ಗುರುವಾರ , ಸೆಪ್ಟೆಂಬರ್ 23, 2021
28 °C
ನಗರದಲ್ಲಿ ಸಂಚರಿಸಿದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ

ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್‌: ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣಕ್ಕೆ 125 ವರ್ಷವಾದ ಪ್ರಯುಕ್ತ ಯುವ ಬ್ರಿಗೇಡ್‌ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಭಾನುವಾರ ನಗರದಲ್ಲಿ ಸಂಚರಿಸಿತು.

ಗುರುನಾನಕ ಗೇಟ್‌ ಸಮೀಪ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಬಸವ ಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಚಾಲನೆ ನೀಡಿದರು. ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ, ಗಾಂಧಿ ಗಂಜ್‌ನ ದಿ ಗ್ರೇನ್‌ ಆ್ಯಂಡ್‌ ಸೀಡ್ಸ್‌ ಮರ್ಚಂಟ್ಸ್‌ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ, ಗುರುದ್ವಾರ ಪ್ರಬಂಧಕ ಕಮಿಟಿ ವ್ಯವಸ್ಥಾಪಕ ದರ್ಬಾರಾ ಸಿಂಗ್, ಶಿವಶರಣಪ್ಪ ವಾಲಿ, ರಾಮಕೃಷ್ಣ ಸಾಳೆ, ಕಾಮಶೆಟ್ಟಿ ಚಿಕ್ಕಬಸೆ ಇದ್ದರು.

ಗುರುದ್ವಾರ ಗೇಟ್‌ನಿಂದ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಸಾಯಿ ಸ್ಕೂಲ್‌ ವರೆಗೂ ಬಂದಿತು. ವಿವೇಕಾನಂದ ಹಾಗೂ ನಿವೇದಿತಾ ವೇಷಧಾರಿಗಳು ಯಾತ್ರೆಯಲ್ಲಿ ಗಮನ ಸೆಳೆದರು.

ವೇದಿಕೆ ಕಾರ್ಯಕ್ರಮ: ‘ಯುವಕರು ಕೆಲಸ ಮಾಡಲು ಮುಂದೆ ಬಂದರೆ ಮಾತ್ರ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ಕಿತ್ತು ಹಾಕಲು ಸಾಧ್ಯವಿದೆ.

ಇಂದಿನ ಯುವ ಪಡೆ ಕಾಯಕದ ಮೂಲಕ ಹೊಸ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸುವ ಅಗತ್ಯವಿದೆ’ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸಾಯಿ ಸ್ಕೂಲ್‌ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೀದರ್‌, ಕಲಬುರ್ಗಿ ಜಿಲ್ಲೆಗಳು ಹಿಂದೆ ಉಳಿದಿಲ್ಲ. ಇಲ್ಲಿರುವ ಸುಡು ಬಿಸಿಲಲ್ಲಿ ದಕ್ಷಿಣ ಕರ್ನಾಟಕದವರು ಅರ್ಧಗಂಟೆ ಕುಳಿತಿದ್ದರೆ ತಲೆಸುತ್ತಿ ಬೀಳುತ್ತಿದ್ದರು. ಆದರೆ ಇಲ್ಲಿಯವರು ಬಿಸಿಲಲ್ಲಿ ಗಟ್ಟಿಯಾಗಿ ಕುಳಿತು ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ’ ಎಂದು ಕೊಂಡಾಡಿದರು.

‘ವಿವೇಕನಾಂದರು ಸ್ವಾತಂತ್ರ್ಯ ಪೂರ್ವದಲ್ಲಿ ಅಮೆರಿಕದಲ್ಲಿ ರಾಷ್ಟ್ರದ ಘನತೆಯನ್ನು ಎತ್ತಿತೋರಿಸಿದರು. ಅವರು ಬದುಕಿದ್ದು ಕೇವಲ 39 ವರ್ಷ ಆದರೂ ಅವರ ಸೇವೆ ಅನನ್ಯವಾಗಿದೆ’ ಎಂದು ತಿಳಿಸಿದರು.

‘ಇಂದು ಭಾರತವು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಗುರುತಿಸಿಕೊಂಡಿದೆ. ಅಂತೆಯೇ ಪಾಕಿಸ್ತಾನ ಬಾಲ ಮುದುಡಿಕೊಂಡು ಬಿದ್ದಿದೆ. ಚೀನಾ ಸಹ ಭಾರತವನ್ನು ಕೆಣಕುವ ಧೈರ್ಯ ಮಾಡುತ್ತಿಲ್ಲ. ನಮ್ಮ ದೇಶದ ತತ್ವಗಳು ವಿಶ್ವದ ಇತರೆ ರಾಷ್ಟ್ರಗಳು ತಲೆ ಬಾಗುವಂತೆ ಮಾಡಿವೆ’ ಎಂದು ಹೇಳಿದರು.

‘ಇಂದಿನ ಯುವಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕೇಳಿದರೆ ಮಹಾತ್ಮಾ ಗಾಂಧಿ ಹಾಗೂ ನೆಹರೂ ಬಿಟ್ಟರೆ ಬೇರೆ ಸ್ವಾತಂತ್ರ್ಯ ಯೋಧರ ಹೆಸರು ಹೇಳುವುದಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರ ಜನ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂಥವರ ಬಗ್ಗೆಯೂ ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯವಿದೆ’ ಎಂದರು.

ಬ್ರಿಗೇಡ್‌ ರಾಜ್ಯ ಸಹ ಸಂಚಾಲಕ ಮನೋಹರ ಕೌಶಿಕ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಗಸ್ಟ್‌ 28 ರಂದು ಆನೆಕಲ್‌ನಿಂದ ಶುರುವಾಗಿರುವ ಯಾತ್ರೆ ಆರಂಭವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಅಕ್ಟೋಬರ್‌ 28 ರಂದು ಇಳಕಲ್‌ನಲ್ಲಿ ಮುಕ್ತಾಯಗೊಳ್ಳಲಿದೆ’ ಎಂದು ತಿಳಿಸಿದರು.

‘ಯುವಕರಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವುದು. ಸ್ವಾಮಿ ವಿವೇನಕಂದ ಹಾಗೂ ನಿವೇದಿತಾ ಅವರ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವುದು ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೆ.ಆರ್‌.ಇ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಹಾಗೂ ಮಾತೆ ಮಾಣಿಕೇಶ್ವರಿ ಪ.ಪೂ. ಕಾಲೇಜಿನ ಅಧ್ಯಕ್ಷ ರಮೇಶ ಕುಲಕರ್ಣಿ ಪಾಲ್ಗೊಂಡಿದ್ದರು.

ಶ್ರೀಕಾಂತ ಕೊಳ್ಳೂರ, ಶಾಂತಕುಮಾರ ಸಂಗೋಳಗಿ, ವೀರಯ್ಯಸ್ವಾಮಿ ಹಾಗೂ ಶ್ರೀನಿವಾಸ ಇದ್ದರು. ಜನ ಸೇವಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು