ಶನಿವಾರ, ಡಿಸೆಂಬರ್ 7, 2019
22 °C

ಪ್ರಾಮಾಣಿಕ ಕಾರ್ಯದಿಂದ ಗ್ರಾಮ ಸ್ವರಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಸ್ಥಳೀಯ ಸಂಸ್ಥೆಗಳ ಮಹಿಳಾ ಜನಪ್ರನಿಧಿಗಳು ಪಂಚಾಯತ್‌ರಾಜ್ ವ್ಯವಸ್ಥೆಯ ಅರಿವು ಪಡೆದುಕೊಂಡರೆ ಪಾರದರ್ಶಕವಾಗಿ ಆಡಳಿತ ನಡೆಸಬಹುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯದೇವಿ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಗಳ ಮಹಿಳಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಚುನಾಯಿತ ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಜ್ಞಾನ ಹೊಂದಿರಬೇಕು. ಯೋಜನೆಗಳ ಬಗ್ಗೆ ಸ್ಪಷ್ಟತೆ ಹೊಂದಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಪಂಚಾಯಿತಿ ವ್ಯವಸ್ಥೆಯ ಕಾರ್ಯ ನಿರ್ವಹಣೆ, ಆಡಳಿತ ವ್ಯವಸ್ಥೆ, ಹಣಕಾಸಿನ ಸಾಕ್ಷರತೆ, ಕಾನೂನು ಅರಿವು, ನಾಯಕತ್ವ, ಸಂವಹನ ವಿಷಯದ ಬಗ್ಗೆ ಕೌಶಲ ಮೂಡಿಸುವುದರ ಜತೆಗೆ ಸಾಮರ್ಥ್ಯ ಹೆಚ್ಚಿಸುವುದು ಈ ಶಿಬಿರದ ಮೂಲ ಉದ್ದೇಶ’ ಎಂದು ತಿಳಿಸಿದರು.

ಮೀಸಲಾತಿ ಕಲ್ಪಿಸಿದೆ: ‘ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವುದನ್ನು ಗಮನಿಸಿರುವ ಸರ್ಕಾರ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದೆ. ಜನಸಾಮಾನ್ಯರ ಕಷ್ಟಕ್ಕೆ ಧ್ವನಿಯಾಗುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿ ಪಂಚಾಯಿತಿಗಳ ಮೇಲಿದೆ. ದೇಶದ ಅಭಿವೃದ್ಧಿಯಲ್ಲಿ ಗ್ರಾ.ಪಂಗಳ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ನಿರ್ದೇಶಕ ಬಿ.ರಮಾಕಾಂತ್‌ ಯಾದವ್ ತಿಳಿಸಿದರು.

ಸಂಸ್ಥೆಯ ತರಬೇತುದಾರರಾದ ಕೆ.ವಿ.ವಿಜಯ್‌ಕುಮಾರ್, ಎನ್.ಗಿರೀಶ್‌ರೆಡ್ಡಿ, ನಾರಾಯಣಸ್ವಾಮಿ, ಚಲಪತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)