ದೇಶ ಕಟ್ಟುವಲ್ಲಿ ಮಹಿಳೆ ನಿರ್ಣಾಯಕ: ಸಂಸದ ಮುನಿಯಪ್ಪ

7
ಧಾರ್ಮಿಕ ಸಭೆ

ದೇಶ ಕಟ್ಟುವಲ್ಲಿ ಮಹಿಳೆ ನಿರ್ಣಾಯಕ: ಸಂಸದ ಮುನಿಯಪ್ಪ

Published:
Updated:
Deccan Herald

ಕೋಲಾರ: ‘ಸಮಾಜದಲ್ಲಿ ತಾಯಿಯ ಸ್ಥಾನ ಪವಿತ್ರವಾದದ್ದು. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವಲ್ಲಿ ಹಾಗೂ ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಇಲ್ಲಿನ ಕಾರಂಜಿಕಟ್ಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಎಲ್ಲಾ ವರ್ಗದ ಬಡವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಹೋಗುತ್ತಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಭಕ್ತರು ಕೊಟ್ಟ ಕಾಣಿಕೆಯಲ್ಲಿ ಬಡವರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಅವರು ಜಾತಿ, ಮತದ ಬೇಧವಿಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ಧರ್ಮೀಯರು ಮಹಾತ್ಮ ಗಾಂಧೀಜಿ ಜತೆ ಹೋರಾಡಿ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ತಂದುಕೊಟ್ಟರು. ಅಂಬೇಡ್ಕರ್ ಎಲ್ಲಾ ಧರ್ಮದವರು ಶಾಂತಿ, ಸೌಹಾರ್ದತೆಯಿಂದ ಒಟ್ಟಾಗಿ ಜೀವನ ನಡೆಸಬೇಕೆಂದು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದ್ದಾರೆ’ ಎಂದು ಹೇಳಿದರು.

ಬೆಲೆ ಕಟ್ಟಲಾಗದು: ‘ಮಕ್ಕಳನ್ನು ಹೆತ್ತು ಸಾಕಿ ಸನ್ಮಾರ್ಗದಲ್ಲಿ ನಡೆಸುವ ತಾಯಿಯ ಸೇವೆಗೆ ಬೆಲೆ ಕಟ್ಟಲಾಗದು. ದೇವರ ಸಮನಾದ ತಾಯಿಯ ಆಶೀರ್ವಾದ ಪಡೆದು ಮುನ್ನಡೆದರೆ ಬದುಕಿನ ಹಾದಿ ಸುಗಮವಾಗುತ್ತದೆ. ತಾಯಂದಿರು ತಮ್ಮ ಮಕ್ಕಳು ತಪ್ಪು ದಾರಿಗೆ ಹೋಗಲು ಬಿಡಬಾರದು. ಬುದ್ಧಿವಾದ ಹೇಳಿ ಮಕ್ಕಳನ್ನು ಸತ್ಪ್ರಜೆಗಳಾಗಿ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಪ್ರತಿ 2 ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಿದ್ದು, ಸಾವು–ನೋವು ಪ್ರಮಾಣ ಹೆಚ್ಚುತ್ತಿದೆ. ಅಪಘಾತದಲ್ಲಿ ಬೈಕ್‌ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಮಕ್ಕಳು ಹಠಕ್ಕೆ ಮಣಿದು ಬೈಕ್‌ ಕೊಡಿಸಿದರೆ ಮುಂದೆ ಅನಾಹುತವಾದರೆ ಹೆತ್ತವರು ಜೀವನವಿಡೀ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡದೆ ಮಕ್ಕಳಿಗೆ ಬುದ್ಧಿಮಾತು ಹೇಳಿ’ ಎಂದು ಸಲಹೆ ನೀಡಿದರು.

ಇಷ್ಟದ ದೇವತೆ: ‘ಲಕ್ಷ್ಮೀ ಎಲ್ಲರಿಗೂ ಇಷ್ಟದ ದೇವತೆ. ಲಕ್ಷ್ಮೀಯರಲ್ಲಿ ಮೂರು ಬಗೆಯಿದೆ. ಅಲಕ್ಷ್ಮೀ, ಲಕ್ಷ್ಮೀ ಹಾಗೂ ಮಹಾಲಕ್ಷ್ಮೀ. ಅಧರ್ಮದಿಂದ ಸಂಪಾದಿಸಿದ ಸಂಪತ್ತು ಅಲಕ್ಷ್ಮೀ, ಧರ್ಮ ಮತ್ತು ಅಧರ್ಮದಿಂದ ಸಂಪಾದಿಸಿದ ಸಂಪತ್ತು ಲಕ್ಷ್ಮೀ, ಧರ್ಮ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತು ಮಹಾಲಕ್ಷ್ಮೀ. ಗಂಡನ ಶ್ರೇಯೋಭಿವೃದ್ಧಿಗೆ ಪತ್ನಿ ಕಾರಣಳಾಗಿರುತ್ತಾಳೆ’ ಎಂದು ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಪತಿ ಭ್ರಷ್ಟಾಚಾರ, ಅಧರ್ಮದ ಹಾದಿಯಲ್ಲಿ ಸಂಪಾದಿಸಿದ ಸಂಪತ್ತಿನಲ್ಲಿ ಆಭರಣ ಮಾಡಿಸಿಕೊಂಡು ಸಂಭ್ರಮಿಸಿದರೆ ಅದು ಕ್ಷಣಿಕ. ಅಧರ್ಮದ ಮೂಲಕ ಸಂಪಾದಿಸಿದ ಸಂಪತ್ತನ್ನು ತಿರಸ್ಕರಿಸುವವರು ದಿಟ್ಟ ಮಹಿಳೆಯಾಗುತ್ತಾರೆ. ಪ್ರತಿಯೊಬ್ಬರೂ ಅಂತಹ ಮಹಿಳೆಯಾಗಬೇಕು’ ಎಂದು ಆಶಿಸಿದರು.

ಕೀಳರಿಮೆ ಬೇಡ: ‘ಹೆಣ್ಣಿನ ಬಗ್ಗೆ ಕೀಳರಿಮೆ ಬೇಡ. ಮಹಿಳೆಯೊಳಗೆ ಒಂದು ಶಕ್ತಿ ಇರುತ್ತದೆ. ಆ ಶಕ್ತಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮಹಿಳೆಯರು ಸ್ವಗೌರವ ಹೊಂದಬೇಕು ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ದೌರ್ಜನ್ಯ, ದಬ್ಬಾಳಿಕೆ ನಡೆದರೆ ಕಾನೂನಿನಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಮೂಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಜಿ.ಮಂಜುನಾಥ್, ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷ ಡಿ.ಮುನಿಯಪ್ಪ, ಉಪಾಧ್ಯಕ್ಷೆ ಅರುಣಾ, ಕೋಶಾಧಿಕಾರಿ ವಿಜಯಕುಮಾರ್, ಸದಸ್ಯರಾದ ನಾರಾಯಣಸ್ವಾಮಿ, ಬೆಟ್ಟಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಂಜುಂಡಪ್ಪ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !