ಡಯಟ್ ಕಚೇರಿ ಸ್ಥಳಾಂತರಕ್ಕೆ ಆಗ್ರಹ

7

ಡಯಟ್ ಕಚೇರಿ ಸ್ಥಳಾಂತರಕ್ಕೆ ಆಗ್ರಹ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಗಲಗುರ್ಕಿಯಲ್ಲಿರುವ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜು ಕಟ್ಟಡದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥ್ ರೆಡ್ಡಿ, ‘ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಿದ್ದ 6 ಕೊಠಡಿಗಳಿಗೆ 2014ರಲ್ಲಿ ಡಯಟ್ ಕಚೇರಿ ಸ್ಥಳಾಂತರಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನಿರ್ದೇಶಕರು ಆದೇಶ ಹೊರಡಿಸಿದ್ದರು’ ಎಂದು ಹೇಳಿದರು.

‘2016ರ ಡಿಸೆಂಬರ್‌ನಲ್ಲಿ ಡಯಟ್ ಕಚೇರಿಯನ್ನು ವಸತಿ ನಿಲಯದ ಹೆಚ್ಚುವರಿ ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಸದ್ಯ ಡಯಟ್‌ ಸಿಬ್ಬಂದಿ ಈ ಹಿಂದೆ ನೀಡಿದ್ದ ಕೊಠಡಿಗಳಲ್ಲದೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ತರಗತಿ ಕೊಠಡಿಗಳನ್ನು ಸಹ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದರು.

‘ಡಯಟ್ ಸಿಬ್ಬಂದಿ ಕಾಲೇಜು ಪ್ರಾಂಶುಪಾಲರ ಗಮನಕ್ಕೆ ತರದೆ ಇತ್ತೀಚೆಗೆ ಯೋಗ ತರಬೇತಿ ಕೊಠಡಿಯ ಬಾಗಿಲನ್ನು ಕಿತ್ತು ಹಾಕಿ ಕಾನೂನುಬಾಹಿರವಾಗಿ ಕಂಪ್ಯೂಟರ್ ಕೊಠಡಿಯಾಗಿ ಮಾರ್ಪಡಿಸಿದ್ದಾರೆ. ಸದ್ಯ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಒಂದೇ ಕೊಠಡಿಯಲ್ಲಿ ಕೆಲಸ ನಿರ್ವಹಿಸುವ ಸ್ಥಿತಿ ಬಂದಿದೆ. ಡಯಟ್ ಸಿಬ್ಬಂದಿಯಿಂದಾಗಿ ಕಾಲೇಜಿನಲ್ಲಿ ನೀರು, ಶೌಚಾಲಯ, ಸ್ವಚ್ಛತೆ ವಿಚಾರಗಳಲ್ಲಿ ಸಮಸ್ಯೆ ತಲೆದೋರಿದೆ’ ಎಂದು ಹೇಳಿದರು.

‘ಇಷ್ಟೇ ಅಲ್ಲದೆ ಕಾಲೇಜಿನ ಆಟ ಮೈದಾನದಲ್ಲಿ ಡಯಟ್‌ ಸಂಸ್ಥೆ ಕಚೇರಿ ನಿರ್ಮಿಸುವ ಪ್ರಯತ್ನಗಳು ನಡೆದಿದ್ದು. ಒಂದೊಮ್ಮೆ ಹಾಗೇನಾದರೂ ಆದರೆ ಕಾಲೇಜಿಗೆ ಮೂಲಸೌಕರ್ಯಗಳ ಕೊರತೆ ಎದುರಾಗುತ್ತದೆ. ಆದ್ದರಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿಯಲ್ಲಿ ಖಾಲಿ ಇರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು. ವಿದ್ಯಾರ್ಥಿ ಮುಖಂಡರಾದ ಮಲ್ಲಿಕಾರ್ಜುನ್, ಸಂತೋಷ್, ಭಾರ್ಗವ್, ರಶ್ಮಿ, ಸೌಮ್ಯಾ, ಸಿಂಧು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !