ಎರಡು ಕೊಲೆಯತ್ನ ಪ್ರಕರಣ: ಆರು ಆರೋಪಿಗಳ ಬಂಧನ

7

ಎರಡು ಕೊಲೆಯತ್ನ ಪ್ರಕರಣ: ಆರು ಆರೋಪಿಗಳ ಬಂಧನ

Published:
Updated:

ಮಂಗಳೂರು: ಸೆಪ್ಟೆಂಬರ್‌ 24ರಂದು ಮೂಡುಬಿದಿರೆಯ ಗಂಟಾಲ್‌ಕಟ್ಟೆ ಮತ್ತು ಗುರುಪುರ ಕೈಕಂಬದ ಸೂರಲ್ಪಾಡಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆಯತ್ನ ಪ್ರಕರಣಗಳಲ್ಲಿ ತಲಾ ಮೂವರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

‘ಗಂಟಾಲ್‌ಕಟ್ಟೆಯಲ್ಲಿ ಸೆ.24ರಂದು ನಸುಕಿನಲ್ಲಿ ಇಮ್ತಿಯಾಝ್‌ ಎಂಬಾತನ ಮೇಲೆ ದಾಳಿ ನಡೆಸಿದ್ದ ತಂಡವೊಂದು ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿತ್ತು. ಈ ‍ಪ್ರಕರಣದಲ್ಲಿ ಮಂಗಳೂರಿನ ತೋಕೂರು ಗ್ರಾಮದ ಎಂಎಸ್‌ಇಜೆಡ್‌ ಕಾಲೋನಿಯ ಶಿವಾಜಿನಗರ ಕೋಡಿಕೆರೆ ನಿವಾಸಿ ಧನರಾಜ್‌ ಅಲಿಯಾಸ್‌ ರಧನು (25), ಹಳೆಯಂಗಡಿ ಸಮೀಪದ ಸಸಿಹಿತ್ಲು ನಿವಾಸಿ ದಿನೇಶ್ ಪೂಜಾರಿ (38) ಮತ್ತು ಸುರತ್ಕಲ್‌ನ ಕುಳಾಯಿ ಹೊನ್ನಕಟ್ಟೆ ನಿವಾಸಿ ಶಾಶ್ವತ್‌ ಶೆಟ್ಟಿ ಅಲಿಯಾಸ್ ಶಾಶ್ವತ್‌ (23) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ತಿಳಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಇಮ್ತಿಯಾಝ್‌ ಗಂಟಾಲ್‌ಕಟ್ಟೆಯಲ್ಲಿ ಬದ್ರಿಯಾ ಎಂಬ ಹೋಟೆಲ್‌ ನಡೆಸುತ್ತಿದ್ದ. ಅಲ್ಲಿಗೆ ಹೋದ ಆರೋಪಿಗಳು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಕೆಲವು ಆರೋಪಿಗಳ ಬಂಧನ ಬಾಕಿ ಇದೆ. ಬಂಧಿತ ಧನರಾಜ್‌ ವಿರುದ್ಧ ಕೊಲೆಯತ್ನ ಆರೋಪದಡಿ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದಡಿ ಪ್ರಕರಣಗಳಿವೆ. ದಿನೇಶ್‌ ಪೂಜಾರಿ ವಿರುದ್ಧ ಕೊಲೆಯತ್ನ ಆರೋಪದಡಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ ಎಂದು ಮಾಹಿತಿ ನೀಡಿದ್ದಾರೆ.

ಸೂರಲ್ಪಾಡಿ ಪ್ರಕರಣ:

ಅದೇ ದಿನ ಸಂಜೆ ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿಯಲ್ಲಿ ಬಜರಂಗದಳದ ಕಾರ್ಯಕರ್ತನೂ ಆಗಿರುವ ಖಾಸಗಿ ಬಸ್‌ಗಳ ಟೈಂ ಕೀಪರ್‌ ಹರೀಶ್‌ ಶೆಟ್ಟಿ ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಹರೀಶ್ ಶೆಟ್ಟಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ಮೂವರನ್ನು ಬಂಧಿಸಿರುವ ಪೊಲೀಸರು, ಒಂದು ಬೈಕ್‌ ವಶಪಡಿಸಿಕೊಂಡಿದ್ದಾರೆ.

‘ಹರೀಶ್‌ ಶೆಟ್ಟಿ ಕೊಲೆಯತ್ನ ಪ್ರಕರಣದಲ್ಲಿ ಈ ಪ್ರಕರಣದಲ್ಲಿ ಬಂಟ್ವಾಳ ತಾಲ್ಲೂಕು ಅಮ್ಮುಂಜೆ ನಿವಾಸಿ ಮೊಹಮ್ಮದ್ ಶರೀಫ್‌ ಅಲಿಯಾಸ್ ಶರೀಫ್‌ (24), ಬಜ್ಪೆ ಸಮೀಪದ ಕಂದಾವರ ನಿವಾಸಿಗಳಾದ ಶಿಫಾಜ್‌ (21) ಮತ್ತು ಮೊಹಮ್ಮದ್ ಆರಿಫ್‌ (28) ಎಂಬುವವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಕಮಿಷನರ್‌ ತಿಳಿಸಿದ್ದಾರೆ.

ಕಮಿಷನರ್‌, ಡಿಸಿಪಿ ಉಮಾ ಪ್ರಶಾಂತ್‌ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಡಿ.ಎಸ್.ರಾಜೇಂದ್ರ ಮಾರ್ಗದರ್ಶನದಲ್ಲಿ ನಡೆದ ಎರಡೂ ಪ್ರಕರಣಗಳ ಆರೋಪಿಗಳ ಪತ್ತೆ ಕಾರ್ಯಾಚರಣೆಗಳಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಮ ಮತ್ತು ಸಿಬ್ಬಂದಿ, ಪಣಂಬೂರು ಠಾಣೆ ಇನ್‌ಸ್ಪೆಕ್ಟರ್‌ ಕೆ.ಎಂ.ರಫೀಕ್‌, ಮೂಲ್ಕಿ ಠಾಣೆ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಮೂಡುಬಿದಿರೆ ಠಾಣೆ ಇನ್‌ಸ್ಪೆಕ್ಟರ್ ರಾಮಚಂದ್ರ ಕೆ.ನಾಯಕ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮೊಹಮ್ಮದ್, ಕಾನ್‌ಸ್ಟೆಬಲ್‌ಗಳಾದ ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್‌, ಇಸಾಕ್ ಅಹಮ್ಮದ್, ರಾಧಾಕೃಷ್ಣ, ಶರಣ್‌ ಕಾಳಿ, ಶೈಲೇಂದ್ರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !