ಜಿಲ್ಲೆಯಲ್ಲಿ ಇಂದು ಏಡ್ಸ್‌ ದಿನಾಚರಣೆ

7
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿಕೆ

ಜಿಲ್ಲೆಯಲ್ಲಿ ಇಂದು ಏಡ್ಸ್‌ ದಿನಾಚರಣೆ

Published:
Updated:
Deccan Herald

ಕೋಲಾರ: ‘ಎಚ್‌ಐವಿ ಸೋಂಕಿತರಿಗೆ ನೈತಿಕ ಬೆಂಬಲ ಸೂಚಿಸಲು ಮತ್ತು ಎಲ್ಲರೂ ಒಂದಾಗಿ ಏಡ್ಸ್ ವಿರುದ್ದ ಹೋರಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಡಿ.1ರಂದು ಜಗತ್ತಿನೆಲ್ಲೆಡೆ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ‘ನಿಮ್ಮ ಎಚ್‍ಐವಿ ಸ್ಥಿತಿ ತಿಳಿಯಿರಿ’ ಎಂಬುದು ಈ ವರ್ಷದ ಘೋಷವಾಕ್ಯ’ ಎಂದು ಹೇಳಿದರು.

‘ಏಡ್ಸ್ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಅತಿ ಹೆಚ್ಚು ಎಚ್‌ಐವಿ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸೇರಿದೆ. ಯುವಕ ಯುವತಿಯರು ಮತ್ತು ದುಡಿಯುವ ವಯೋಮಾನದ ವ್ಯಕ್ತಿಗಳು ಹಾಗೂ ಗರ್ಭಿಣಿಯರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ’ ಎಂದು ವಿವರಿಸಿದರು.

‘ಅಸುರಕ್ಷಿತ ಲೈಂಗಿಕ ಸಂಪರ್ಕ, ತಪಾಸಣೆ ಮಾಡದ ರಕ್ತ ಮತ್ತು ರಕ್ತದ ಉಪ ಪದಾರ್ಥಗಳು, ಸೋಂಕಿತ ತಾಯಿಯಿಂದ ಮಗುವಿಗೆ, ಸೋಂಕಿತ ಸೂಜಿ, ಸಿರಿಂಜ್‌ ಮತ್ತು ಶಸ್ತ್ರಚಿಕಿತ್ಸೆ ಉಪಕರಣಗಳಿಂದ ಏಡ್ಸ್‌ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ’ ಎಂದು ಮಾಹಿತಿ ನೀಡಿದರು.

21.17 ಲಕ್ಷ ಮಂದಿ: ‘ಭಾರತದಲ್ಲಿ ಸುಮಾರು 21.17 ಲಕ್ಷ ಮಂದಿ ಎಚ್‍ಐವಿ ಸೋಂಕಿತರಿದ್ದಾರೆ. ರಾಜ್ಯದಲ್ಲಿ 2.50 ಲಕ್ಷ ಮಂದಿ ಎಚ್‍ಐವಿ ಸೋಂಕಿತರಿದ್ದಾರೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಸಾಮಾನ್ಯ ಜನರಲ್ಲಿ ಎಚ್‍ಐವಿ ಪಾಸಿಟಿವ್ ಪ್ರಮಾಣ ಸದ್ಯ ಶೇ 0.85 ಮತ್ತು ಗರ್ಭಿಣಿಯರಲ್ಲಿ ಶೇ 0.06 ರಷ್ಟಿದೆ. ಜಿಲ್ಲೆಯಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 0.79 ಹಾಗೂ ಶೇ 0.09 ಇದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಹೇಳಿದರು.

‘ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ 2002ರ ಆಗಸ್ಟ್‌ನಲ್ಲಿ ಪ್ರಪ್ರಥಮ ಬಾರಿಗೆ ಸಮಗ್ರ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರ (ಐಸಿಟಿಸಿ) ಆರಂಭವಾಯಿತು. ಜಿಲ್ಲೆಯಲ್ಲಿ ಪ್ರಸ್ತುತ 11 ಐಸಿಟಿಸಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಾಲಯ ತಂತ್ರಜ್ಞರು ಸಾಮಾನ್ಯ ಪ್ರಕರಣಗಳಿಗೆ ಮತ್ತು ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ, ಎಚ್‌ಐವಿ ರಕ್ತ ಪರೀಕ್ಷೆ ಸೇವೆ ಒದಗಿಸುತ್ತಿದ್ದಾರೆ’ ಎಂದು ವಿವರಿಸಿದರು.

313 ಮಂದಿ ಸೋಂಕಿತರು: ‘ಜಿಲ್ಲೆಯಲ್ಲಿ 2018ರ ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದವರೆಗೆ 39,126 ಮಂದಿ ಸಾಮಾನ್ಯ ಜನರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ 313 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. 17,672 ಮಂದಿ ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, ಈ ಪೈಕಿ 16 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಾದ ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ಹಾಗೂ ಜಾಲಪ್ಪ ಆಸ್ಪತ್ರೆಯಲ್ಲಿ ಲಿಂಕ್ ಎಆರ್‌ಟಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಎಚ್‍ಐವಿ ಸೋಂಕು ತಾಯಿಯಿಂದ ಮಗುವಿಗೆ ಬರದಂತೆ ತಡೆಯಲು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾದ ತಕ್ಷಣವೇ ಎಆರ್‌ಟಿ ಚಿಕಿತ್ಸೆ ನೀಡಬೇಕು ಮತ್ತು ಹೆರಿಗೆ ನಂತರ ಮಗುವಿಗೆ 6 ವಾರ ಅಥವಾ 12 ವಾರಗಳು ನೆವರೆಪಿನ್ ದ್ರಾವಣ ನೀಡಬೇಕು’ ಎಂದು ಸಲಹೆ ನೀಡಿದರು.

1,490 ಸಾವು: ‘ಜಿಲ್ಲೆಯಲ್ಲಿ 2006ರಲ್ಲಿ ಎಆರ್‌ಟಿ ಕೇಂದ್ರ ಆರಂಭವಾದ ನಂತರ ಈವರೆಗೆ 8,331 ಪ್ರಕರಣ ದಾಖಲಾಗಿವೆ. ಈ ಪೈಕಿ 4,230 ಪುರುಷರು, 3,765 ಮಹಿಳೆಯರು, 155 ಗಂಡು ಮಕ್ಕಳು, 158 ಹೆಣ್ಣು ಮಕ್ಕಳು ಹಾಗೂ 23 ನಿರ್ಲಿಂಗಿಗಳು ಸೇರಿದ್ದಾರೆ. 1,145 ಪ್ರಕರಣಗಳು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ವರ್ಗಾವಣೆಗೊಂಡಿವೆ. ಪ್ರಸ್ತುತ 3,497 ಮಂದಿ ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,490 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿಜಯ್‌ಕುಮಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !