ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಮೂವರಿಗೆ ₹ 5 ಲಕ್ಷ ದಂಡ

7

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಮೂವರಿಗೆ ₹ 5 ಲಕ್ಷ ದಂಡ

Published:
Updated:

ಮಂಡ್ಯ: ಮಾನನಷ್ಟ ಮೊಕದ್ದಮೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, 2013ರಲ್ಲಿ ಶ್ರೀರಂಗಪಟ್ಟಣ ಡಿವೈಎಸ್‌ಪಿಯಾಗಿದ್ದ ಗೀತಾ ಪ್ರಸನ್ನ, ಸಿಪಿಐ ಆಗಿದ್ದ ಅರುಣ್‌ ನಾಗೇಗೌಡ ಅವರಿಗೆ ₹ 5 ಲಕ್ಷ ದಂಡ ವಿಧಿಸಿ ಶ್ರೀರಂಗಪಟ್ಟಣ ಸಿವಿಲ್‌ ನ್ಯಾಯಾಲಯ ಆದೇಶ ನೀಡಿದೆ.

₹ 25 ಲಕ್ಷ ಕೊಟ್ಟು ₹ 50 ಲಕ್ಷ ದ್ವಿಗುಣ ಹಣ ನೀಡುವ ಜಾಲದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್‌ ಶಾಮೀಲಾಗಿದ್ದಾರೆ ಎಂದು ಆರೋಪಿಸಿ 2013ರಲ್ಲಿ ಶ್ರೀರಂಗಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ವಜಾಗೊಂಡಿತ್ತು. ನಂತರ ಅರುಣ್‌ ಕುಮಾರ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು  ಪಕ್ಷಗಾರರನ್ನಾಗಿ ಮಾಡಿ ಡಿವೈಎಸ್‌ಪಿ, ಸಿಪಿಐ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ₹ 1 ಕೋಟಿ ಪರಿಹಾರ ಕೋರಿದ್ದರು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರೂ ಆರೋಪಿಗಳು ಜಂಟಿಯಾಗಿ ಅರುಣ್‌ಕುಮಾರ್‌ಗೆ 90 ದಿನಗಳ ಒಳಗೆ ₹ 5 ಲಕ್ಷ ದಂಡ ನೀಡಬೇಕು ಎಂದು ಸೆ.26ರಂದು ಆದೇಶ ನೀಡಿದೆ. ಗೀತಾ ಪ್ರಸನ್ನ ಚಾಮರಾಜನಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ. ಅರುಣ್‌ ನಾಗೇಗೌಡ ಬೆಳಗಾವಿಯಲ್ಲಿ ಡಿವೈಎಸ್‌ಪಿಯಾಗಿದ್ದಾರೆ.

‘ಪ್ರಕರಣದಿಂದ ನನ್ನ ಘನತೆಗೆ ಧಕ್ಕೆ ಉಂಟಾಗಿತ್ತು. ನಾನು ₹ 1 ಕೋಟಿ ಪರಿಹಾರ ಕೇಳಿದ್ದೆ. ಆದರೆ ಕೇವಲ ₹ 5 ಲಕ್ಷಕ್ಕೆ ಮಾತ್ರ ಆದೇಶವಾಗಿದೆ. ಆದೇಶದ ವಿರುದ್ಧ ಅಪೀಲು ಅರ್ಜಿ ಸಲ್ಲಿಸುತ್ತೇನೆ’ ಎಂದು ನಗರಸಭಾ ಸದಸ್ಯ ಅರುಣ್‌ ಕುಮಾರ್‌ ಹೇಳಿದರು.

‘ಪ್ರಕರಣ 2013ರಲ್ಲಿ ನಡೆದರೂ ಆಗಿನ ಮುಖ್ಯ ಕಾರ್ಯದರ್ಶಿ ವೈಯಕ್ತಿಕವಾಗಿ ಬಾಧ್ಯರಾಗುವುದಿಲ್ಲ. ದಂಡ ತುಂಬಿಕೊಡಲು ಸರ್ಕಾರವೇ ಹೊಣೆಯಾಗುತ್ತದೆ. ಡಿವೈಎಸ್‌ಪಿ ಹಾಗೂ ಸಿಪಿಐ ವೈಯಕ್ತಿಕವಾಗಿ ಬಾಧ್ಯರಾಗುತ್ತಾರೆ’ ಎಂದು ವಕೀಲರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !