ಚುನಾವಣಾ ಕರ್ತವ್ಯದ ಸಂಭಾವನೆ ಹೆಚ್ಚಿಸಲು ಆಗ್ರಹ-ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ

6

ಚುನಾವಣಾ ಕರ್ತವ್ಯದ ಸಂಭಾವನೆ ಹೆಚ್ಚಿಸಲು ಆಗ್ರಹ-ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ

Published:
Updated:
Deccan Herald

ಮಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ, ಗುರುತಿನ ಚೀಟಿ ವಿತರಣೆ ಸೇರಿದಂತೆ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಮತಗಟ್ಟೆ ಹಂತದ ಅಧಿಕಾರಿಗಳಿಗೆ ನೀಡುತ್ತಿರುವ ಸಂಭಾವನೆಯನ್ನು ಹೆಚ್ಚಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡ ಅಂಗನವಾಡಿ ಕಾರ್ಯಕರ್ತೆಯರು, ಚುನಾವಣಾ ಕರ್ತವ್ಯದ ಗೌರವಧನ ಪಾವತಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಗೌರವಧನಕ್ಕೆ ಸಮನಾಗಿ ತಮಗೂ ನೀಡುವಂತೆ ಆಗ್ರಹಿಸಿದರು.

‘ತಿಂಗಳಿಗೆ ₹ 8,000 ಗೌರವಧನಕ್ಕೆ ಕೆಲಸ ಮಾಡುತ್ತಿರುವ ನಾವು ಚುನಾವಣೆಗೆ ಸಂಬಂಧಿಸಿದ ಎಲ್ಲ ಹಂತದ ಕೆಲಸಗಳಲ್ಲಿ ಸಹಕಾರ ನೀಡುತ್ತೇವೆ. ನಮಗೆ ವರ್ಷಕ್ಕೆ ₹ 6,000 ಗೌರವಧನ ಮಾತ್ರ ನೀಡಲಾಗುತ್ತಿದೆ. ಆದರೆ, ದೊಡ್ಡ ಮೊತ್ತದ ಸಂಬಳ ಪಡೆಯುವ ಸರ್ಕಾರಿ ನೌಕರರಿಗೆ ಚುನಾವಣೆ ಕರ್ತವ್ಯದಲ್ಲಿ ದಿನಕ್ಕೆ ₹ 350ರಿಂದ ₹ 1,500ರವರೆಗೂ ಭತ್ಯೆ ನೀಡಲಾಗುತ್ತಿದೆ. ಈ ತಾರತಮ್ಯ ನಿಲ್ಲಿಸಬೇಕು’ ಎಂದು ಧರಣಿನಿರತರು ಆಗ್ರಹಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಣ ವ್ಯಯಿಸಬೇಕಾಗುತ್ತದೆ. ಅದನ್ನು ಮರುಪಾವತಿ ಮಾಡುತ್ತಿಲ್ಲ. ಚುನಾವಣಾ ಆಯೋಗವು ಭತ್ಯೆ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಶೋಷಣೆ ಮಾಡುತ್ತಿದೆ ಎಂದು ದೂರಿದರು.

ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಲತಾ ಸುಳ್ಯ, ಗೌರವಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್‌., ಪ್ರಧಾನ ಕಾರ್ಯದರ್ಶಿ ಚಂದ್ರಾವತಿ, ಖಜಾಂಚಿ ಆಶಾಲತಾ, ಉಪಾಧ್ಯಕ್ಷರಾದ ವಿಜಯಾ ಈಶ್ವರಗೌಡ, ಶಶಿಕಲಾ ಬೆಳ್ತಂಗಡಿ, ಸಹ ಕಾರ್ಯದರ್ಶಿ ಉಷಾ ಬಂಟ್ವಾಳ, ಗೌರವ ಸಲಹೆಗಾರ್ತಿ ವಿಶಾಲಾಕ್ಷಿ, ರಾಜ್ಯ ಪ್ರತಿನಿಧಿ ಅರುಣಾ ಪುತ್ತೂರು ಧರಣಿಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !