ಭಾನುವಾರ, ಜನವರಿ 24, 2021
21 °C

ಮೀಟೂ ಮೀಟುತ್ತಿರುವ ನ್ಯಾಯದ ಪ್ರಶ್ನೆಗಳು

ಡಾ. ಮಲ್ಲಿಕಾರ್ಜುನ ಗುಮ್ಮಗೋಳ Updated:

ಅಕ್ಷರ ಗಾತ್ರ : | |

ಯಾವತ್ತೋ ನಡೆದ ಒಂದು ಘಟನೆ ಅಥವಾ ವಿಚಾರವು ಒಮ್ಮೆಲೇ ಮುನ್ನೆಲೆಗೆ ಬಂದು ವ್ಯಾಪಕ ಚರ್ಚೆಗೆ ಒಳಗಾಗುವುದು ಮತ್ತು ಆ ವಿಚಾರ ಅಥವಾ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಒಂದು ತೀರ್ಪು ವ್ಯಕ್ತವಾಗುವ ಪ್ರಸಂಗಗಳು ಸಮಾಜದಲ್ಲಿ ಆಗಾಗ ಉಂಟಾಗುತ್ತವೆ.

ಹೀಗೆ ಸಾರ್ವಜನಿಕ ಚರ್ಚೆಯ ಮೂಲಕ ವ್ಯಕ್ತವಾಗುವ ತೀರ್ಪು ಅಂತಿಮ ಸತ್ಯವಲ್ಲ. ನ್ಯಾಯಿಕ ಪ್ರಕ್ರಿಯೆಯ ಮೂಲಕ ವಿಚಾರಣೆ ನಡೆದು, ಒಂದು ತೀರ್ಮಾನವಾದರೆ ಮಾತ್ರ ಅದು ಮಾನ್ಯವಾಗುತ್ತದೆ. ಸಾರ್ವಜನಿಕವಾಗಿ ಬಿತ್ತರಗೊಳ್ಳುವ ಅಭಿಪ್ರಾಯಗಳಿಂದ ಕಾನೂನಾತ್ಮಕವಾದ ಪರಿಣಾಮಗಳಾಗುವುದಿಲ್ಲ. ತಪ್ಪಿತಸ್ತರಿಗೆ ಶಿಕ್ಷೆಯಾಗಲೀ ನೊಂದವರಿಗೆ ಪರಿಹಾರವಾಗಲೀ ಸಿಗುವುದಿಲ್ಲ. ಆದರೆ ಆರೋಪಕ್ಕೆ ಒಳಗಾದ ವ್ಯಕ್ತಿಯ ಮಾನಹಾನಿಯಾಗುತ್ತದೆ.

ಆತನ ಹುದ್ದೆಗೆ ಸಂಚಕಾರ ಬರಬಹುದು. ಆತನ ಅಥವಾ ಆಕೆಯ ಕುಟುಂಬದಲ್ಲಿ ಕಲಹವಾಗಬಹುದು, ಆರ್ಥಿಕ ನಷ್ಟ ಸಂಭವಿಸಬಹುದು. ಆರೋಪ ಮಾಡಿದ ವ್ಯಕ್ತಿಯೂ ಕಷ್ಟ ನಷ್ಟಗಳನ್ನು ಎದುರಿಸಬೇಕಾಗಿ ಬರಬಹುದು. ಈಚೆಗೆ ಸದ್ದು ಮಾಡುತ್ತಿರುವ ‘ಮೀ ಟೂ’ ಅಭಿಯಾನದಲ್ಲೂ ಅದೇ ಆಗುತ್ತಿದೆ.

ಮೀ ಟೂ ಅಭಿಯಾನದ ಮೂಲಕ ನೋವನ್ನು ಹೇಳಿಕೊಳ್ಳುತ್ತಿರುವವರ ಮೇಲೆ ದೌರ್ಜನ್ಯವೇ ನಡೆದಿಲ್ಲ ಎಂದು ಹೇಳಲಾಗದು. ಆದರೆ ಆ ಸಂದರ್ಭದಲ್ಲಿ ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಅವರಿಗೆ ಬಂದಿರಲಾರದು. ಈಗ ಅದಕ್ಕೆ ಸಮಯ ಒದಗಿದೆ, ವೇದಿಕೆ ಲಭಿಸಿದೆ ಜನರ ಬೆಂಬಲವೂ ಇಂತಹ ಹೆಣ್ಣುಮಕ್ಕಳಿಗೆ ಈಗ ಲಭ್ಯವಾಗಿದೆ. ಅಂದು ಅನುಭವಿಸಿದ್ದ ದುಃಖದ ಕಟ್ಟೆ ಈಗ ಆಕ್ರೋಶವಾಗಿ ಚಿಮ್ಮುತ್ತಿದೆ.

ಅದೆಲ್ಲವೂ ಸರಿ, ಆದರೆ ಈಗ ನಡೆಯುತ್ತಿರುವ ಅಭಿಯಾನದಿಂದ ಏನಾದರೂ ಸಾಧನೆ ಆಗಬಹುದೇ? ತಪ್ಪಿತಸ್ತರಿಗೆ ಶಿಕ್ಷೆಯಾಗುತ್ತದೆಯೇ? ಎಂಬುದು ಮುಖ್ಯವಾದ ಪ್ರಶ್ನೆ. ಯಾವುದೇ ಪುರಾವೆಗಳಿಲ್ಲದೆ ನ್ಯಾಯಾಲಯದಲ್ಲಿ ಆರೋಪವನ್ನು ಸಾಬೀತುಪಡಿಸುವುದು ಕಷ್ಟಸಾಧ್ಯ.

ಹಾಗಾಗಿ, ಮೀ ಟೂ ಅಭಿಯಾನದಿಂದಾಗಿ ಇಂದು ಆರೋಪಿ ಸ್ಥಾನದಲ್ಲಿ ನಿಂತಿರುವವರಿಗೆ ಶಿಕ್ಷೆಯಾಗುವುದು ಅನುಮಾನ. ಈ ಅಭಿಯಾನದಿಂದ ಆದ ಮಹತ್ವದ ಸಾಧನೆ ಎಂದರೆ, ಅಭಿಯಾನವು ಸಾಮಾಜಿಕವಾಗಿ ಒಂದು ಜಾಗೃತಿಯನ್ನು ಉಂಟುಮಾಡಿದಂತಾಗಿದೆ. ‘ಇಂಥ ತಪ್ಪನ್ನು ಮಾಡಿದರೆ ಮರ್ಯಾದೆಗೇಡಾಗಬಹುದು’ ಎಂಬ ಭಯವನ್ನು ಇದು ಮೂಡಿಸಿದೆ. ಜೊತೆಗೆ ಲೈಂಗಿಕ ಶೋಷಣೆ ಅನುಭವಿಸುತ್ತಿರುವವರಲ್ಲಿ ಅರಿವು ಮೂಡಿ, ತಕ್ಷಣ ದೂರು ಕೊಡುವ ಧೈರ್ಯವನ್ನು ಈ ಅಭಿಯಾನವು ತುಂಬಬಹುದು.

ಚಿತ್ರರಂಗದ ‘ಕ್ಯಾಸ್ಟಿಂಗ್ ಕೌಚ್’ ಬಗ್ಗೆ ತಿಳಿದಿರುವರು, ಅಲ್ಲಿ ನಡೆಯುವ ದೌರ್ಜನ್ಯ ಎಂಥದ್ದು ಮತ್ತು ದೌರ್ಜನ್ಯ ನಡೆದರೂ ಯಾಕೆ ಸುಮ್ಮನಿರುತ್ತಾರೆ ಎಂಬುದನ್ನು ಊಹಿಸಬಲ್ಲರು. ಅನೇಕ ಸಂದರ್ಭಗಳಲ್ಲಿ ಅದು ಕೊಡು– ಕೊಳ್ಳುವ ವ್ಯವಹಾರ. ಇಂಥ ದೌರ್ಜನ್ಯ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ‘ರಾಜಕೀಯದಲ್ಲಿ ಮೇಲೆ ಬರಬೇಕಾದರೆ ಗರ್ಲ್‌ಫ್ರೆಂಡ್ ಆಗಿರಬೇಕು’ ಎಂದು ಹೇಳುವ ಮೂಲಕ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್‌ ಅವರು ರಾಜಕಾರಣದಲ್ಲಿಯೂ ಇಂಥ ‘ಹೊಂದಾಣಿಕೆ’ ಇದೆ ಎಂಬ ಸುಳಿವು ನೀಡಿದ್ದಾರೆ.

ಕಾನೂನು ಏನು ಹೇಳುತ್ತದೆ?

ಲೈಂಗಿಕ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಹಲವಾರು ಕಠಿಣ ಕಾನೂನುಗಳು ಇವೆ. ಭಾರತ ದಂಡಸಂಹಿತೆಯ ಸೆಕ್ಷನ್‌ 376ರ ಪ್ರಕಾರ, ಅತ್ಯಾಚಾರ ಎಸಗಿದವರಿಗೆ 7 ವರ್ಷ ಅಥವಾ ಜೀವಾವಧಿ ಜೈಲು ಶಿಕ್ಷೆ. ಮಹಿಳೆಗೆ ಅವಮಾನವಾಗುವಂತೆ ಅಶ್ಲೀಲ ಹಾಡು, ಶಬ್ದ, ವರ್ತನೆ ಮಾಡಿದರೆ ಸೆಕ್ಷನ್‌ 294ರ ಪ್ರಕಾರ 3 ತಿಂಗಳ ಜೈಲು ಮತ್ತು ದಂಡ ವಿಧಿಸಬಹುದು. ದುರುದ್ದೇಶದಿಂದ ಹೆಣ್ಣುಮಕ್ಕಳನ್ನು ಹಿಂಬಾಲಿಸಿದರೆ ಸೆಕ್ಷನ್‌ 354ರ ಪ್ರಕಾರ 5 ವರ್ಷ ಜೈಲು.

ಒಪ್ಪಿಗೆ ಇಲ್ಲದೆ ಮಹಿಳೆಯ ಖಾಸಗಿ ಚಿತ್ರ ತೆಗೆದರೆ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೆ 1 ರಿಂದ 3 ವರ್ಷ ಜೈಲು. ಬೆದರಿಸಿದರೆ ಸೆಕ್ಷನ್‌ 503ರ ಅಡಿ 2 ವರ್ಷ ಜೈಲು. ಪದೋನ್ನತಿ, ವೇತನ ಬಡ್ತಿ ಮತ್ತಿತರ ಕಾರಣಕ್ಕೆ ಲೈಂಗಿಕ ಶೋಷಣೆ ಮಾಡುವುದು ‘ಕೆಲಸ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013’ರ ಪ್ರಕಾರ ಶಿಕ್ಷಾರ್ಹ ಅಪರಾಧ. ಮಾನಹಾನಿಕರ ವಿಷಯವನ್ನು ಜಾಲತಾಣದಲ್ಲಿ ಪ್ರಚಾರಮಾಡಿದರೆ ಐ.ಟಿ. ಕಾಯ್ದೆಯ ಸೆಕ್ಷನ್‌ 67ರ ಪ್ರಕಾರ 2 ವರ್ಷ ಜೈಲು. ಹೀಗೆ ಲೈಂಗಿಕ ಶೋಷಣೆ ತಡೆಗಟ್ಟಲು ಬಿಗಿಯಾದ ಕಾನೂನು ಮತ್ತು ಶಿಕ್ಷೆಗಳಿವೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಮೊದಲು ಹತ್ತಿರದ ಠಾಣೆಗೆ ದೂರು ನೀಡಬೇಕು. ಅಪರಾಧ ಪ್ರಕ್ರಿಯಾ ಸಂಹಿತೆ 164ರ ಪ್ರಕಾರ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಬೇಕು. ವಿಚಾರಣೆಯ ಹಂತದಲ್ಲಿ ಅತ್ಯಾಚಾರ ಅಥವಾ ದೌರ್ಜನ್ಯ ನಡೆದದ್ದಕ್ಕೆ ಪೂರಕ ಪುರಾವೆಗಳನ್ನು ಒದಗಿಸಬೇಕು. ಅತ್ಯಾಚಾರಕ್ಕೆ ಮಹತ್ವದ ಸಾಕ್ಷ್ಯಗಳೆಂದರೆ– ವೈದ್ಯಕೀಯ ವರದಿ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಒಳ ಉಡುಪುಗಳು, ಸ್ಥಳ ಪಂಚನಾಮೆ, ಗುರುತು ಹಾಗೂ ಮೈಮೇಲೆ ಆಗುವ ತರಚಿದ ಗಾಯಗಳು. ಲೈಂಗಿಕ ಕಿರುಕುಳ ಸಾಬೀತುಪಡಿಸಲು ಮೊಬೈಲ್ ಕರೆ, ವಿಡಿಯೋ ರಿಕಾರ್ಡಿಂಗ್, ಪತ್ರಗಳು, ಪ್ರತ್ಯಕ್ಷ ಸಾಕ್ಷ್ಯಗಳು ಮುಂತಾದವು ಬೇಕಾಗುತ್ತವೆ.

ಕೃತ್ಯ ನಡೆದ ತಕ್ಷಣ ದೂರು ನೀಡಿದರೆ ಅದನ್ನು ಸಾಬೀತುಪಡಿಸಬಹುದು. ಹಲವು ವರ್ಷಗಳ ನಂತರ ಆರೋಪ ಮಾಡಿದರೆ, ತನಿಖೆಗೆ ಅಗತ್ಯ ಪುರಾವೆಗಳು ಸಿಗದೆ ಪರಿಣಾಮ ಶೂನ್ಯವಾಗುತ್ತದೆ. ಆಪಾದಿತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.

ಲೇಖಕ: ಹೈಕೋರ್ಟ್‌ ವಕೀಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು