ಬಾಲ್ಯ ವಿವಾಹ ತಡೆಗೆ ಕೈಜೋಡಿಸಿ: ನ್ಯಾಯಾಧೀಶ ದೇವರಾಜ್ ಸಲಹೆ

7
‘ಅಂತರರಾಷ್ಟ್ರಿಯ ಹೆಣ್ಣು ಮಗು ದಿನಾಚರಣೆ’ ಪ್ರಯುಕ್ತ ಆಯೋಜಿಸಿದ್ದ ‘ಹೆಣ್ಣು ಮಗು ಉಳಿಸಿ’ ಕಾರ್ಯಕ್ರಮ

ಬಾಲ್ಯ ವಿವಾಹ ತಡೆಗೆ ಕೈಜೋಡಿಸಿ: ನ್ಯಾಯಾಧೀಶ ದೇವರಾಜ್ ಸಲಹೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವಾರು ಅನಿಷ್ಠ ಪದ್ಧತಿಗಳ ಪೈಕಿ ಬಾಲ್ಯ ವಿವಾಹವೂ ಒಂದು. ಪ್ರಮುಖವಾಗಿ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗಿ ಪರಿಣಮಿಸುವ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್‌.ದೇವರಾಜ್ ಹೇಳಿದರು.

‘ಅಂತರರಾಷ್ಟ್ರಿಯ ಹೆಣ್ಣು ಮಗು ದಿನಾಚರಣೆ’ ಪ್ರಯುಕ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಹೆಣ್ಣು ಮಗು ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಮತ್ತು ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸಮಾಜದಲ್ಲಿ ಹೆಣ್ಣು, ಗಂಡು ಎಂಬ ಲಿಂಗ ತಾರತಮ್ಯ ಮಾಡದೆ ಪ್ರತಿಯೊಂದು ಮಗುವಿಗೂ ಸಮಾನ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿದು ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡಬಾರದು. ಒಂದೊಮ್ಮೆ ಮಾಡಿದರೆ ಅಂತಹವರ ವಿರುದ್ಧ ಕಾನೂನಿನ ಪ್ರಕಾರ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಕ್ಕಳು ಮತ್ತು ಮಹಿಳೆಯರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ಪಡೆಯಬಹುದು’ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲತಾ ಮಾತನಾಡಿ, ‘ಪೋಷಕರಲ್ಲಿ ಗಂಡು ಮಗುವಿನ ಬಯಕೆ ಹೆಚ್ಚುತ್ತಿರುವುದರಿಂದ ದೇಶದಲ್ಲಿ ಲಿಂಗತಾರತಮ್ಯ ಹೆಚ್ಚಾಗುತ್ತಿದೆ. ಯಾವುದೇ ಕಾರಣಕ್ಕೂ ಹೆಣ್ಣು ಮಗುವನ್ನು ಕೀಳಿರಿಮೆಯಿಂದ ನೋಡುವುದು ಸಲ್ಲದು. ಪ್ರತಿ ಮಗುವಿಗೆ ಸಮಾನ ಅವಕಾಶ ಒದಗಿಸಿದಾಗ ಎಲ್ಲರೂ ಉತ್ತಮ ಸಾಧನೆ ಮಾಡಿ ತೋರುತ್ತಾರೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಹಂಗಾಮಿ ಉಪ ನಿರ್ದೇಶಕ ಪದ್ಮರಾಜ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು. ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಕಾನೂನು ಸಲಹೆಗಾರ್ತಿ ಬಿ.ಎಲ್.ಆಶಾ, ವಕೀಲರಾದ ನರಸಿಂಹಮೂರ್ತಿ, ನವೀನ್ ಕುಮಾರ್, ರಾಜೇಂದ್ರ ಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರಾಮೇಗೌಡ, ನೌತಾಜ್, ಮೇಲ್ವಿಚಾರಕಿ ವೆಂಕಲಕ್ಷ್ಮಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !