ಸೂಲಗಿತ್ತಿಯಾದ ನಗರಸಭೆ ಸಿಬ್ಬಂದಿ

7
ಹೆರಿಗೆ ಬೇನೆಯಲ್ಲಿ ಬಳಲುತ್ತಿದ್ದ ಬಿಡಾಡಿ ದನಕ್ಕೆ ನೆರವಾದರು

ಸೂಲಗಿತ್ತಿಯಾದ ನಗರಸಭೆ ಸಿಬ್ಬಂದಿ

Published:
Updated:
Deccan Herald

ಬಾಗಲಕೋಟೆ: ನವನಗರದ ಸೆಕ್ಟರ್‌ ನಂ 5ರಲ್ಲಿ ಸುತ್ತಲೂ ಜಾಲಿ ಗಿಡಗಳ ರಕ್ಷೆ ಹೊಂದಿದ್ದ ಆ ಖಾಲಿ ನಿವೇಶನವನ್ನು ಶುಕ್ರವಾರ ತನ್ನ ಹೆರಿಗೆಗೆ ಆ ಕೆಂಬಣ್ಣದ ಬಿಡಾಡಿ ಹಸು ಆಯ್ಕೆ ಮಾಡಿಕೊಂಡಿತ್ತು. 

ಜಾಲಿ ಗಿಡಗಳ ಪೊದೆಯಿಂದ ಆಗಾಗ ಹೊರಗೆ ಬರುತ್ತಿದ್ದ ಮುಂಗಸಿ (ಮುಂಗಲಿ) ಹೆರಿಗೆಗೆ ಮುನ್ನ ಕರುವಿನ ಮೂತಿಯೊಂದಿಗೆ ಹೊರಗೆ ಇಣುಕಿದ್ದ ಮಾಸದ ಮೇಲೆ ಕಣ್ಣಿಟ್ಟು ಹೊಂಚಿ ಕೂತಿತ್ತು. ಜೊತೆಗೆ ನಾಯಿಗಳ ಹಿಂಡಿನ ಕುತೂಹಲದ ದೃಷ್ಟಿಯೂ ಅಲ್ಲಿಯೇ ನೆಟ್ಟಿತ್ತು.

ಮಾಗಿಯ ಶೀತದಿಂದ ನಡುಗುತ್ತಲೇ ಹೆರಿಗೆ ಬೇನೆಯಿಂದ ಬಳಲುತ್ತಿದ್ದ ಹಸುವಿನ ಸ್ಥಿತಿ ಕಂಡು ಮರುಗಿದ ಸ್ಥಳೀಯರು, ನಗರಸಭೆ ಆಯುಕ್ತ ಗಣಪತಿ ಪಾಟೀಲ ಹಾಗೂ ಪರಿಸರ ಅಧಿಕಾರಿ ಹನುಮಂತ ಕಲಾದಗಿಗೆ ಕರೆ ಮಾಡಿದರು. ಆರು ತಿಂಗಳ ಹಿಂದೆ ಇದೇ ಸೆಕ್ಟರ್‌ನಲ್ಲಿ ಆಗ ತಾನೇ ಕಣ್ಣು ಬಿಟ್ಟಿದ್ದ ಕರುವಿನ ಜೀವವನ್ನು ನಾಯಿಗಳ ಹಿಂಡು ಉಡುಘಿಸಿದ್ದವು. ಆ ಕಹಿ ಮಾಸುವ ಮುನ್ನವೇ ಮತ್ತೊಂದು ಹಸು ಹೆರಿಗೆಗೆ ಅದೇ ಸೆಕ್ಟರನ್ನು ಆಶ್ರಯಿಸಿತ್ತು.

ರಕ್ಷಣೆಗೆ ಟೊಂಕ ಕಟ್ಟಿದರು:

ಕೆಲ ಹೊತ್ತಿನಲ್ಲಿಯೇ ಸ್ಥಳಕ್ಕೆ ಬಂದ ನಗರಸಭೆ ಸ್ವಚ್ಛತಾ ಸಿಬ್ಬಂದಿ ಹನುಮಂತ ತಿಮ್ಮಣ್ಣವರ, ಮಂಜುನಾಥ ಹಾಗೂ ಮಂಜು ಮಾದರ ಹಸುವಿನ ಸುಲಭ ಹೆರಿಗೆಗೆ ಟೊಂಕ ಕಟ್ಟಿ ನಿಂತರು. ಸುತ್ತಲಿನ ಸ್ಥಳ ಸ್ವಚ್ಛಗೊಳಿಸಿದರು. ಅವರ ಕಲ್ಲೇಟಿಗೆ ಹಂದಿ, ನಾಯಿಗಳ ಹಿಂಡು ಸೆಕ್ಟರ್‌ನಿಂದಲೇ ಕಾಲ್ಕಿತ್ತರೆ, ಮುಂಗಸಿ ಮುಳ್ಳು ಕಂಠಿಗಳ ನಡುವೆ ಮರೆಯಾಯಿತು. ಸುರಕ್ಷೆಯ ಭಾವ ಮೂಡುತ್ತಿದ್ದಂತೆಯೇ ಮಂಡಿಯೂರಿದ ಹಸು ಪ್ರಸವ ವೇದನೆಯಿಂದ ಮುಕ್ತವಾಯಿತು.

ಆ ಅರ್ಧ ಗಂಟೆಯ ಅವಧಿಯನ್ನು ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ಕಾದರು. ಸುಖ ಪ್ರಸವದ ನಂತರ ಎಳೆಗರುವನ್ನು ನೆಕ್ಕಿ ಹಸು ಮಾತೃವಾತ್ಸಲ್ಯ ಮೆರೆಯಿತು. ಅಲ್ಲಿಯೇ ಪಕ್ಕದ ಮನೆಯವರಿಂದ ಹುರುಳಿಕಾಳು, ಬೆಲ್ಲ, ರೊಟ್ಟಿ, ದೋಸೆ ಪಡೆದು ತಿನ್ನಿಸಿದರು. ಬಿಸಿ ನೀರು ಕುಡಿಸಿದರು. ಎಲ್ಲಿಂದಲೂ ಒಂದು ಹಿಡಿ ಸೊಪ್ಪೆ (ಮೇವು) ತಂದು ತಿನ್ನಿಸಿದರು.  

ನಂತರ ಕರು ಎದ್ದು ನಿಂತು ಬಾಣಂತಿ ಸ್ವಲ್ಪ ಚೇತರಿಸಿಕೊಂಡಿತು. ಈ ಅವಧಿಯ ಸುಮಾರು ಮೂರು ತಾಸು ಬಿಸಿಲಿನಲ್ಲಿಯೇ ಕಾದು ನಿಂತರು. ನಂತರ ಟ್ರ್ಯಾಕ್ಟರ್‌ನಲ್ಲಿ ಕರು ಇಟ್ಟುಕೊಂಡು ಹಸುವಿನೊಂದಿಗೆ ಗೋಶಾಲೆಯತ್ತ ಸಾಗಿದರು. ಬಿಡಾಡಿ ದನಕ್ಕೆ ಸೂಲಗಿತ್ತಿಯಂತೆ ನೆರವಾದ ನಗರಸಭೆ ಸಿಬ್ಬಂದಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !