ಪ್ರತಿಯೊಬ್ಬರೂ ಕನ್ನಡದಲ್ಲೇ ಸಂವಹನ ನಡೆಸಿ

7
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮ

ಪ್ರತಿಯೊಬ್ಬರೂ ಕನ್ನಡದಲ್ಲೇ ಸಂವಹನ ನಡೆಸಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಅನ್ಯಭಾಷಿಕರೊಂದಿಗೆ ನಾವು ಮಾತೃಭಾಷೆ ಅಭಿಮಾನ ಮರೆತು ಪರಕೀಯ ಭಾಷೆಯಲ್ಲಿ ಮಾತನಾಡುವುದುಕನ್ನಡ ತಾಯಿಗೆ ದ್ರೋಹ ಬಗೆದಂತೆ. ಈ ಬಗ್ಗೆ ಇನ್ನಾದರೂ ನಾವು ಎಚ್ಚೆತ್ತುಕೊಂಡು ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೊಂದಿಗೂ ಕನ್ನಡದಲ್ಲಿಯೇ ಸಂವಹನ ನಡೆಸಬೇಕಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಹೇಳಿದರು.

ನಗರದ 14ನೇ ವಾರ್ಡ್ ನಿವಾಸಿ ಶೀಲಾಮೂರ್ತಿ ಅವರ ಮನೆಯಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಇವತ್ತು ಆರು ಕೋಟಿ ಜನಸಂಖ್ಯೆಯಲ್ಲಿ ಕಾಲು ಭಾಗ ಹೊರರಾಜ್ಯದ ಜನರೇ ತುಂಬಿದ್ದಾರೆ. ದುರಂತವೆಂದರೆ ನಾವು ಅವರಿಗೆ ಕನ್ನಡ ಕಲಿಯಲೇ ಬೇಕಾದ ವಾತಾವರಣ ಸೃಷ್ಟಿಸುವ ಬದಲು ಅವರ ಭಾಷೆಯಲ್ಲಿಯೇ ನಾವು ವ್ಯವಹರಿಸುತ್ತಿರುವುದರಿಂದ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆ ಬೆಳೆಯುತ್ತಿದೆ. ಈ ಚಿತ್ರಣ ಬದಲಾಗಬೇಕು’ ಎಂದು ತಿಳಿಸಿದರು.

‘ನಾವು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ನಾಮಫಲಕಗಳಲ್ಲಿ ಮಾತೃಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆಯ ಬಳಕೆ ಕಾಣುವುದಿಲ್ಲ. ಆದರೆ ರಾಜ್ಯದಲ್ಲಿ ಕನ್ನಡವನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ನಮ್ಮದಾದರೂ ಭಾಷೆಗೆ ಸಲ್ಲಬೇಕಾದ ಗೌರವ ಇಂದಿಗೆ ಸಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೆಸಿಡೆನ್ಸಿ ಶಾಲೆಯ ಕನ್ನಡ ಉಪನ್ಯಾಸಕ ಮುರಳೀಧರ್ ಮಾತನಾಡಿ, ‘ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಲಿಖಿತ ಇತಿಹಾಸವಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಗರಿಮೆ ನಮ್ಮದು. ಹಲವು ಶ್ರೇಷ್ಠ ಸಾಹಿತಿಗಳಿಂದ ಇಂದಿಗೂ ಅತ್ಯುತ್ತಮ ಕೃತಿಗಳು ರಚನೆಯಾಗುತ್ತಿವೆ. ಇಂದಿನ ಯುವ ಪೀಳಿಗೆ ಕನ್ನಡವನ್ನು ಆತ್ಮೀಯವಾಗಿ ಕಲಿತಾಗ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಕನ್ನಡಿಗರಾದ ನಾವು ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಅನ್ಯ ಭಾಷೆಗಳಿಗೆ ಆಸ್ಪದ ನೀಡದೇ ನಾವು ನಮ್ಮ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು. ವಲಸಿಗರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಅವರೇ ನಮ್ಮ ಭಾಷೆಯನ್ನು ಕಲಿಯಲು ಮುಂದಾಗುವಂತಹ ಸ್ಥಿತಿ ನಿರ್ಮಾಣ ಮಾಡುವ ಅಗತ್ಯವಿದೆ’ ಎಂದರು.

ಕಾರ್ಯಕ್ರಮದಲ್ಲಿ ಶೀಲಾಮೂರ್ತಿ ಮತ್ತು ಸಾವಿತ್ರಮ್ಮಾ ಕೃಷ್ಣಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿ ಸತ್ಯವತಿ, ಕಸಾಪ ಪದಾಧಿಕಾರಿಗಳಾದ ನಾಗಭೂಷಣರಾವ್, ಅಶ್ವತ್ಥ್, ಶಿಕ್ಷಕ ದಾಸಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !