ಬಾಲಿವುಡ್ ಮಾದರಿ ಆರ್ಥಿಕ ಇತಿಹಾಸ

7

ಬಾಲಿವುಡ್ ಮಾದರಿ ಆರ್ಥಿಕ ಇತಿಹಾಸ

Published:
Updated:
Deccan Herald

ಲಂಡನ್ನಿನ ಪ್ರಸಿದ್ಧ ವಾಣಿಜ್ಯ ಪತ್ರಿಕೆ ‘ಫೈನಾನ್ಸಿಯಲ್ ಟೈಮ್ಸ್’ನ ಮುಂಬೈ ವರದಿಗಾರರಾಗಿ 2011ರಿಂದ 2016ರವರೆಗೆ ಕೆಲಸ ಮಾಡಿದ ಜೇಮ್ಸ್‌ ಕ್ರ್ಯಬ್ ಟ್ರೀ ಅವರು ಭಾರತದ ಸದ್ಯದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಬಗ್ಗೆ ಇತ್ತೀಚೆಗೆ ಒಂದು ಪುಸ್ತಕ ಬರೆದಿದ್ದಾರೆ. ಅದರ ಪೂರ್ತಿ ಶೀರ್ಷಿಕೆ ‘ಬಿಲಿಯನೇರ್ ರಾಜ್ - ಭಾರತದ ಸುವರ್ಣದ ಗಿಲೀಟಿನ ಯುಗದಲ್ಲಿ ಒಂದು ಪಯಣ’ (Billionaire Raj—A journey through India’s gilded age).

ಒಂದು ಕಾಲದಲ್ಲಿ ನಾವೆಲ್ಲ ಅತಿಹೆಚ್ಚು ಶ್ರೀಮಂತರನ್ನು ಕೊಟ್ಯಧೀಶರು ಎಂದು ಪರಿಗಣಿಸುತ್ತಿದ್ದೆವು. ಆದರೆ, 21ನೆಯ ಶತಮಾನದಲ್ಲಿ ಇಂತಹ ಶ್ರೀಮಂತರನ್ನು ಬಿಲಿಯನೇರ್ ಎಂದು ಕರೆಯುತ್ತೇವೆ. ಒಂದು ಬಿಲಿಯನ್ ಎಂದರೆ ಶತಕೋಟಿ. ಡಾಲರ್ ಲೆಕ್ಕಾಚಾರದಲ್ಲಿ ಸುಮಾರು ₹ 7,200 ಕೋಟಿ. ಇದಕ್ಕಿಂತ ಹೆಚ್ಚು ಸಂಪತ್ತಿರುವವರು ಭಾರತದಲ್ಲೇ ಈಗ 110ಕ್ಕೂ ಹೆಚ್ಚು ಜನ ಇದ್ದಾರೆ. ಕ್ರ್ಯಬ್ ಟ್ರೀ ಅವರ ಪುಸ್ತಕ ಇಂಥ ಭಾರತೀಯ ಬಿಲಿಯನೇರ್‌ಗಳ ಚಿತ್ರಣ.

ಅವರ ಪ್ರಕಾರ ಈಗ ನಡೆಯುತ್ತಿರುವುದು ಬಿಲಿಯನೇರ್‌ಗಳ ರಾಜ್ಯ. ‘ವಿಶ್ವದ ಎಲ್ಲ ಕ್ಯಾಪಿಟಲಿಸ್ಟ್‌ ದೇಶಗಳಲ್ಲೂ ಇಂಥದೊಂದು ಯುಗ ಆಗಿ ಹೋಗಿದೆ. ಆದರೆ, ತದನಂತರ ಕಡಿಮೆ ವಿಷಮತೆ ಉಳ್ಳ ಸಮಾಜಗಳ, ಅಂದರೆ ಪ್ರಗತಿಶೀಲ ಕ್ಯಾಪಿಟಲಿಸಂನ ಉದಯವಾಯಿತು. ಭಾರತದಲ್ಲೂ ಇನ್ನು ಮುಂದೆ ಈ ರೀತಿಯ ಬೆಳವಣಿಗೆ ಆಗಬಹುದು.’ ಇದು ಜೇಮ್ಸ್ ಕ್ರ್ಯಬ್ ಟ್ರೀ ಅವರ ಪುಸ್ತಕದ ಮುಖ್ಯ ವಾದ. ಪುಸ್ತಕದ ಶೀರ್ಷಿಕೆಯಲ್ಲಿ ಅವರು ಮಾರ್ಕ್ ಟ್ವೇನ್ 20ನೆಯ ಶತಮಾನದ ಪ್ರಾರಂಭದ ಅಮೆರಿಕನ್ ಸಮಾಜದ ಆತ್ಮಟೀಕೆಗಾಗಿ ಉಪಯೋಗಿಸಿದ gilded age, ಅಂದರೆ ಸುವರ್ಣಯುಗವಲ್ಲ; ಚಿನ್ನದ ಗಿಲೀಟಿನ ಯುಗ - ಹೊರಗೆ ಚಿನ್ನದ ಥಳಕು ಒಳಗೆ ವಿಷಮತೆ, ಭ್ರಷ್ಟಾಚಾರಗಳ ಕೊಳೆತ- ಎಂಬರ್ಥದ ಪದವನ್ನು ಇಂದಿನ ಭಾರತದ ಬಗ್ಗೆ ಬಳಸಿದ್ದಾರೆ.

ಎರಡು ತಿಂಗಳ ಹಿಂದೆ ಪ್ರಕಟವಾದ ಈ ಪುಸ್ತಕ ಸಮಕಾಲೀನ ಭಾರತೀಯ ಸಮಾಜ, ಆರ್ಥಿಕ ರಂಗ ಮತ್ತು ರಾಜಕೀಯ ಕ್ಷೇತ್ರಗಳ ಬಗೆಗಿನ ಅತ್ಯಂತ ಪ್ರಭಾವೀ ಬರವಣಿಗೆ ಎಂದು ಭಾರತ, ಅಮೆರಿಕ, ಬ್ರಿಟನ್, ಸಿಂಗಪುರ ಮುಂತಾದ ದೇಶಗಳಲ್ಲಿ ಈಗಾಗಲೇ ಪ್ರಸಿದ್ಧವಾಗಿದೆ. ಅಲ್ಲದೆ ಕ್ರ್ಯಬ್ ಟ್ರೀ ಅವರ ಸಂದರ್ಶನ ವಿಶ್ವದ ಹಲವು ಟಿ.ವಿ. ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಕಳೆದೆರಡು ತಿಂಗಳುಗಳಲ್ಲಿ ಪ್ರಸಾರಗೊಂಡಿದೆ. ಸದ್ಯ ಸಿಂಗಪುರದಲ್ಲಿ ಪ್ರಾಧ್ಯಾಪಕರಾಗಿರುವ ಕ್ರ್ಯಬ್ ಟ್ರೀ ಈಗ ಒಬ್ಬ ಹೊಸ ಸೆಲೆಬ್ರಿಟಿ ಲೇಖಕರಾಗಿದ್ದಾರೆ.

ಪುಸ್ತಕದ ವ್ಯಕ್ತಿಚಿತ್ರಗಳು ಅನೇಕ ವಿವರಗಳಿಂದ ತುಂಬಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಕಳೆದ ದಶಕದ ಹಲವು ಸ್ಟಾರ್‌ಗಳ ಸ್ವಾರಸ್ಯಕರ ಶಬ್ದ ಚಿತ್ರಗಳ ನಡುವೆ ಅನೇಕ ಗ್ರಂಥಗಳಿಂದ ಆಯ್ದ ಅಂಕಿ–ಅಂಶ, ವಿಶ್ಲೇಷಣೆಗಳನ್ನು ಬೆರೆಸಿ ಈ ಗ್ರಂಥ ರಚಿಸಲಾಗಿದೆ. 
ಉದಾಹರಣೆಗೆ: ವಿಷಾದಭರಿತ ವಿಜಯ್ ಮಲ್ಯ — ಲಂಡನ್ನಿನ ಅವರ ಶ್ರೀಮಂತ ಭವನದಲ್ಲಿ ನಡೆಸಿದ ಸಂದರ್ಶನ ಅದ್ವಿತೀಯ. ಯಾವ ಭಾರತೀಯ ಪತ್ರಕರ್ತನೂ ಇದುವರೆಗೆ ಇದನ್ನು ಸಾಧಿಸಿಲ್ಲ. ‘ನನ್ನ ಕನಸಿನ ಭಾರತ’ದ ಬಗ್ಗೆ ಪದೇ ಪದೇ ಕೊಚ್ಚಿಕೊಳ್ಳುವ ನವೀನ ಜಿಂದಾಲ್ ಮತ್ತು ಪಕ್ಕದಲ್ಲೇ ಜಂಗು ತಿನ್ನುತ್ತಿರುವ ಸ್ಟೀಲ್ ಮಿಲ್ ಮತ್ತು ಪವರ್ ಸ್ಟೇಷನ್, ಹೆಜ್ಜೆ ಹೆಜ್ಜೆಗೆ ಯಶಸ್ಸು ಪಡೆಯುತ್ತಿರುವ ಕೂರ್ಮಾವತಾರಿ ಗೌತಮ್ ಅದಾನಿ, ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿಯವರ ಮಗಳ ವಿವಾಹದ ಅದ್ದೂರಿತನ, ಮುಕೇಶ್ ಅಂಬಾನಿ ಗಳಿಸಿದ ಯಶಸ್ಸಿನ ಶಿಖರ ಮತ್ತವರ ಮಲಬಾರ್ ಹಿಲ್‌ನಲ್ಲಿಯ 27 ಅಂತಸ್ತಿನ ಮನೆಯ ಅಬ್ಬರ...

ನರೇಂದ್ರ ಮೋದಿಯವರ ಹಾಲೋಗ್ರಾಫಿಕ್ ವ್ಯಕ್ತಿಚಿತ್ರ, ದಿವಾಳಿಯ ಹೊಸ್ತಿಲಿಗೆ ಬಂದಿರುವ ಆಂಧ್ರದ ಲ್ಯಾಂಕೋ ಕಂಪನಿಯ ಮಾಲೀಕ ಮತ್ತು ವಿಜಯವಾಡದ ಮಾಜಿ ಎಂ.ಪಿ. ಲಗಡಪತಿ ರಾಜಗೋಪಾಲ (2014ರ ಲೋಕಸಭೆಯಲ್ಲಿ ಮೆಣಸಿನ ಪುಡಿ ತೂರಿದ ಖ್ಯಾತಿವಂತ), ಅರ್ನಾಬ್ ಗೋಸ್ವಾಮಿ ಅವರ ‘ದೇಶ ಕೇಳುತ್ತಿದೆ’ ಎಂದು ಕಿರುಚಾಡುವ ಟಿ.ವಿ. ಷೋಗಳು.

ಐಪಿಎಲ್‌ನ ಲಲಿತ್‌ ಮೋದಿ, ಎನ್. ಶ್ರೀನಿವಾಸನ್, ಶಾಂತಕುಮಾರನ್ ಶ್ರೀಸಾಂತ್ ಅವರ ರಾದ್ಧಾಂತಗಳು. ಮುಂಬೈ ಷೇರು ಮಾರ್ಕೆಟ್ಟಿನ ಗೂಳಿ ಎಂದು ಹೆಸರಾದ ರಾಕೇಶ ಝುಂಝುನವಾಲಾ, ಲಕ್ಷ ಕೋಟಿಗಳ ಹೊಸ ಸಂಖ್ಯೆಯನ್ನು ನಮ್ಮ ಬಳಕೆಗೆ ಒದಗಿಸಿದ ಮಾಜಿ ಸಿಎಜಿ ವಿನೋದ್‌ ರಾಯ್... ಇತ್ಯಾದಿ ಇತ್ಯಾದಿ.

ಎಲ್ಲ ದೇಶಗಳಲ್ಲಿ ಬಾಲಬಡುಕ ಬಂಡವಾಳಶಾಹಿ (crony capitalism) ಬಂದು ಹೋಗಿದೆ. ಆದರೆ, ನಂತರ ಬಂದ ಹಲವು ಸುಧಾರಣೆಗಳಿಂದಾಗಿ ಭ್ರಷ್ಟಾಚಾರ, ವಿಷಮತೆ ಕಡಿಮೆಯಾಯಿತು ಎನ್ನುವ ಕ್ರ್ಯಬ್ ಟ್ರೀ, ‘ಭಾರತದಲ್ಲಿ ಈ ಕೆಲಸ ಮಾಡುವರಾರು? ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್, ಅಥವಾ ಮತ್ತಿನ್ನಾರು ಮಹಾನುಭಾವರು’ ಎನ್ನುವ ಗೊಂದಲದಲ್ಲಿ ಬೀಳುತ್ತಾರೆ.

ಭಾರತದಲ್ಲಿ 1920ರಲ್ಲೇ ಉಗಮವಾದ ರಾಜಕೀಯ ಮತ್ತು ವಾಣಿಜ್ಯದ ಸಂಗಮವನ್ನು ಲೇಖಕರು ಪೂರ್ಣವಾಗಿ ಕಡೆಗಣಿಸಿದ್ದಾರೆ. ಇದು 21ನೆಯ ಶತಮಾನದ ಕೂಸು ಮಾತ್ರ ಎನ್ನುವಂತೆ ಚಿತ್ರಿಸಿದ್ದಾರೆ. ಸ್ವಾತಂತ್ರ್ಯಪೂರ್ವ ಭಾರತದ ಕಾಂಗ್ರೆಸ್ ಪಾರ್ಟಿಯ ಇತಿಹಾಸವನ್ನು, 1944-45 ರಲ್ಲಿ ಟಾಟಾ, ಬಿರ್ಲಾ, ಕಸ್ತೂರಭಾಯಿ ಲಾಲ ಭಾಯಿ, ಪುರುಷೋತ್ತಮ ದಾಸ್ ಠಾಕುರ್ ದಾಸ್, ಲಾಲಾ ಶ್ರೀರಾಮ, ಶ್ರೋಫ್ಫ್ ಮತ್ತು ಜಾನ್ ಮಥಾಯಿ ಅವರು ತಯಾರಿಸಿದ ‘ಬಾಂಬೆ ಪ್ಲ್ಯಾನ್’ಅನ್ನು ನೋಡಬೇಕು. ಭಾರತದ 1947ರಿಂದ 91ರವರೆಗಿನ ಆರ್ಥಿಕ ಆಗುಹೋಗುಗಳ ರೂಪರೇಷೆ ಅದರಲ್ಲಿತ್ತು. ಸಾರ್ವಜನಿಕವಾಗಿ ಈ ವ್ಯವಸ್ಥೆಯನ್ನು ‘ಲೈಸೆನ್ಸ್ ರಾಜ್’ ಎಂದು ಹೀಗಳೆದರೂ ಈ ಕಾಲದಲ್ಲಿ ದೊಡ್ಡ ಉದ್ಯಮಿಗಳ ಮತ್ತು ಬಿಲಿಯನೇರ್‌ಗಳ ಬೆಳವಣಿಗೆಯೇನೂ ಕುಂದಲಿಲ್ಲ.

ದೇಶದ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು, 50 ವರ್ಷಗಳ ಕಾಲ ನಿಭಾಯಿಸಿದ ಡಾ.ಮನಮೋಹನ್ ಸಿಂಗ್ ಅವರು 2004ರಲ್ಲಿ ‘ಬಾಂಬೆ ಪ್ಲ್ಯಾನ್‌’ ಬಗೆಗೆ ಈ ರೀತಿ ಹೇಳಿದರು: ‘ಅದೊಂದು ಅದ್ಭುತ ದಸ್ತಾವೇಜು ಆಗಿತ್ತು. ಮತ್ತಾವ ಪ್ರಗತಿಪರ ದೇಶದಲ್ಲಿಯೂ ಈ ರೀತಿ ಕೆಲವೇ ಉದ್ಯಮಿಗಳು ಕೂಡಿಕೊಂಡು ಇಂತಹ ದೂರದೃಷ್ಟಿಯ ಆರ್ಥಿಕ ಯೋಜನೆಯನ್ನು ದೇಶದ ಮುಂದೆ ಪ್ರಸ್ತುತಪಡಿಸಿಲ್ಲ. ಕೃಷಿ ಪ್ರಧಾನ ಭಾರತವನ್ನು ಔದ್ಯೋಗಿಕ ಭಾರತವಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಇದು ಪ್ರಮುಖ ಪಾತ್ರವಹಿಸಿತ್ತು. ಅಷ್ಟೇ ಅಲ್ಲದೆ ನಮ್ಮ ಎಲ್ಲ ಪಂಚವಾರ್ಷಿಕ ಯೋಜನೆಗಳ ಮಾರ್ಗದರ್ಶಕ ಆಗಿತ್ತು’.

ಹೀಗಿದ್ದಾಗ ಉಳಿದ ವಿಶ್ಲೇಷಕರಂತೆಯೇ ಕ್ರ್ಯಾಬ್ ಟ್ರೀ ಕೂಡ 1947-91ರ ನಡುವಿನ ಕಾಲವನ್ನು ‘ಸಮಾಜವಾದ’ದ ಕಾಲವೆಂದು ಕರೆಯುವುದು ಆಶ್ಚರ್ಯಕರ. ಈಗಿನ ಅನೇಕ ಬೃಹತ್ ಉದ್ಯಮಗಳ ಸಾಲದ ಸಂಕಟಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಬಹಳಷ್ಟು ಉದ್ಯಮಿಗಳು ಸ್ವಂತ ಹಣ ಹಾಕದೇ ಬ್ಯಾಂಕು ಸಾಲದಿಂದಲೇ ಕಟ್ಟಬಯಸಿದ ಸಾಮ್ರಾಜ್ಯ ಮತ್ತು ಕಣ್ಣುಮುಚ್ಚಿ ಅವರಿಗೆ ಬೇಕಾದಷ್ಟು ಸಾಲ ಕೊಟ್ಟ ಬ್ಯಾಂಕುಗಳ ಬಗ್ಗೆ ಅವರು ತಮ್ಮ ಪತ್ರಿಕೋದ್ಯಮದ ದಿನಗಳಲ್ಲಿ ಸಾಕಷ್ಟು ವರದಿಗಳನ್ನು ಬರೆದವರು.

ಪುಸ್ತಕದಲ್ಲಿ ಒಂದು ಕಡೆ ಅವರು ಐ.ಟಿ. ಮತ್ತು ಔಷಧ ವ್ಯವಸಾಯದಲ್ಲಿ ಹಣ ಗಳಿಸಿದ ಬಿಲಿಯನೇರ್‌ಗಳನ್ನು ‘ಒಳ್ಳೆಯ ಬಿಲಿಯನೇರ್’ ಎಂದು ಕರೆಯುತ್ತಾರೆ. ಆದರೆ, ಮುಂದೆಲ್ಲೂ ಅವರು ಯಾವುದೇ ‘ಒಳ್ಳೆಯ’ ಬಿಲಿಯನೇರ್‌ನನ್ನು ಸಂದರ್ಶಿಸಿ ಅವರ ಬಗ್ಗೆ ಬರೆದಿಲ್ಲ. ಈ ಶತಮಾನದಲ್ಲಿ ಭಾರತ ಅಂತರಾರಾಷ್ಟ್ರೀಯ ಗಮನ ಸೆಳೆದಿದ್ದು ಇಂಥ ಐ.ಟಿ. ಮತ್ತು ಔಷಧಿ ಉದ್ಯೋಗಗಳ ಯಶಸ್ಸಿನ ಮೂಲಕವಲ್ಲವೇ?

ಒಟ್ಟಾರೆಯಾಗಿ, ಇದೊಂದು ಓದಬೇಕಾದ ಪುಸ್ತಕ. ಒಳ್ಳೆಯ ಬರಹಗಾರರಾದ ಕ್ರ್ಯಬ್ ಟ್ರೀ ಈ ಬಿಲಿಯನೇರ್‌ಗಳ ಬಗ್ಗೆ ಒಂದು ಕಾದಂಬರಿಯನ್ನೋ ಅಥವಾ ಸಿನಿಮಾ ಚಿತ್ರಕಥೆಯನ್ನೋ ಬರೆದರೆ ಆಶ್ಚರ್ಯವೇನಿಲ್ಲ. ಭಾರತವನ್ನು ಬಿಲಿಯನೇರ್‌ಗಳು ಹೇಗೆ ಆಳುತ್ತಿದ್ದಾರೆ ಎನ್ನುವ ಬಗ್ಗೆ ನಿಮಗೆ ಕುತೂಹಲವಿದ್ದರೆ ಈ ಪುಸ್ತಕ ನಿಮಗೆ ನಿರಾಶೆ ಉಂಟುಮಾಡುವುದು ಖಂಡಿತ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !