ಬಂದ್‌: ಬಾಗಲಕೋಟೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ

7
ನವನಗರ, ಹಳೆ ಬಾಗಲಕೋಟೆ: ಬಲವಂತವಾಗಿ ಅಂಗಡಿ ಬಾಗಿಲು ಹಾಕಿಸಿದ ಆರೋಪ

ಬಂದ್‌: ಬಾಗಲಕೋಟೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ

Published:
Updated:
Deccan Herald

ಬಾಗಲಕೋಟೆ: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕಾಂಗ್ರೆಸ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆದಿದ್ದ ಭಾರತ್ ಬಂದ್‌ ಕರೆಗೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರ್ವಜನಿಕ ಸಾರಿಗೆ, ಅಂಗಡಿ–ಮುಂಗಟ್ಟು ಸ್ತಬ್ಧವಾಗಿದ್ದರೂ ಖಾಸಗಿ ವಾಹನಗಳ ಓಡಾಟ ಎಂದಿನಂತೆಯೇ ಇತ್ತು. ಮಧ್ಯಾಹ್ನದ ನಂತರ ಮಾರುಕಟ್ಟೆ ಜೀವ ಪಡೆಯಿತು.

ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್ ಕೂಡ ಬಂದ್‌ಗೆ ಬೆಂಬಲ ನೀಡಿತು. ಆದರೆ ಪ್ರತಿಭಟನೆಯನ್ನು ಕಾಂಗ್ರೆಸ್ ಜೊತೆ ಕೂಡಿ ಮಾಡಲಿಲ್ಲ. ಬದಲಿಗೆ ಕನ್ನಡಪರ ಸಂಘಟನೆಗಳ ಜೊತೆ ಸೇರಿ ಪ್ರತ್ಯೇಕವಾಗಿ ನಡೆಸಿತು. ಜಯ ಕರ್ನಾಟಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳೂ ಪ್ರತಿಭಟನೆಯ ಮುಂಚೂಣಿಯಲ್ಲಿದ್ದವು.

ಬಂದ್ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳು ಮುಂಜಾನೆ ಆರು ಗಂಟೆಯಿಂದಲೇ ರಸ್ತೆಗೆ ಇಳಿಯಲಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಬಸ್ ಸಂಚಾರ ಇರುವುದಿಲ್ಲ ಎಂದು ಸಾರಿಗೆ ಸಂಸ್ಥೆ ಮೊದಲು ಹೇಳಿದ್ದರೂ, ಅದು ಸಂಜೆ 6 ಗಂಟೆವರೆಗೆ ಮುಂದುವರೆಯಿತು. ಇದರಿಂದ ಪ್ರಯಾಣಿಕರು ಸಾಕಷ್ಟು ಪಡಿಪಾಟಲುಪಟ್ಟರು. ಬಂದ್ ಕರೆಯ ಅರಿವು ಇಲ್ಲದೇ ದೂರದ ಊರುಗಳಿಗೆ ತೆರಳಲು ಬಸ್‌ಗಾಗಿ ಬಂದವರು ಸಂಜೆಯವರೆಗೂ ಕಾಯುತ್ತಾ ಬಸ್‌ ನಿಲ್ದಾಣದಲ್ಲಿಯೇ ಕೂರಬೇಕಾಯಿತು. ರೈಲು ಸಂಚಾರ ಮಾತ್ರ ಎಂದಿನಂತೆಯೇ ಇದ್ದು, ‍ಪ್ರಯಾಣಿಕರ ದಟ್ಟಣೆಯ ಕಾರಣ ರೈಲಿನಲ್ಲಿ ನೂಕು–ನುಗ್ಗಲು ಉಂಟಾಯಿತು.

ಟಂ.ಟಂಗಳಿಗೆ ಸುಗ್ಗಿ: ನಗರಸಾರಿಗೆ ಬಸ್‌ ಸೇವೆ ಸ್ಥಗಿತಗೊಂಡಿದ್ದು, ಟಂ.ಟಂಗಳಿಗೆ ಸುಗ್ಗಿ ಎನಿಸಿತು.ಪ್ರಯಾಣದ ದರವೂ ದುಪ್ಪಟ್ಟು ಆಗಿದ್ದು, ಮರುಮಾತಿಲ್ಲದೇ ಹಣ ತೆತ್ತು ಪ್ರಯಾಣಿಕರು ಓಡಾಟ ನಡೆಸಬೇಕಾಯಿತು. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ನಡುವೆ ಓಡಾಟ ನಡೆಸುವವರು ಇದರಿಂದ ತೀವ್ರ ತೊಂದರೆ ಅನುಭವಿಸಿದರು. ಖಾಸಗಿ ವಾಹನಗಳ ಸಂಚಾರ ಎಂದಿನಂತಯೇ ಒತ್ತು. ಶಾಲಾ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ನೌಕರರ ಸಂಖ್ಯೆ ಕಡಿಮೆ ಇತ್ತು. ಅಲ್ಲಿ ಎಂದಿನ ಜೀವಂತಿಕೆ ಕಾಣಲಿಲ್ಲ. 

ಅಂಗಡಿ–ಮುಂಗಟ್ಟುಗಳು ಮಧ್ಯಾಹ್ನದವರೆಗೂ ಮುಚ್ಚಿದ್ದವು. ಕೆಲವು ಕಡೆ ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ಮುಚ್ಚಿದ್ದರೆ, ನವನಗರ ಬಸ್‌ ನಿಲ್ದಾಣ ಸುತ್ತಮುತ್ತ ಹಾಗೂ ಬಾಗಲಕೋಟೆಯ ಕಾಯಿಪಲ್ಲೆ ಮಾರ್ಕೆಟ್‌ನಲ್ಲಿ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದ ಆರೋಪ ಕೇಳಿಬಂದಿತು.

ಮಧ್ಯಾಹ್ನದ ನಂತರ ನಗರ ಯಥಾಸ್ಥಿತಿಗೆ ಮರಳಿತು. ಬಸ್ ಸಂಚಾರ ಇಲ್ಲದೇ, ಶಾಲಾ–ಕಾಲೇಜುಗಳು ಬಂದ್ ಆಗಿದ್ದ ಕಾರಣ ನಗರದಲ್ಲೂ ಜನದಟ್ಟಣೆ ಕಡಿಮೆ ಇತ್ತು. ಒಳರಸ್ತೆಗಳಂತೂ ಜನರಿಲ್ಲದೇ ಬಿಕೊ ಎನ್ನುತ್ತಿದ್ದವು. ಸದಾ ಚಟುವಟಿಕೆಯ ತಾಣವಾಗಿರುತ್ತಿದ್ದ ನವನಗರದ ಜಿಲ್ಲಾಡಳಿತ ಭವನ ಕೂಡ ಮಂಕಾಗಿತ್ತು. ಆಸ್ಪತ್ರೆ, ಔಷಧ ಅಂಗಡಿ, ಹೋಟೆಲ್‌ಗಳು ತೆರೆದಿದ್ದವು. ತರಕಾರಿ ಮಾರುಕಟ್ಟೆಗೆ ಬಂದ್‌ ಬಿಸಿ ತಟ್ಟಿರಲಿಲ್ಲ. ಆದರೆ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ಕಡಿಮೆ ಇತ್ತು. ಚಿತ್ರಮಂದಿರ, ನಾಟಕ ಕಂಪೆನಿಗಳು ಮಧ್ಯಾಹ್ನದ ಅವಧಿಯಲ್ಲಿ ಕಾರ್ಯನಿರ್ವಹಿಸಿದವು. 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !