ವಾಸ್ತವ– ನಿರೀಕ್ಷೆಯ ನಡುವೆ ಸಮತೋಲನ ಇರಲಿ

6
ಪೋಷಕರಿಗೆ ಖ್ಯಾತ ಮನೋವೈದ್ಯ ಡಾ.ರವೀಶ್‌ ತುಂಗ ಎ. ಸಲಹೆ

ವಾಸ್ತವ– ನಿರೀಕ್ಷೆಯ ನಡುವೆ ಸಮತೋಲನ ಇರಲಿ

Published:
Updated:
Deccan Herald

ಮಂಗಳೂರು: ‘ಬಹುತೇಕ ಸಂದರ್ಭಗಳಲ್ಲಿ ಶೇಕಡ 60ರಿಂದ 70ರಷ್ಟು ಅಂಕ ಗಳಿಸುವ ಸಾಮರ್ಥ್ಯವಿರುವ ಮಕ್ಕಳಿಂದ ಪೋಷಕರು ಶೇ 90ಕ್ಕಿಂತ ಹೆಚ್ಚು ಅಂಕ ನಿರೀಕ್ಷಿಸುತ್ತಾರೆ. ವಿದ್ಯಾರ್ಥಿಗಳ ಸಾಮರ್ಥ್ಯದ ವಾಸ್ತವ ಮತ್ತು ಪೋಷಕರ ನಿರೀಕ್ಷೆಯ ನಡುವಿನ ಅಸಮತೋಲನವೇ ಅವರನ್ನು ಒತ್ತಡದ ಸ್ಥಿತಿಗೆ ತಳ್ಳುತ್ತದೆ. ಅದು ಕಲಿಕೆಯಲ್ಲಿ ಅವರು ಮತ್ತಷ್ಟು ಹಿಂದುಳಿಯಲು ಕಾರಣವಾಗಿ ಖಿನ್ನತೆ, ಆತ್ಮಹತ್ಯೆಗೂ ಎಡೆ ಮಾಡುತ್ತಿದೆ’

– ಇದು ಮಂಗಳೂರಿನ ಖ್ಯಾತ ವೈದ್ಯ ಹಾಗೂ ಮನೋರೋಗ ತಜ್ಞ ಡಾ.ರವೀಶ್‌ ತುಂಗ ಎ. ಅವರ ಅಭಿಪ್ರಾಯ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರ ಕುರಿತು ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಓದುಗರ ಕರೆಗಳಿಗೆ ಉತ್ತರಿಸುವುದರ ನಡುವೆಯೇ ವೈದ್ಯ ವೃತ್ತಿಯಲ್ಲಿನ ದೀರ್ಘ ಅನುಭವವನ್ನು ಆಧರಿಸಿ ಈ ಸಮಸ್ಯೆಯ ಕುರಿತು ಆಳಕ್ಕಿಳಿದು ವಿಶ್ಲೇಷಿಸುವ ಯತ್ನ ಮಾಡಿದರು. ತಮ್ಮೆದುರು ಬಂದ ಹತ್ತಾರು ವಿಶಿಷ್ಟ ಪ್ರಕರಣಗಳ ಉದಾಹರಣೆ ನೀಡಿದ ಅವರು, ಕರಾವಳಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಲು ವಾಸ್ತವ ಮತ್ತು ನಿರೀಕ್ಷೆಯ ನಡುವೆ ದೊಡ್ಡ ಕಂದರ ಇರುವುದು ಪ್ರಮುಖ ಕಾರಣ ಎಂದರು.

ಒಮ್ಮೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಶಿಕ್ಷಕರು ಮತ್ತು ಪೋಷಕರು ಅಸಮಾಧಾನ ಹೊರಹಾಕಿದರೆ ಅದು ಮಕ್ಕಳ ಒತ್ತಡವನ್ನು ಹೆಚ್ಚಿಸುತ್ತದೆ. ಕ್ರಮೇಣ ಖಿನ್ನತೆ ಉಂಟಾಗಿ, ತಮ್ಮಿಂದ ಏನನ್ನೂ ಸಾಧಿಸಲು ಆಗದು ಎಂಬ ಹತಾಶ ಭಾವನೆ ಬೆಳೆಯುತ್ತದೆ. ಅಂತಿಮವಾಗಿ ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂಬ ಭಾವನೆ ಬಲವಾಗಿ ಬೆಳೆದಾಗ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂದು ವಿಶ್ಲೇಷಿಸಿದರು.

ಹದಿಹರೆಯದಲ್ಲಿ ಸವಾಲು: ಸಾಮಾನ್ಯವಾಗಿ ಮಕ್ಕಳು ಹದಿಹರೆಯಕ್ಕೆ ಬಂದಾಗಲೇ ಅವರ ಮೇಲೆ ಶೈಕ್ಷಣಿಕ ಒತ್ತಡಗಳು ಹೆಚ್ಚುತ್ತವೆ. ಬಹುತೇಕರು ಆ ಸಮಯದಲ್ಲಿ ಮಕ್ಕಳನ್ನು ಪ್ರತಿಷ್ಠಿತ ಶಾಲಾ, ಕಾಲೇಜುಗಳಿಗೆ ಸೇರಿಸುತ್ತಾರೆ. ಹೆಚ್ಚಿನವರನ್ನು ವಸತಿಸಹಿತ ಶಾಲೆಗಳಲ್ಲಿ ಇರಿಸಲಾಗುತ್ತದೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಕೆಲವು ಮಕ್ಕಳಿಗೆ ಸಾಧ್ಯವಾಗುವುದೇ ಇಲ್ಲ. ಆ ಸ್ಥಿತಿಯಲ್ಲಿ ಮಕ್ಕಳ ವರ್ತನೆ ಮೇಲೆ ನಿಗಾ ಇಡಬೇಕು. ಅವರನ್ನು ಹೆಚ್ಚು ಜನರ ಜೊತೆ ಬೆರೆಯುವಂತೆ ಮಾಡಿ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು. ಇಲ್ಲವಾದರೆ ಅವಘಡಗಳು ಸಂಭವಿಸುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಸಲಹೆ ನೀಡಿದರು.

18 ವರ್ಷ ಆಗುವವರೆಗೂ ಮಕ್ಕಳು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಬಲಗೊಂಡಿರುವುದಿಲ್ಲ. ಭಾವನೆಗಳು ಮತ್ತು ಭ್ರಮೆಗಳೇ ಸತ್ಯ ಎಂದು ಭಾವಿಸುತ್ತಾರೆ. ಆಗ, ಶೈಕ್ಷಣಿಕ ಒತ್ತಡವನ್ನು ತಡೆದುಕೊಳ್ಳುವ ಹಂಬಲದಿಂದ ದುಶ್ಚಟಗಳಿಗೆ ಬಲಿಯಾಗುವುದು ಹೆಚ್ಚುತ್ತಿದೆ. ಅಂತಹ ಮಕ್ಕಳನ್ನು ತ್ವರಿತವಾಗಿ ಮಾನಸಿಕ ತಜ್ಞರ ಬಳಿ ಕರೆತಂದರೆ ಸಮಸ್ಯೆಯ ಆಳ ಅರಿತು, ಚಿಕಿತ್ಸೆ ಕೊಡಬಹುದು ಎಂದು ಹೇಳಿದರು.

ಹಲವು ರಾಷ್ಟ್ರಗಳಲ್ಲಿ ಶಾಲಾ ಶಿಕ್ಷಣದ ಹಂತದಿಂದಲೇ ಸಮಾಲೋಚಕರನ್ನು ನೇಮಕ ಮಾಡಲಾಗುತ್ತಿದೆ. ಇಲ್ಲಿಯೂ ಅಂತಹ ಕ್ರಮಗಳ ಅಗತ್ಯವಿದೆ. ವಸತಿ ಶಾಲೆಗಳಲ್ಲಿ ಈ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಎಲ್ಲ ಮಕ್ಕಳ ಬೌದ್ಧಿಕ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ ಎಂಬ ಸಾಮಾನ್ಯ ಸತ್ಯವನ್ನು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !