ಶುಕ್ರವಾರ, ಏಪ್ರಿಲ್ 3, 2020
19 °C

ಅಮ್ಮನ ನೆನಪಿಸುವ ‘ಕೈರುಚಿ’

ಸುಕೃತ ಎಸ್. Updated:

ಅಕ್ಷರ ಗಾತ್ರ : | |

Deccan Herald

ಮ ಲೆನಾಡಿನವರು ತಮ್ಮದೇ ಆದ ಕೆಲವು ಸ್ವಾದಿಷ್ಟಪೂರ್ಣವಾದ ವಿಶಿಷ್ಟ ಖಾದ್ಯಗಳೊಂದಿಗೆ ಜೀವನ ನಡೆಸುವವರು. ಕಾಲಕಾಲಕ್ಕೆ ಸಿಗುವ ಯಾವ ತರಕಾರಿ, ಸೊಪ್ಪನ್ನೂ ಬಿಡದೆ ಬಗೆ ಬಗೆ ಖಾದ್ಯ ಮಾಡಿಕೊಂಡು ಉಣ್ಣುತ್ತಾರೆ. ಹಲಸಿನ ಕಾಲದಲ್ಲಿ ಹತ್ತಾರು ಬಗೆ ಖಾದ್ಯ. ಮಾವಿನ ಕಾಲ ಅಂದರೂ ಅಷ್ಟೆ. ಮಳೆಗಾಲಕ್ಕೆ ಒಂದು ರೀತಿ, ಬೇಸಿಗೆಗೆ ಒಂದು ಬಗೆ. ಹೀಗೆ ಅಲ್ಲಿನ ಆಹಾರ ಪದ್ಧತಿ.  

ಹೀಗೆ ತಿಂದುಂಡು ಈ ಮಹಾನಗರಕ್ಕೆ ಬಂದ ಮೇಲೆ ಅಮ್ಮನ ಕೈರುಚಿಯಲ್ಲಿ ಸವಿದ ಬಗೆ ಬಗೆ ಖಾದ್ಯ ನೆನಪಾಗದೇ ಇರದು. ಹೀಗೆ ನೆನಪಾದಾಗ ಬೇಸರಬೇಡ. ಜೆ.ಪಿ.ನಗರದ 7ನೇ ಹಂತದಲ್ಲಿರುವ ‘ಕಾಕಾಲ್ ಕೈರುಚಿ’ ಗೆ ಭೇಟಿ ನೀಡಿ. ಅಮ್ಮನ ಕೈರುಚಿ ನೆನಪಿಸುವಂತಹ, ಮಲೆನಾಡಿನ ಸಾಂಪ್ರದಾಯಿಕ ಅಡುಗೆ ಸವಿಯನ್ನು ಅಲ್ಲಿ ಸವಿಯಬಹುದು. 

ಹಾಗಂತ ಈ ಹೋಟೆಲ್‌ ಮಲೆನಾಡಿನ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ನಾರ್ತ್ ಇಂಡಿಯನ್, ಸೌತ್ ಇಂಡಿಯನ್‌ನಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಶೈಲಿಯ ಖಾದ್ಯಗಳು, ಕಾಂಟಿನೆಂಟಲ್‌ ಶೈಲಿಯವೂ ಲಭ್ಯ.  

ಹಲಸಿನ ಹಣ್ಣಿನ ಕಾಲದಲ್ಲಿ ‘ಕೈರುಚಿ’ಯ ಕಡುಬು, ಹಲಸಿನ ದೋಸೆ, ಇಡ್ಲಿ, ಮಾವಿನ ಕಾಲದಲ್ಲಿ ಮಾವಿನಕಾಯಿ ನೀರುಗೊಜ್ಜು ಕೂಡ ಇಲ್ಲಿನ ವಿಶೇಷ. ಜತೆಗೆ ನೀರುದೋಸೆ, ಮಸಾಲೆದೋಸೆ ಸೇರಿದಂತೆ ಹಲವಾರು ಬಗೆಯ ದೋಸೆಗಳು, ಅದರಲ್ಲೂ ಉಪ್ಪುಹುಳಿ ದೋಸೆ ಇಲ್ಲಿಯ ವಿಶೇಷ. ಒಡಪೆ (ತಾಳಿಪಟ್ಟು), ಹಾಲುಬಾಯಿ (ಅಕ್ಕಿಹಿಟ್ಟು ಮತ್ತು ಹಾಲಿನಿಂದ ಮಾಡುವ ಸಿಹಿ ತಿಂಡಿ) ಸದಾ ಬೇಡಿಕೆ ಇರುವ ತಿನಿಸುಗಳು. ಹಾಗಂತ ಈ ಎಲ್ಲವೂ ಒಂದೇ ದಿನ ಸಿಗುವುದಿಲ್ಲ. ಒಂದೊಂದು ದಿನ ಒಂದೊಂದು ವಿಶೇಷ. ಇದರ ಜತೆಗೆ, ಎಲ್ಲಾ ಬಗೆಯ ಚಾಟ್ಸ್, ಸಿಹಿತಿಂಡಿಗಳೂ ಸಿಗುತ್ತವೆ.  

2010ರಲ್ಲಿ ಕಾಕಾಲ್ ಕೈರುಚಿ ಪ್ರಾರಂಭವಾಯಿತು. ಪತ್ನಿ ಛಾಯಾ ಕಾಕಾಲ್‌ ಅವರ ಸಹಕಾರದೊಂದಿಗೆ ಸತೀಶ್ ಕಾಕಾಲ್ ಹೋಟೆಲ್ ಉದ್ಯಮಕ್ಕೆ ಪ್ರವೇಶ ಪಡೆದರು. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಸತೀಶ್ ಅವರ ತಂದೆಯೂ ಅಡುಗೆ ಉದ್ಯಮದಲ್ಲಿ ಆ ಪ್ರಾಂತ್ಯಕ್ಕೆ ದೊಡ್ಡ ಹೆಸರು. ಹೀಗೆ ಕುಟುಂಬದ ಉದ್ಯಮವನ್ನು ಸತೀಶ್ ದೊಡ್ಡ ಮಟ್ಟದಲ್ಲಿ ವ್ಯವಸ್ಥಿತವಾಗಿ ಮುಂದುವರೆಸುತ್ತಿದ್ದಾರೆ.

‘ನಮ್ಮಲ್ಲಿ ಸಿಗುವ ರೈಸ್ ಬಾತ್‌ಗಳ ಪುಡಿ, ಮಸಾಲೆ, ಸಾಂಬಾರು ಪುಡಿ ಎಲ್ಲವನ್ನೂ ನಾವೇ ಸ್ವಂತವಾಗಿ ತಯಾರು ಮಾಡುತ್ತೇವೆ. ಮನೆಯಲ್ಲಿ ಮಾಡಿ ನೋಡಿ, ಪ್ರಯೋಗ ಮಾಡಿದ ನಂತರವೇ ಹೋಟೆಲ್‌ನಲ್ಲಿ ಉಪಯೋಗ ಮಾಡುತ್ತೇವೆ. ಈ ಕಾರಣದಿಂದಲೇ ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ ನಮ್ಮಲ್ಲಿ ಮನೆಯ ರುಚಿ ಸಿಗುತ್ತದೆ’ ಎನ್ನುತ್ತಾರೆ ಛಾಯಾ ಕಾಕಾಲ್.  

‘ಕೇವಲ ರುಚಿಕರ ತಿಂಡಿಗಳನ್ನು ನೀಡುವುದಷ್ಟಕ್ಕೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ, ಗ್ರಾಹಕರ ಆರೋಗ್ಯವೂ ನಮ್ಮ ಜವಾಬ್ದಾರಿಯೇ ಆಗಿರುತ್ತದೆ. ನಮ್ಮಲ್ಲಿ ತಿಂದು ಅವರ ಆರೋಗ್ಯ ಹಾಳಾಗಬಾರದಲ್ಲ. ಆದ್ದರಿಂದ ನಾವು ಅಡುಗೆಯಲ್ಲಿ  ಸೋಡಾ ಬಳಸುವುದೇ ಇಲ್ಲ. ರುಚಿ ಹೆಚ್ಚಿಸಲು ಯಾವುದೇ ಕೃತಕ ಪುಡಿಗಳನ್ನೂ ನಾವು ಬಳಸುವುದಿಲ್ಲ’ ಎನ್ನುತ್ತಾರೆ ಅವರು.

ಸ್ವಚ್ಛತೆಗೆ ಆದ್ಯತೆ: ‘ತರಕಾರಿ, ಸೊಪ್ಪುಗಳ ಆಯ್ಕೆಯಿಂದ ಹಿಡಿದು ಪ್ರತಿ ಹಂತದಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ತರಕಾರಿಗಳ ತಾಜ್ಯ ಅಡುಗೆ ಮನೆಯನ್ನು ಗಲೀಜು ಮಾಡಬಾರದು ಎನ್ನುವ ದೃಷ್ಟಿಯಿಂದ ತರಕಾರಿಗಳನ್ನು ಹೆಚ್ಚಲು ಬೇರೆ
ವಿಭಾಗ ಮಾಡಿಕೊಂಡಿದ್ದೇವೆ. ಹಲವು ಐಟಿ ಕಂಪನಿಗಳಿಗೆ, ಪಾರ್ಟಿ, ಮದುವೆ ಸಮಾರಂಭಗಳಿಗೂ ಕೇಟರಿಂಗ್‌ ಮಾಡುತ್ತೇವೆ. ಫೋನ್ ಮಾಡಿದರೆ ನಮ್ಮ ಊಟ ನಿಮ್ಮ ಮನೆ ಬಾಗಿಲಿಗೂ ಬರುತ್ತದೆ’ ಎನ್ನುತ್ತಾರೆ ಸತೀಶ್.

‘ನಾವು ಯಾವಾಗಲೂ ಇಲ್ಲಿಗೆ ಬರುತ್ತೇವೆ. ಬಹಳ ರುಚಿಯಾಗಿ ಇರುತ್ತವೆ ಇಲ್ಲಿನ ಅಡುಗೆ. ಜತೆಗೆ, ರೇಟು ಕಮ್ಮಿ. ಮಸಾಲೆದೋಸೆ ಅಂತೂ ಗರಿ ಗರಿ ಆಗಿರುತ್ತದೆ. ಸಾಮಾನ್ಯವಾಗಿ ಹೋಟೆಲ್‌ನಲ್ಲಿ ಊಟ ಮಾಡಿದರೆ ಹೊಟ್ಟೆ ಉಬ್ಬರದ ಅನುಭವವಾಗುತ್ತದೆ. ಆದರೆ, ಇಲ್ಲಿ ಹಾಗಾಗುವುದಿಲ್ಲ. ಹಾಗಾಗಿಯೇ ನಾವು ಯಾವಾಗಲೂ ಇಲ್ಲಿಗೆ ಬರುತ್ತೇವೆ’ ಎನ್ನುತ್ತಾರೆ ಜೆ.ಪಿ ನಗರದ ಗೀತಾ ರಾಮು.

ಜೆ.ಪಿ.ನಗರದ 2ನೇ ಹಂತದಲ್ಲಿ ‘ಕಾಕಾಲ್ ಕೈರುಚಿ ದ್ವಿರಾ’ ಮತ್ತು ಕೋಣನಕುಂಟೆ ಮುಖ್ಯರಸ್ತೆಯಲ್ಲಿ ‘ಕಾಕಾಲ್ ಕೈರುಚಿ – ತ್ರಿಕಾ’
ಶಾಖೆ ಇದೆ. ಏಳನೇ ಹಂತದ ಶಾಖೆಯ ‘ದಾನಾಪಾನಿ’ ವಿಭಾಗದಲ್ಲಿ ಉತ್ತರ ಭಾರತದ ಆಹಾರ ಲಭ್ಯ. 

***

ಸ್ವಚ್ಛತೆ ಮತ್ತು ಆರೋಗ್ಯಕ್ಕೆ ನಾವು ಹೆಚ್ಚು ಒತ್ತು ಕೊಡುತ್ತೇವೆ. ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಂಡಿದ್ದೇವೆ. ಈ ಕಾರಣಕ್ಕಾಗಿಯೇ ಜನರು ನಮ್ಮ ಹೋಟೆಲ್‌ನ ತಿನಿಸುಗಳನ್ನು ಇಷ್ಟಪಡುತ್ತಾರೆ. ಒಮ್ಮೆ ಇಲ್ಲಿನ ರುಚಿ ಸವಿದವರು ಮತ್ತೆ ಮತ್ತೆ ಬರುತ್ತಾರೆ.

– ಸತೀಶ್ ಕಾಕಾಲ್ ಮತ್ತು ಛಾಯಾ

***

ರೆಸ್ಟೊರೆಂಟ್: ಕಾಕಾಲ್ ಕೈರುಚಿ ‘ದ್ವಿರಾ’

ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 11

ವಿಶೇಷ : ಸೌತ್ ಇಂಡಿಯನ್‌ ಥಾಲಿ, ಬರ್ಗರ್‌ ದೋಸೆ, ಕಾಂಬೊ

ಒಬ್ಬರಿಗೆ: ಕನಿಷ್ಠ ₹ 90

ಸ್ಥಳ: ಆರ್.ಬಿ.ಐ. ಬಡಾವಣೆ, ಬಿಗ್‌ ಬಜಾರ್‌ ಎದುರು, ಜೆ.ಪಿ.ನಗರ 7ನೇ ಹಂತ

ಟೇಬಲ್ ಕಾಯ್ದಿರಿಸಲು: 94482 81199

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು