉದ್ದೇಶಿಸಿದ್ದು, ಈ ಬಗ್ಗೆ ಶಾಸಕರ ಜತೆ ಚರ್ಚಿಸುತ್ತೇವೆ. ಜತೆಗೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಮುಖಂಡರು ಸಮಾಧಾನಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !