ಶಸ್ತ್ರಚಿಕಿತ್ಸೆ ವೇಳೆ ವೃದ್ಧೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

7
ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರ ಸಮಜಾಯಿಷಿ

ಶಸ್ತ್ರಚಿಕಿತ್ಸೆ ವೇಳೆ ವೃದ್ಧೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Published:
Updated:
Deccan Herald

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾದ ತಾಲ್ಲೂಕಿನ ಮುಸ್ಟೂರು ಗ್ರಾಮದ ಆಂಜನಮ್ಮ (65) ಎಂಬುವರು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟರು.

ಮೃತ ವೃದ್ಧೆಯ ಸಂಬಂಧಿಕರು ಆಂಜನಮ್ಮ ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರಣ ಆಸ್ಪತ್ರೆ ಆವರಣದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು.

ಕೆಲ ದಿನಗಳ ಹಿಂದೆ ಆಂಜನಮ್ಮ ಅವರ ಬಲಗಾಲಿನ ಮೂಳೆ ಮುರಿದಿತ್ತು. ಆದ್ದರಿಂದ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಅವರಿಗೆ ಮೂಳೆತಜ್ಞ ಡಾ.ಅನಂತ್ ಮತ್ತು ಅರವಳಿಕೆ ತಜ್ಞೆ ಡಾ.ವಿಜಯಾ ಅವರ ತಂಡ ‘ಹಿಪ್ ಆರ್ಥೋಪ್ಲಾಸ್ಟಿ’ ಎಂಬ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ಆಂಜನಮ್ಮ ಮೃತಪಟ್ಟರು.

ಈ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಆಂಜನಮ್ಮ ಅವರ ಸಂಬಂಧಿಕರ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡುತ್ತ ಆಕ್ರೋಶದೊಂದಿಗೆ ವೈದ್ಯರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್, ‘ಆಂಜನಮ್ಮ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ. ಇಂತಹ ಪ್ರಕರಣಗಳು ಆಕಸ್ಮಿಕವಾಗಿ ನಡೆಯುತ್ತವೆ. ಇದರಲ್ಲಿ ವೈದ್ಯರ ತಪ್ಪಿಲ್ಲ’ ಎಂದು ಸಮಾಧಾನ ಪಡಿಸಲು ಮುಂದಾದರು.

ಆಂಜನಮ್ಮ ಅವರು ಆರೋಗ್ಯವಾಗಿದ್ದರು. ಅವರ ಹೃದಯ ಕಾಯಿಲೆ ಇರಲಿಲ್ಲ. ಇದೀಗ ಏಕಾಏಕಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದರೆ ಹೇಗೆ? ಎಂದು ಅನೇಕರು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವೈದ್ಯರ ಮನವೊಲಿಕೆ ನಂತರ ಆಂಜನಮ್ಮ ಸಂಬಂಧಿಕರು ಅವರ ಮೃತದೇಹ ಪಡೆದು ಊರಿನತ್ತ ಪ್ರಯಾಣ ಬೆಳೆಸಿದರು. ಈ ಪ್ರಕರಣದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !