ಸೈಕಲ್ ವಿತರಣೆ: ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ

7
ಕೋಟೆ ಕೊಳ್ಳೆ ಹೊಡೆದು ದಿಡ್ಡಿ ಬಾಗಿಲು ಹಾಕಿದಂತೆ: ಪೋಷಕರ ಆಕ್ರೋಶ

ಸೈಕಲ್ ವಿತರಣೆ: ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ

Published:
Updated:
Deccan Herald

ಬಾಗಲಕೋಟೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ಆಧರಿಸಿ ಇಲಾಖೆ ಸುತ್ತೋಲೆ ಹೊರಡಿಸಿದರೂ, ಜಿಲ್ಲೆಯಲ್ಲಿ ಅದನ್ನು ಧಿಕ್ಕರಿಸಿರುವ ಅಧಿಕಾರಿಗಳು ಶಾಲೆಗಳಿಗೆ ತರಾತುರಿಯಲ್ಲಿ ಸೈಕಲ್ ವಿತರಣೆ ಮಾಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

’ಗುಣಮಟ್ಟ ಕಳಪೆ’ ಎಂಬ ಕೂಗು ಕೇಳಿ ಬಂದ ಕಾರಣ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕೂಡಲೇ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಅದರಂತೆ ನವೆಂಬರ್ 28ರಂದು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಸಿಎಂ ನಿರ್ದೇಶನ ಉಲ್ಲೇಖಿಸಿಯೇ ಆ ಪ್ರಕ್ರಿಯೆ ನಿಲ್ಲಿಸುವಂತೆ ತಿಳಿಸಿದ್ದಾರೆ.

‘ಸೈಕಲ್ ಪೂರೈಕೆ ಕಂಪೆನಿಯೊಂದಿಗೆ ಕೈಜೋಡಿಸಿರುವ ಅಧಿಕಾರಿಗಳು ಸರ್ಕಾರದ ಸುತ್ತೋಲೆಗೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಆಯುಕ್ತರಿಂದ ಆದೇಶ ಹೊರಬಿದ್ದ ನಂತರ ಶಾಲೆಗಳಿಗೆ ಸೈಕಲ್ ಪೂರೈಕೆ ಕಾರ್ಯ ಚುರುಕುಗೊಂಡಿದೆ. ಬೇಗನೇ ಮಕ್ಕಳಿಗೆ ತಲುಪಿಸುವಂತೆ ಮೌಖಿಕವಾಗಿ ನಮಗೂ ಸೂಚನೆ ನೀಡಿದ್ದಾರೆ’ ಎಂಬ ಮಾತು ಶಿಕ್ಷಕರಿಂದಲೇ ಕೇಳಿಬರುತ್ತಿದೆ.

ತಪ್ಪು ಮಾಹಿತಿ: ‘ಸಿಎಂ ಸೂಚನೆ ಕಾರಣ ಡಿಸೆಂಬರ್ 3ರಂದೇ ಸೈಕಲ್ ವಿತರಣೆ ನಿಲ್ಲಿಸಿದ್ದೇವೆ’ ಎಂದು ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಉಸ್ತುವಾರಿ ಹೊತ್ತಿರುವ ನೋಡಲ್ ಅಧಿಕಾರಿ ಮುಜಾವರ್ ಹೇಳುತ್ತಾರೆ. ಅಚ್ಚರಿಯೆಂದರೆ ಡಿಸೆಂಬರ್ 5ರಂದು ಬಾಗಲಕೋಟೆ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಸೈಕಲ್ ಪೂರೈಕೆ ಕಾರ್ಯ ನಡೆದಿದೆ.

‘ಮುಂಜಾನೆಯಿಂದ ನಾಲ್ಕು ವಾಹನಗಳಲ್ಲಿ 300 ಸೈಕಲ್‌ಗಳನ್ನು ಕಳುಹಿಸಿದ್ದೇವೆ’ ಎಂದು ನವನಗರದ ಸೆಕ್ಟರ್‌ ನಂ 13ರಲ್ಲಿರುವ ಆರ್‌ಎಂಎಸ್‌ಎ ಶಾಲಾ ಕಟ್ಟಡದಲ್ಲಿ ಸೈಕಲ್ ಜೋಡಣೆಯಲ್ಲಿ ತೊಡಗಿದ್ದ ಮೊಹಮದ್ ನವಾಯತ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಇದಕ್ಕೆ ಪೂರಕವಾಗಿ ಬಾಗಲಕೋಟೆಯ ಜಿಯುಎಚ್ಎಸ್ ಶಾಲೆಗೆ 34, ವಿದ್ಯಾಗಿರಿ ಸರ್ಕಾರಿ ಪ್ರೌಢಶಾಲೆಗೆ (ಜಿಎಚ್‌ಎಸ್) 20, ಅಂಜುಮನ್ ಶಾಲೆಗೆ 41, ಕೆಬಿಎಚ್‌ಪಿಎಸ್ ಶಾಲೆಗೆ 28, ಐದನೇ ನಂ ಶಾಲೆಗೆ 30 ಸೈಕಲ್‌ಗಳು ಬುಧವಾರ ಪೂರೈಕೆಯಾಗಿವೆ. ತಾಲ್ಲೂಕಿನ ಕಡ್ಲಿಮಟ್ಟಿಯ ಸಿದ್ದರಾಮೇಶ್ವರ ಶಾಲೆಗೆ 21, ಶಾಸಕರ ಮಾದರಿ ಶಾಲೆಗೆ (ನಂ 4) 28 ಸೈಕಲ್‌ಗಳನ್ನು ಪೂರೈಸಲಾಗಿದೆ. ಡಿಸೆಂಬರ್ 6 ರಂದು ಚಿಕ್ಕಮ್ಯಾಗೇರಿ, ಛಬ್ಬಿ, ಗದ್ದನಕೇರಿ ಎಲ್‌ಟಿ, ಅಂಕಲಗಿ, ವೀರಾಪುರ, ಗುಂಡನಪಲ್ಲಿ, ಉದಗಟ್ಟಿ, ಹವೇಲಿ, ಮಲ್ಲಾಪುರ, ಗೋವಿಂದಕೊಪ್ಪ, ತಿಮ್ಮಾಪುರ ಶಾಲೆಗಳಿಗೆ ಸೈಕಲ್ ಪೂರೈಕೆ ಮಾಡಲಾಗಿದೆ.

ಕೋಟೆ ಕೊಳ್ಳೆ ನಂತರ ದಿಡ್ಡಿ ಬಾಗಿಲು: ಸರ್ಕಾರ ನವೆಂಬರ್ 28ರಂದೇ ಸೈಕಲ್ ವಿತರಣೆ ಸ್ಥಗಿತಗೊಳಿಸಲು ಆದೇಶಿಸಿದೆ. ಆದರೂ ಡಿಸೆಂಬರ್ 3ರವರೆಗೆ ಆ ಪ್ರಕ್ರಿಯೆ ನಡೆದಿದ್ದೇಕೆ ಎಂದು ಪ್ರಶ್ನಿಸಿದರೆ, ‘ಬಿಇಒಗಳ ಸಭೆ ಕರೆದು ಅವರಿಗೆ ಸೂಚನೆ ನೀಡುವ ವೇಳೆಗೆ ಅಷ್ಟು ತಡವಾಯಿತು’ ಎಂದು ಮುಜಾವರ್ ಸಮಜಾಯಿಷಿ ನೀಡುತ್ತಾರೆ.

ಸರ್ಕಾರಿ ಆದೇಶಗಳ ತುರ್ತು ಜಾರಿ ಇದ್ದರೆ ಈಗ ವಾಟ್ಸಪ್‌ ಮೂಲಕವೇ ಕಳಿಸಲಾಗುತ್ತದೆ. ಜೊತೆಗೆ ಆಂತರಿಕವಾಗಿ ಅಧಿಕಾರಿಗಳ ವಾಟ್ಸಪ್‌ ಗ್ರೂಪ್‌ನಲ್ಲೂ ಅದರ ಪ್ರತಿ ಹಾಕಲಾಗುತ್ತದೆ. ಆದರೆ ಇಲ್ಲಿ ಐದು ದಿನ ವಿಳಂವಾಗಿದ್ದೇಕೆ. ಬಾಕಿ ಉಳಿದಿದ್ದ ಸೈಕಲ್‌ಗಳನ್ನು ಈ ಅವಧಿಯಲ್ಲಿ ಮಕ್ಕಳಿಗೆ ತಲುಪಿಸಲಾಯಿತೇ ಎಂಬುದು ಪ್ರಶ್ನೆಯಾಗಿದೆ.

ಬಹುತೇಕ ಪೂರ್ಣ: ಈ ವರ್ಷ ಜಿಲ್ಲೆಯಲ್ಲಿ 25,344 ಮಕ್ಕಳಿಗೆ ಸೈಕಲ್ ವಿತರಿಸಬೇಕಿದ್ದು, ಅದರಲ್ಲಿ ಈಗಾಗಲೇ 23,928 ಮಕ್ಕಳಿಗೆ ವಿತರಣೆ ಪೂರ್ಣಗೊಳಿಸಲಾಗಿದೆ. ಬಾಗಲಕೋಟೆ ತಾಲ್ಲೂಕಿನಲ್ಲಿ 616 ಹಾಗೂ ಹುನಗುಂದದಲ್ಲಿ 800 ಸೈಕಲ್‌ಗಳ ವಿತರಣೆ ಮಾತ್ರ ಬಾಕಿ ಇದೆ. ಶೇ 99ರಷ್ಟು ಸಾಧನೆಯಾಗಿದೆ. ‘ಇದು ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತಾಗಿದೆ. ಮುಖ್ಯಮಂತ್ರಿ ಸೂಚನೆ ಕೂಡ ಕಣ್ಣೊರೆಸುವ ತಂತ್ರ. ಎಲ್ಲಾ ಮುಗಿದ ಮೇಲೆ ಆದೇಶ ಜಾರಿ ಮಾಡಿದ್ದಾರೆ’ ಎಂದು ನಗರದ ಶಾಲೆಯೊಂದರ ಪೋಷಕರು ಆರೋಪಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !