ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಇಲ್ಲ: ಅಸಾದುಲ್ಲಾಖಾನ್‌

7
ಹಿರಿಯ ನಾಗರಿಕರ ಕ್ರೀಡಾಕೂಟ

ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಇಲ್ಲ: ಅಸಾದುಲ್ಲಾಖಾನ್‌

Published:
Updated:
Deccan Herald

ಕೋಲಾರ: ‘ಕ್ರೀಡೆಗೆ ವಯಸ್ಸಿನ ಬೇಧವಿಲ್ಲ. ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೂ ಕ್ರೀಡೆಯಲ್ಲಿ ಭಾಗವಹಿಸಬಹುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಸಾದುಲ್ಲಾಖಾನ್‌ ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಸರ್ಕಾರ ಎಲ್ಲರಿಗೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸರ್ಕಾರ ಕಲ್ಪಿಸಿದೆ. ಹಿರಿಯ ನಾಗರಿಕರು ಯಾವುದೇ ಮುಜುಗರವಿಲ್ಲದೆ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದರು.

‘ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಚಟುವಟಿಕೆ ಇಲ್ಲವಾಗಿದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೈಹಿಕ ಚಟುವಟಿಕೆಗಳಿಂದ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತವೆ. ಇಂದಿನ ಕ್ರೀಡಾಕೂಟದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಯುವಕರಲ್ಲಿ ಕ್ರೀಡಾಸಕ್ತಿ ಇಲ್ಲವಾಗಿದೆ. ಆಧುನಿಕತೆ ಬೆಳೆದಂತೆ ಕ್ರೀಡೆಗಳು ಮರೆಯಾಗುತ್ತಿವೆ. ಈ ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ, ಈಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ಹಿರಿಯ ನಾಗರಿಕರು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿರುವುದು ಯುವಕ ಯುವತಿಯರಿಗೆ ಪ್ರೇರಣೆಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಆರೋಗ್ಯ ಕುಂಠಿತ: ‘ವಯೋವೃದ್ಧರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಂಠಿತಗೊಳ್ಳುತ್ತದೆ. ಹಿರಿಯರ ನಾಗರಿಕರು ಆರೋಗ್ಯವಂತರಾಗಿರಲು ಕ್ರೀಡೆ ಮತ್ತು ವ್ಯಾಯಾಮ ಅತ್ಯಗತ್ಯ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿದೆ. ದೈಹಿಕ ಶ್ರಮ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಮನುಷ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಸಾಧನೆ ಮಾಡಬಹುದು. ಸಂಸಾರದ ಜಂಜಾಟದಲ್ಲಿ ಆರೋಗ್ಯ ನಿರ್ಲಕ್ಷಿಸಬಾರದು’ ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ವೆಂಕಟಸ್ವಾಮಿ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಆರ್.ನಂಜುಂಡಪ್ಪ, ರಾಮಕೃಷ್ಣೇಗೌಡ, ವಕೀಲ ಧನರಾಜ್‌ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !