ಬರಡು ಭೂಮಿಯಲ್ಲಿ ಹಸಿರು; ಕೃಷಿಯಲ್ಲಿ ಖುಷಿ..!,

7
ನವಣೆ ಬೆಳೆದ ಕೃಷಿಕನಿಗೆ ಸನ್ಮಾನದ ಗರಿ; ಶ್ರೇಷ್ಠ ಕೃಷಿಕ ಪ್ರಶಸ್ತಿ

ಬರಡು ಭೂಮಿಯಲ್ಲಿ ಹಸಿರು; ಕೃಷಿಯಲ್ಲಿ ಖುಷಿ..!,

Published:
Updated:
Deccan Herald

ತಾಂಬಾ: ಬರಡು ಭೂಮಿಯಲ್ಲಿ ಹಸಿರು ಮೂಡಿಸಿದ ಅನ್ನದಾತನೀತ. ಸದಾ ಪ್ರಯೋಗಶೀಲ. ಹೊಸತನದ ಹಪಾಹಪಿ. ಕೃಷಿಯಲ್ಲೇ ಖುಷಿ ಕಂಡ ಸಾಧಕನೀತ.

ಗ್ರಾಮದ ಪ್ರಗತಿಪರ ರೈತ ಬೀರಪ್ಪ ಚಿ.ವಗ್ಗಿ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬುದನ್ನು ಸಾಕಾರಗೊಳಿಸಿಕೊಂಡವರು. ಇದೀಗ ಪ್ರಗತಿಪರ ಕೃಷಿಕ ಎಂಬ ಹೆಮ್ಮೆ , ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬರಗಾಲವನ್ನೇ ಹಾಸಿ, ಹೊದ್ದಿರುವ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಬೀರಪ್ಪ ಕೃಷಿಯಲ್ಲಿ ವಿಶೇಷ ಸಾಧನೆಗೈದಿದ್ದಾರೆ. ನೀರಿನ ಕೊರತೆ ನೀಗಿಸಿಕೊಳ್ಳಲು ತಮ್ಮ ತೋಟದಲ್ಲಿ 110 ಅಡಿ ಉದ್ದ, 110 ಅಡಿ ಅಗಲ, 60 ಅಡಿ ಆಳವಾದ ಬಾವಿ ತೋಡಿಸಿ, ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ 70 ಎಕರೆ ಫಲವತ್ತಾದ ಭೂಮಿಯಲ್ಲಿ ಲಿಂಬು, ಕಬ್ಬು, ಕಡಲೆ, ಉಳ್ಳಾಗಡ್ಡಿ, ಹತ್ತಿ, ಗೋವಿನ ಜೋಳ ಸೇರಿದಂತೆ ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತಿದ್ದು, ಹೆಚ್ಚಿನ ಇಳುವರಿ ಪಡೆಯುವುದು ಇವರ ಕೃಷಿ ವೈಶಿಷ್ಟ್ಯ.

ನಿಂಬೆ ಬೆಳೆಗೆ ಹೆಸರಾದ ಇಂಡಿ ತಾಲ್ಲೂಕಿನ ಪ್ರಗತಿಪರ ಕೃಷಿಕ ಎಂದೇ ಎಲ್ಲೆಡೆ ಖ್ಯಾತಿಯಾಗಿರುವ ಬೀರಪ್ಪ ಮೂರು ದಶಕಗಳಿಂದಲೂ ನಿಂಬೆ ಸಸಿಗಳನ್ನು ಬೆಳೆಯುತ್ತಿದ್ದಾರೆ. ಈ ಸಸಿಗಳನ್ನು ನಾಟಿಗಾಗಿ ರಾಜ್ಯವೂ ಸೇರಿದಂತೆ ಹೊರ ರಾಜ್ಯದ ರೈತರಿಗೆ ಮಾರಾಟ ಮಾಡುತ್ತಾರೆ. ಇವರ ಸಸಿಗಳನ್ನು ಪಡೆಯಲು ರೈತರಲ್ಲಿ ಪೈಪೋಟಿಯಿದೆ.

ಹತ್ತಿ, ಮೆಕ್ಕೆಜೋಳದಲ್ಲಿ ಹೆಚ್ಚಿನ ಇಳುವರಿ ಪಡೆದಿರುವುದರಿಂದ ಕೃಷಿ ಇಲಾಖೆ ಅನೇಕ ಬಾರಿ ಇವರ ಹೊಲದಲ್ಲೇ ಕೃಷಿ ಕ್ಷೇತ್ರೋತ್ಸವ ನಡೆಸಿ, ವಿವಿಧೆಡೆಯ ರೈತರಿಗೆ ಇವರ ಬೆಳೆಯನ್ನೇ ಪ್ರಾತ್ಯಕ್ಷಿಕೆಯಾಗಿ ಪ್ರದರ್ಶಿಸಿದ್ದಾರೆ. ಇವರಿಂದ ಬೆಳೆಯ ಮಾಹಿತಿಯನ್ನು ರೈತರಿಗೆ ಕೊಡಿಸಿದ್ದಾರೆ.

ಬೆಳವಲ ನಾಡಿನ ಪ್ರಮುಖ ಹಾಗೂ ಸಿರಿಧಾನ್ಯಗಳಲ್ಲಿ ಒಂದಾದ ಬೆಳೆ ನವಣೆ. ಗದಗ ಜಿಲ್ಲೆಯ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೀಜೋತ್ಪಾದನೆ ಮಾಡಿದ ಡಿ.ಎಚ್.ಎಫ್‌.ಟಿ ನವಣೆ ಬೀಜವನ್ನು ಅಲ್ಲಿಂದ ತಂದು, ತಮ್ಮ ಜಮೀನಿನಲ್ಲಿ ಬಿತ್ತಿ ಹೆಚ್ಚಿನ ಇಳುವರಿ ಪಡೆದ ಸಾಧನೆ ಇವರದ್ದು. ಇವುಗಳ ಜತೆಯಲ್ಲೇ ಬಿಳಿ ಜೋಳ, ಜವೆ (ಗೋಧಿ), ತೊಗರಿ ಇನ್ನಿತರ ಆಹಾರ ಧಾನ್ಯವನ್ನು ಬೆಳೆಯುತ್ತಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !