ಶುಕ್ರವಾರ, ಫೆಬ್ರವರಿ 28, 2020
19 °C

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ : ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದ್ದು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಭಾರತ ಅತ್ಯಧಿಕ ಮತಗಳನ್ನು ಪಡೆದಿದೆ. ಶುಕ್ರವಾರ ಮಂಡಳಿಗೆ ನಡೆದ ಮತದಾನ ಪ್ರಕ್ರಿಯೆ ವೇಳೆ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದವು. ಭಾರತವು 188 ಮತಗಳನ್ನು ಪಡೆಯಿತು. ರೋಹಿಂಗ್ಯಾ ಮುಸ್ಲಿಮರ ವಲಸೆ ಬಿಕ್ಕಟ್ಟನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಬಾಂಗ್ಲಾದೇಶ 178 ಮತ ಗಳಿಸಿತು.

ಏಷ್ಯಾ–ಪೆಸಿಫಿಕ್‌ ಪ್ರದೇಶಕ್ಕೆ ತೆರವಾಗಿದ್ದ ಐದು ಸ್ಥಾನಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರತ, ಬಾಂಗ್ಲಾ ಹೊರತುಪಡಿಸಿ ಏಷ್ಯಾ–ಪೆಸಿಫಿಕ್‌ ಪ್ರದೇಶದಿಂದ ಚುನಾಯಿತವಾದ ಉಳಿದ ಮೂರು ದೇಶಗಳೆಂದರೆ ಬಹರೇನ್, ಫಿಜಿ ಮತ್ತು ಫಿಲಿಪೈನ್ಸ್.

ಮಂಡಳಿಗೆ ಭಾರತವು ಜನವರಿಯಲ್ಲಿ ಸೇರ್ಪಡೆಯಾಗಲಿದೆ. ಏಷ್ಯಾ–ಪೆಸಿಫಿಕ್‌ ಭಾಗದ ಚೀನಾ, ನೇಪಾಳ ಹಾಗೂ ಪಾಕಿಸ್ತಾನ ಜತೆ ಮುಂದಿನ ಮೂರು ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದೆ.

ಮಂಡಳಿಗೆ ನಾಮನಿರ್ದೇಶನಗೊಂಡ ಬಳಿಕ ಭಾರತವು, ವರ್ಣಭೇದ – ಜನಾಂಗೀಯ ತಾರತಮ್ಯ ಮತ್ತು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಪ್ರತಿಪಾದಿಸಿದೆ.

2006ರಲ್ಲಿ ಭಾರತವು ಮೊದಲ ಬಾರಿ ಚುನಾಯಿತವಾಗಿತ್ತು. ಬಳಿಕ 2007, 2011 ಮತ್ತು 2014ರಲ್ಲಿ ಆಯ್ಕೆಯಾಗಿತ್ತು. ಯಾವುದೇ ದೇಶವು ಮಂಡಳಿಗೆ ಸತತ ಎರಡು ಬಾರಿ ಮಾತ್ರವೇ ಆಯ್ಕೆಯಾಗಲು  ಅವಕಾಶವಿದೆ. 2017ರಲ್ಲಿ ಅವಧಿ ಮುಗಿದ ಬಳಿಕ ಭಾರತ, ಒಂದು ವರ್ಷ ಮಂಡಳಿಯ ಅಧಿಕಾರದಿಂದ ದೂರವಿತ್ತು.‌

ಮಂಡಳಿಯಲ್ಲಿ ಒಟ್ಟು 47 ಸದಸ್ಯ ರಾಷ್ಟ್ರಗಳಿದ್ದು, ಸಮಾನ ಪ್ರಾದೇಶಿಕ ವಿತರಣಾ ನೀತಿ ಆಧರಿಸಿ ಏಷ್ಯಾ-ಪೆಸಿಫಿಕ್ ಭಾಗಕ್ಕೆ ಒಟ್ಟು 13 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಆಫ್ರಿಕಾದ ಪ್ರದೇಶಕ್ಕೆ 13, ಪೂರ್ವ ಯೂರೋಪ್ ಪ್ರದೇಶವು 6, ಪಶ್ಚಿಮ ಯೂರೋಪ್ 7, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ ಪ್ರದೇಶಕ್ಕೆ ತಲಾ 8 ಸ್ಥಾನಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು